ಈಶ್ವರಪ್ಪ ರಾಜೀನಾಮೆಗೆ ಬಿಎಸ್‍ವೈ ಆಪ್ತ ಶಾಸಕರ ಪಟ್ಟು

Public TV
3 Min Read
bsy eshwarappa 1 web

– ಬಿಎಸ್‍ವೈಯನ್ನು ಭೇಟಿಯಾದ 7 ಶಾಸಕರು
– ಸರ್ಕಾರದ ವಿರುದ್ಧ ಹೇಳಿಕೆ ನೀಡುವುದು ಎಷ್ಟು ಸರಿ?

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಮತ್ತು ರಾಜ್ಯಪಾಲ ವಿ.ಆರ್.ವಾಲಾ ಅವರಿಗೆ ಪತ್ರ ಬರೆದ ಬೆನ್ನಲ್ಲೇ ಸಚಿವ ಈಶ್ವರಪ್ಪ ರಾಜೀನಾಮೆಗೆ ಬಿಎಸ್‍ವೈ ಆಪ್ತ ಶಾಸಕರು ಆಗ್ರಹಿಸಿದ್ದಾರೆ.

ಬಿಎಸ್ ಯಡಿಯೂರಪ್ಪ ಮತ್ತು ಈಶ್ವರಪ್ಪ ಅವರ ಮಧ್ಯೆ ನಡೆಯುತ್ತಿದ್ದ ಶೀತಲ ಸಮರ ಈಗ ಸ್ಫೋಟಗೊಂಡಿದೆ. ಗ್ರಾಮೀಣಾಭಿವೃದ್ಧಿ ಸಚಿವರಾಗಿರುವ ಈಶ್ವರಪ್ಪ ಬರೆದಿರುವ ಪತ್ರ ಬೆಳಕಿಗೆ ಬಂದ ಬೆನ್ನಲ್ಲೇ ಇಲ್ಲಿಯವರೆಗೆ ತೆರೆ ಹಿಂದೆ ನಡೆಯುತ್ತಿದ್ದ ಕಿತ್ತಾಟ ಈಗ ಬಹಿರಂಗವಾಗಿದೆ.

ಸಿಎಂ ಆಪ್ತ ಶಾಸಕರಾದ ರೇಣುಕಾಚಾರ್ಯ, ಮಾಡಾಳ್ ವಿರೂಪಾಕ್ಷಪ್ಪ, ಅರುಣ್ ಕುಮಾರ್ ಪೂಜಾರ್, ಮಹದೇವಪ್ಪ ಯಾದವಾಡ, ಮಹೇಶ್ ಕುಮಟಹಳ್ಳಿ, ಪರಣ್ಣ ಮುನವಳ್ಳಿ, ದಿನಕರ್ ಶೆಟ್ಟಿ ಇಂದು ಬೆಳಗ್ಗೆ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಯಡಿಯೂರಪ್ಪನವರನ್ನು ಭೇಟಿ ಮಾಡಿ ಮಾತುಕತೆ ನಡೆದಿದ್ದಾರೆ. ಈ ವೇಳೆ ಬಿಜೆಪಿ ಸರ್ಕಾರದಲ್ಲಿ ಮಂತ್ರಿಯಾಗಿ ತಮ್ಮದೇ ಸರ್ಕಾರವನ್ನು ಪ್ರಶ್ನಿಸುವುದು ಎಷ್ಟು ಸರಿ ಎಂದು ಕೇಳಿದ್ದಾರೆ. ಅಷ್ಟೇ ಅಲ್ಲದೇ ಕೂಡಲೇ ಅವರ ರಾಜೀನಾಮೆಯನ್ನು ಪಡೆಯಬೇಕು ಎಂದು ಸಿಎಂಗೆ ಒತ್ತಾಯಿಸಿದ್ದಾರೆ.

BSY ESHWARAPPA copy

ಸಭೆಯಲ್ಲಿ ಸಹಿ ಸಂಗ್ರಹ: ಕೆಲ ದಿನಗಳ ಹಿಂದೆ ಸಿಎಂ ಸಹಿ ಹಾಕಿದ್ರೂ ಈಶ್ವರಪ್ಪ ಅನುದಾನ ಬಿಡುಗಡೆ ಮಾಡುತ್ತಿಲ್ಲ ಎಂದು ರೇಣುಕಾಚಾರ್ಯ ದೂರು ನೀಡಿದ್ದರು. ರೇಣುಕಾಚಾರ್ಯ ನೇತೃತ್ವದ ದೂರಿನ ಮೇರೆಗೆ ಯಡಿಯೂರಪ್ಪ ಮಾರ್ಚ್ 18 ರಂದು ಸಭೆ ಕರೆದಿದ್ದರು. ಈ ಸಭೆಯ ಬಳಿಕ ಒಟ್ಟು 48 ಜನರ ಸಹಿ ಸಂಗ್ರಹವಾಗಿದ್ದು, ಇದೇ ಸಹಿ ಸಂಗ್ರಹವನ್ನು ಹೈಕಮಾಂಡ್‍ಗೆ ಕಳುಹಿಸಲು ಯಡಿಯೂರಪ್ಪ ಬಣ ಮುಂದಾಗಿತ್ತು. ಈ ಸಭೆಯ ಬಳಿಕ ಇಬ್ಬರ ನಡುವೆ ನಡೆಯುತ್ತಿದ್ದ ಶೀತಲ ಸಮರ ಜೋರಾಗಿ ಈಗ ಸ್ಫೋಟಗೊಂಡಿದೆ.

ಸಿಎಂ ಭೇಟಿಯಾದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ರೇಣುಕಾಚಾರ್ಯ, ಗ್ರಾಮೀಣಾಭಿವೃದ್ಧಿ ಸಚಿವರು ಹಿರಿಯರಾಗಿರುವ ಈಶ್ವರಪ್ಪ ಅರ್ಥ ಮಾಡಿಕೊಳ್ಳಬೇಕು. ರಾಜ್ಯಪಾಲರಿಗೆ ದೂರು ಕೊಡುವುದು ಎಷ್ಟರಮಟ್ಟಿಗೆ ಸರಿ? ಸರ್ಕಾರದ ವಿರುದ್ಧ ಹೇಳಿಕೆಗಳನ್ನ ಕೊಡುವುದು ಸರಿ ಅಲ್ಲ ಎಂದು ಹೇಳಿದರು.

karnataka budget CM Yediyurappa 3

ಜೆಪಿ ನಡ್ಡಾ, ಅಮಿತ್ ಶಾ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ದಾಖಲೆಯನ್ನು ಬಿಡುಗಡೆ ಮಾಡುತ್ತೇವೆ. ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಬೇಕಾಬಿಟ್ಟಿ ಈ ಹಿಂದೆ ಬಿಡುಗಡೆ ಮಾಡಿದ್ದು ಇದನ್ನು ಪ್ರಶ್ನೆ ಮಾಡುತ್ತೇವೆ. ಮರಿಸ್ವಾಮಿ ಮನೆಗೆ ಹಣ ಬಿಡುಗಡೆ ಮಾಡಿಲ್ಲ. ಬೆಂಗಳೂರು ಜಿಲ್ಲಾ ಪಂಚಾಯತ್‍ಗೆ ಹಣ ಬಿಡುಗಡೆ ಮಾಡಲಾಗಿದೆ ಎಂದು ಈಶ್ವರಪ್ಪ ಆರೋಪಕ್ಕೆ ತಿರುಗೇಟು ನೀಡಿ ಸಿಎಂ ನಿರ್ಧಾರವನ್ನು ಸಮರ್ಥಿಸಿಕೊಂಡರು.

ಯಾರಿಗೆಲ್ಲ ದೂರು?
ಲಿಖಿತ ರೂಪದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯಾಧ್ಯಕ್ಷ ಜೆ.ಪಿ.ನಡ್ಡಾ, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‍ಸಿಂಗ್, ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿಗೆ ಈಶ್ವರಪ್ಪ 2 ಪುಟಗಳ ಪತ್ರ ಬರೆದಿದ್ದಾರೆ. ಜೊತೆಗೆ ಬುಧವಾರ ಮಧ್ಯಾಹ್ನ ರಾಜ್ಯಪಾಲರನ್ನೂ ಭೇಟಿಯಾಗಿ ಈಶ್ವರಪ್ಪ ದೂರು ಕೊಟ್ಟಿದ್ದಾರೆ.

ಆರ್ಥಿಕ ಇಲಾಖೆ ಮುಖ್ಯಮಂತ್ರಿಗಳ ಬಳಿಯೇ ಇದೆ. ಆದರೆ ಗ್ರಾಮೀಣಾಭಿವೃದ್ಧಿ ಇಲಾಖೆಯ ಮಹತ್ವದ ಯೋಜನೆಗಳಿಗೆ ಒಪ್ಪಿಗೆ ನೀಡುತ್ತಿಲ್ಲ. ಬದಲಿಗೆ ನಮ್ಮ ಗಮನಕ್ಕೆ ತರದೇ ಬೇರೆ ಶಾಸಕರಿಗೆ ಅನುದಾನ ರಿಲೀಸ್ ಮಾಡಿದ್ದಾರೆ ಎಂದು ದೂರಿದ್ದಾರೆ.

ಆರೋಪಗಳು ಏನು?
1. ಗ್ರಾಮೀಣ ಸುಮಾರ್ಗ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ಕೊಟ್ಟಿಲ್ಲ.
2. 32 ಬಿಜೆಪಿ ಶಾಸಕರಿಗೆ ತಲಾ 20ರಿಂದ 23 ಕೋಟಿ, 42 ಬಿಜೆಪಿ ಶಾಸಕರಿಗೆ ತಲಾ 10 ಕೋಟಿ ರೂ. ಬಿಡುಗಡೆಗೆ ಸೂಚನೆ.
3. ಕಾಂಗ್ರೆಸ್‍ನ 30 ಶಾಸಕರಿಗೆ 5 ಕೋಟಿ ರೂ. ಜೆಡಿಎಸ್‍ನ 18 ಶಾಸಕರಿಗೆ ತಲಾ 5 ಕೋಟಿ ರೂ. ಬಿಡುಗಡೆಗೆ ಆದೇಶ.
4: ಬಿಎಸ್‍ವೈ ಬೀಗರೂ ಆಗಿರುವ ಬೆಂಗಳೂರು ನಗರ ಜಿ.ಪಂ ಅಧ್ಯಕ್ಷ ಮರಿಸ್ವಾಮಿ ಪ್ರತಿನಿಧಿಸುವ ದಾಸರಹಳ್ಳಿ ಜಿ.ಪಂ.ಗೆ 65 ಕೋಟಿ ರೂ. ಅನುದಾನ.
5. ಜಿ.ಪಂ.ಗಳಿಗೆ 2019-20ರಲ್ಲಿ 1 ಅಥವಾ 2 ಕೋಟಿ ಅನುದಾನ ಬಿಡುಗಡೆಗೆಯಾಗಿತ್ತು. ಆದರೆ ಈಗ ದಾಸರಹಳ್ಳಿ ಜಿ.ಪಂ.ಗೆ ಇಷ್ಟೊಂದು ದೊಡ್ಡ ಅನುದಾನ ಬಿಡುಗಡೆಯಾಗಿದೆ.
6. ತಮ್ಮ ಇಲಾಖೆಗೆ ನೀಡಿದ ಅನುದಾನದಲ್ಲಿ, ತಮ್ಮ ಗಮನಕ್ಕೆ ಬಾರದೇ ಅನುದಾನ ಹಂಚಿಕೆ.

ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ನಮ್ಮ ಕ್ಷೇತ್ರದ ಕೆಲಸಗಳು ಆಗುತ್ತಿಲ್ಲ. ಸಚಿವ ಈಶ್ವರಪ್ಪ ಅವರು ಅನುದಾನಗಳನ್ನು ಬಿಡುಗಡೆ ಮಾಡದೇ ಎಲ್ಲದಕ್ಕೂ ಕೊಕ್ಕೆ ಹಾಕ್ತಿದ್ದಾರೆ ಎಂದು ಬಜೆಟ್ ಅಧಿವೇಶನದ ಹೊತ್ತಲ್ಲಿ ಸುಮಾರು 40ಕ್ಕೂ ಹೆಚ್ಚು ಶಾಸಕರು ಮುಖ್ಯಮಂತ್ರಿ ಯಡಿಯೂರಪ್ಪಗೆ ದೂರಿದ್ದರು. ಶಾಸಕರ ದೂರು ಆಲಿಸಿದ್ದ ಸಿಎಂ ಬಿಎಸ್‍ವೈ, ಎರಡು ದಿನಗಳ ಬಳಿಕ ವಿಧಾನಸೌಧದಲ್ಲಿ ಸಚಿವರು, ಇಲಾಖೆಯ ಅಧಿಕಾರಿಗಳ ಸಭೆ ನಡೆಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *