ಉಡುಪಿ: ರಾಜ್ಯ ಸರ್ಕಾರದ ಖಾತೆ ಹಂಚಿಕೆ ಬಿಕ್ಕಟ್ಟು ಬಗೆಹರಿಯೋ ಸೂಚನೆ ಕಾಣದೆ ಇಬ್ಬರು ಸಚಿವರು ರಾಜೀನಾಮೆ ಕೊಡಲು ಮುಂದಾಗಿದ್ದಾರೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಕಂದಾಯ ಸಚಿವ ಆರ್ ಅಶೋಕ್ ಇಂದು ರಾತ್ರಿ ಬೆಂಗಳೂರಿಗೆ ಬರಲಿದ್ದಾರೆ.
Advertisement
ಉಡುಪಿಯಲ್ಲಿ ಮಾಧ್ಯಮದವರೊಂದಿಗೆ ಮಾತಾನಾಡಿದ ಆರ್ ಅಶೋಕ್ ಖಾತೆ ಮರು ಹಂಚಿಕೆ ವಿಚಾರದಲ್ಲಿ ಸಣ್ಣ ಗೊಂದಲವಿರುವುದು ನಿಜ. ಬಿಕ್ಕಟ್ಟು ಪರಿಹಾರಕ್ಕೆ ಮುಖ್ಯಮಂತ್ರಿಗಳಿಂದ ಕರೆ ಬಂದಿದೆ ಎಂದು ಪ್ರತಿಕ್ರಿಯಿಸಿದ್ದಾರೆ.
Advertisement
ಸಿಎಂ ತುರ್ತಾಗಿ ಬೆಂಗಳೂರಿಗೆ ಬರಲು ಹೇಳಿದ್ದಾರೆ. ಸಚಿವ ಬಸವರಾಜ ಬೊಮ್ಮಾಯಿ ಅವರಿಗೂ ಈ ಬಗ್ಗೆ ಕರೆ ಮಾಡಿದ್ದೇನೆ. ಇಂದು ರಾತ್ರಿ ಬೆಂಗಳೂರಿಗೆ ತೆರಳಿ ಬಿಕ್ಕಟ್ಟು ಪರಿಹರಿಸಲು ಪ್ರಯತ್ನಿಸುತ್ತೇನೆ ಎಂದರು.
Advertisement
Advertisement
ಆನಂದ್ ಸಿಂಗ್ ಅವರಿಗೆ ಕರೆ ಮಾಡಿದ್ದೆ, ಅವರ ಸಂಪರ್ಕ ಸಾಧ್ಯವಾಗಿಲ್ಲ. ಶಾಸಕ ರಾಜೇಗೌಡ ಮತ್ತು ಎಂಟಿಬಿ ನಾಗರಾಜ್ ಜೊತೆ ಮಾತನಾಡಿದ್ದೇನೆ. ದುಡುಕಿ ಯಾವುದೇ ತಪ್ಪು ನಿರ್ಧಾರ ಕೈಗೊಳ್ಳಬೇಡಿ ಎಂದು ಹೇಳಿದ್ದೇನೆ. ಬೆಂಗಳೂರು ತಲುಪಿದ ನಂತರ ಎಲ್ಲರ ಜೊತೆ ಸೇರಿ ಮಾತನಾಡುತ್ತೇನೆ. ಎಲ್ಲ ಗೊಂದಲಗಳು ಮೊನ್ನೆಯೇ ಬಗೆಹರಿದಿತ್ತು. ಹೊಸದಾಗಿ ಖಾತೆ ಬದಲಾವಣೆಯಾದ ಕಾರಣ ಮತ್ತೆ ಗೊಂದಲ ಉಂಟಾಗಿದೆ. ರಾಜಕೀಯದಲ್ಲಿ ಇದೆಲ್ಲಾ ಸರ್ವೇ ಸಾಮಾನ್ಯ. ಅಸಮಾಧಾನ, ಖಾತೆ ಕ್ಯಾತೆ ಇದೆಲ್ಲ ಇದ್ದಿದ್ದೆ. ಮುಖ್ಯಮಂತ್ರಿಗಳು ಇದೆಲ್ಲವನ್ನು ಎದುರಿಸಲು ಸಮರ್ಥರಿದ್ದಾರೆ, ನಾವೆಲ್ಲ ಅವರ ಜೊತೆಗಿದ್ದೇವೆ ಎಂದು ತಿಳಿಸಿದರು.
ರಾಜ್ಯದಲ್ಲಿ ಬಿಜೆಪಿ-ಕಾಂಗ್ರೆಸ್ ಮೈತ್ರಿ ಎಂಬ ಡಿಕೆಶಿ ವ್ಯಂಗ್ಯಕ್ಕೆ ಪ್ರತಿಕ್ರಿಯಿಸಿದ ಸಚಿವ ಆರ್. ಅಶೋಕ್, ಡಿ.ಕೆ. ಶಿವಕುಮಾರ್ ಇನ್ನೂ ಹಳೆ ಮೈತ್ರಿಯ ಗುಂಗಿನಲ್ಲಿಯೇ ಇದ್ದಾರೆ. ಕುಮಾರಸ್ವಾಮಿಗೆ ಬೆನ್ನಿಗೆ ಚೂರಿ ಹಾಕಿದ ಅನುಭವ ಇನ್ನೂ ಹಾಗೆ ಇದೆ. ಕಾಂಗ್ರೆಸ್‍ನಿಂದ ಹಲವು ಕಾರಣಗಳಿಂದ ಬೇಸರಗೊಂಡು ಕೆಲವರು ನಮ್ಮ ಜೊತೆ ಬಂದಿದ್ದಾರೆ. ಬಂದವರಿಗೆ ಕಾಂಗ್ರೆಸ್‍ನಲ್ಲಿ ಯಾವುದೇ ದೊಡ್ಡ ಪದವಿ ಇರಲಿಲ್ಲ, ಆ ಸರ್ಕಾರದಲ್ಲಿ ಅವರಿಗೆ ಸಿಕ್ಕಿದ ಖಾತೆಗಳ ಬಗ್ಗೆ ತೃಪ್ತಿ ಇರಲಿಲ್ಲ. ಜಾರಕಿಹೊಳಿ ಅವರಿಗೆ ಕಾಂಗ್ರೆಸ್ ಸರಕಾರ ಪೌರಾಡಳಿತ ಖಾತೆ ಕೊಟ್ಟಿತ್ತು, ಡಿಕೆ ಶಿವಕುಮಾರ್ ನಿಭಾಯಿಸಿದ್ದ ಪವರ್ ಫುಲ್ ಜಲಸಂಪನ್ಮೂಲ ಖಾತೆಯನ್ನು ನಾವು ಇದೀಗ ಜಾರಕಿಹೊಳಿಗೆ ನೀಡಿದ್ದೇವೆ ಎಂದು ಕಾಂಗ್ರೆಸ್ ಪಕ್ಷವನ್ನು ಕುಟುಕಿದರು.
ಕಾಂಗ್ರೆಸ್‍ನಿಂದ ಬಿಜೆಪಿಗೆ ಬಂದ ಎಲ್ಲರಿಗೂ ನಮ್ಮ ಸರ್ಕಾರದಲ್ಲಿ ಉತ್ತಮ ಖಾತೆಗಳನ್ನು ನೀಡಿದ್ದೇವೆ. ಡಿ.ಕೆ ಶಿವಕುಮಾರ್ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡು ಅತಿಹೆಚ್ಚು ಲಾಭ ಪಡೆದುಕೊಂಡಿದ್ದಾರೆ. ರಾಜ್ಯದಲ್ಲಿ ಇನ್ನೂ ಕನಸಲ್ಲಿಯೂ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ ಎಂದು ಆರ್ ಅಶೋಕ್ ಭವಿಷ್ಯ ನುಡಿದರು.