– ಕರ್ಫ್ಯೂ, ಲಾಕ್‍ಡೌನ್ ಬಂದ್ರೂ ಪ್ರತಿಭಟನೆ ನಿಲ್ಲಲ್ಲ
ನವದೆಹಲಿ: ಕೊರೊನಾ ನಿಯಂತ್ರಣಕ್ಕಾಗಿ ಸರ್ಕಾರ ಕರ್ಫ್ಯೂ, ಲಾಕ್‍ಡೌನ್ ತಂದರೂ ರೈತರ ಪ್ರತಿಭಟನೆ ಮುಂದುವರಿಯಲಿದೆ. ಇದು ಶಾಹೀನ್ ಬಾಗ್ ಅಲ್ಲ, ರೈತರ ಆಂದೋಲನ ಎಂದು ಕೇಂದ್ರ ಸರ್ಕಾರಕ್ಕೆ ಭಾರತೀಯ ಕಿಸಾನ್ ಯೂನಿಯನ್ ನಾಯಕ ರಾಕೇಶ್ ಟಿಕಾಯತ್ ಸಂದೇಶ ರವಾನಿಸಿದ್ದಾರೆ.
ಸಹಾರನುಪುರದಲ್ಲಿ ರೈತರನ್ನ ಉದ್ದೇಶಿಸಿ ಮಾತನಾಡಿದ ರಾಕೇಶ್ ಟಿಕಾಯತ್, ದೇಶದಲ್ಲಿ ರೈತರ ಆಂದೋಲನ ನಿರಂತರವಾಗಿರಲಿದೆ. ನವೆಂಬರ್-ಡಿಸೆಂಬರ್ ವರೆಗೂ ಧರಣಿ ನಡೆಯಲಿದೆ ಎಂದು ತಿಳಿಸಿದರು. ಕೊರೊನಾ ಹೆಸರಿನಲ್ಲಿ ರೈತರನ್ನ ಹೆದರಿಸೋದನ್ನ ನಿಲ್ಲಿಸಿ. ಕರ್ಫ್ಯೂ, ಲಾಕ್‍ಡೌನ್ ಹೆಸರಿನ ಮೂಲಕ ರೈತರ ಆಂದೋಲನವನ್ನ ವಿಫಲಗೊಳಿಸುವ ವ್ಯರ್ಥ ಪ್ರಯತ್ನಕ್ಕೆ ಮುಂದಾಗಬೇಡಿ ಎಂದು ಆಕ್ರೋಶ ಹೊರ ಹಾಕಿದರು.
ಇದೇ ವೇಳೆ ಸಹರಾನಪುರದ ಹುತಾತ್ಮ ಭಗತ್ ಸಿಂಗ್ ಅವರ ಸಂಬಂಧಿ ಕಿರಣ್‍ಜಿತ್ ಸಿಂಗ್ ಪುತ್ರಿಯ ಮದುವೆ ಸಮಾರಂಭದಲ್ಲಿ ಭಾಗಿಯಾದರು. ಅಲ್ಲಿಂದ ನೇರವಾಗಿ ಹಿಮಾಚಲ ಪ್ರದೇಶಕ್ಕೆ ತೆರಳಿ ರೈತರನ್ನ ಭೇಟಿಯಾಗಲಿದ್ದಾರೆ. ತದನಂತರ ಬಿಹಾರದಲ್ಲಿ ಕಿಸಾನ್ ಪಂಚಾಯ್ತನಲ್ಲಿ ಭಾಗಿಯಾಗಿ ರೈತರನ್ನ ಉದ್ದೇಶಿಸಿ ಮಾತನಾಡಲಿದ್ದಾರೆ.
2019 ಸೆಪ್ಟೆಂಬರ್ ನಿಂದ ಕೇಂದ್ರ ಸರ್ಕಾರ ನೂತನ ಕೃಷಿ ಕಾನೂನುಗಳನ್ನ ವಿರೋಧಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಸೆಪ್ಟೆಂಬರ್ 26ರಿಂದ ದೆಹಲಿ ಗಡಿ ಭಾಗಗಳಲ್ಲಿಯೇ ವಾಸ್ತವ್ಯ ಹೂಡಿರುವ ಅಪಾರ ಸಂಖ್ಯೆಯ ರೈತರು ತಮ್ಮ ಧರಣಿ ಮುಂದುವರಿಸಿದ್ದಾರೆ. ರೈತರು ಮತ್ತು ಸರ್ಕಾರದ ನಡುವೆ 11 ಬಾರಿ ಮಾತುಕತೆ ನಡೆದ್ರೂ ಯಶಸ್ವಿಯಾಗಿಲ್ಲ. ಸರ್ಕಾರ ಮೂರು ಕಾನೂನುಗಳನ್ನು ಹಿಂಪಡೆದು, ಎಂಎಸ್‍ಪಿ ಗ್ಯಾರೆಂಟಿ ಕಾನೂನು ತರಬೇಕೆಂದು ಆಗ್ರಹಿಸಿದ್ದಾರೆ.