ಚಾಮರಾಜನಗರ: ಉದ್ಯಮಿಯೊಬ್ಬರು ಕಳೆದ 15 ದಿನಗಳಿಂದ ನಿತ್ಯ 600ಕ್ಕೂ ಹೆಚ್ಚು ಮಂದಿಯ ಹೊಟ್ಟೆ ತುಂಬಿಸುತಿದ್ದಾರೆ.
ತಾಲೂಕಿನ ಹೊನ್ನಳ್ಳಿ ಗ್ರಾಮದ ಉದ್ಯಮಿ ವೃಷಬೇಂದ್ರಪ್ಪ ಹಸಿದವರ ನೆರವಿಗೆ ಧಾವಿಸಿದ್ದು, ಪ್ರತಿನಿತ್ಯ ತಾವೇ ನಿಂತು ಆಹಾರ ತಯಾರಿಸಿ ಪ್ಯಾಕೆಟ್ ಮಾಡಿ, ಆಹಾರದ ಪ್ಯಾಕೆಟ್ ಹಾಗೂ ನೀರಿನ ಬಾಟಲ್ ವಿತರಣೆ ಮಾಡುತ್ತಿದ್ದಾರೆ. ಜಿಲ್ಲಾಸ್ಪತ್ರೆಗೆ ಬರುವ ಕೊರೊನಾ ರೋಗಿಗಳ ಸಂಬಂಧಿಕರು, ನಾನ್ ಕೋವಿಡ್ ರೋಗಿಗಳು, ಬಡವರು ಮಧ್ಯಾಹ್ನದ ಊಟ ಸಿಗದೆ ಹಸಿವಿನಿಂದ ಬಳಲುತ್ತಿದ್ದರು. ಲಾಕ್‍ಡೌನ್ ಹಿನ್ನೆಲೆ ಹೋಟೆಲ್ ಗಳು ಮುಚ್ಚಿ ಮಧ್ಯಾಹ್ನದ ಊಟ ಸಿಗದೆ ಪರದಾಡುತ್ತಿದ್ದ ಜನರಿಗೆ ಊಟ ವಿತರಿಸುತ್ತಿದ್ದಾರೆ.
ತಾವೇ ಅಂಗಡಿಯಿಂದ ದಿನಸಿ ತರುವ ವೃಷಬೇಂದ್ರಪ್ಪ, ಖುದ್ದು ತಾವೇ ನಿಂತು ತಯಾರಿಸಿದ ಆಹಾರದ ಪ್ಯಾಕೆಟ್ ಹಾಗೂ ನೀರಿನ ಬಾಟಲಿಗಳನ್ನು ವಾಹನಕ್ಕೆ ತುಂಬಿಕೊಂಡು ಹಸಿದವರಿಗೆ ಹಂಚುತ್ತಾರೆ. ಜಿಲ್ಲಾಸ್ಪತ್ರೆ ಮುಂದೆ ವಾಹನ ನಿಲ್ಲಿಸಿ ಹಸಿದು ಬರುವವರ ಹೊಟ್ಟೆ ತುಂಬಿಸುತ್ತಿದ್ದಾರೆ. ಇವರ ಕಾರ್ಯಕ್ಕೆ ಸ್ನೇಹಿತರೂ ಸಾಥ್ ಕೊಟ್ಟಿದ್ದಾರೆ.
ಎಲ್ಲವನ್ನೂ ಸರ್ಕಾರವೇ ಮಾಡಲಿ ಎಂದು ಕೂರುವುದು ಸರಿಯಲ್ಲ. ಮನುಷ್ಯರಾದ ನಾವು ಸಹ ಜವಾಬ್ದಾರಿ ಹೊರಬೇಕು. ದೇವರು ನನಗೆ ಕೊಟ್ಟಿದ್ದಾನೆ, ಆದರಿಂದ ಹಸಿದವರಿಗೆ ನೆರವಾಗಬೇಕು ಎಂಬುದು ನನ್ನ ಉದ್ದೇಶ. ಲಾಕ್‍ಡೌನ್ ಜಾರಿಯಲ್ಲಿರುವ ತನಕ ಈ ಸೇವೆ ಮುಂದುವರಿಸುತ್ತೇನೆ ಎಂದು ವೃಷಬೇಂದ್ರಪ್ಪ ಹೇಳಿದ್ದಾರೆ.