– 4 ಗಂಡು ಮಕ್ಕಳು, 12 ಮೊಮ್ಮಕ್ಕಳ ಒಪ್ಪಿಗೆ
– ಗ್ರಾಮದ ಜನರ ಮುಂದೆಯೇ ಮದುವೆ
ಭೋಪಾಲ್: ಪ್ರೀತಿಗೆ ಕಣ್ಣಿಲ್ಲ, ಪ್ರೀತಿ ಕುರುಡು ಅಂತಾರೆ. ಅಲ್ಲದೆ ಪ್ರೀತಿಗೆ ಜಾತಿ, ವಯಸ್ಸಿನ ಅಂತರ ಕೂಡ ಇಲ್ಲ. ಇದು ಅಕ್ಷರಶಃ ಸತ್ಯವಾದ ಮಾತಾಗಿದ್ದು ಇದಕ್ಕೆ ಪೂರಕ ಎಂಬಂತೆ ಮಧ್ಯಪ್ರದೇಶದಲ್ಲೊಂದು ಘಟನೆ ನಡೆದಿದೆ.
ಹೌದು. 70 ವರ್ಷದ ಅಜ್ಜನಿಗೆ 55 ಮಹಿಳೆಯ ಮೇಲೆ ಆಸ್ಪತ್ರೆಯಲ್ಲಿ ಪ್ರೇಮಾಂಕುರವಾಗಿದೆ. ಅಲ್ಲದೆ ನೆರೆಹೊರೆಯವರ ಸಮ್ಮುಖದಲ್ಲಿಯೇ ಜೋಡಿ ದಾಂಪತ್ಯ ಜೀವನಕ್ಕೂ ಕಾಲಿಟ್ಟಿದೆ.
ಓಂಕಾರ್ ಸಿಂಗ್ ಹಾಗೂ ಗುಡ್ಡಿಬಾಯ್ ಮಧ್ಯಪ್ರದೇಶದ ಅಶೋಕ್ ನಗರ ಜಿಲ್ಲೆಯ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅಕ್ಕ-ಪಕ್ಕದ ಬೆಡ್ ನಲ್ಲೇ ಚಿಕಿತ್ಸೆ ಪಡೆಯುತ್ತಿದ್ದ ಇವರಿಬ್ಬರು ಮಾತಾಡುತ್ತಾ ಪರಿಚಯವಾದರು. ಹೀಗೆ ಆದ ಪರಿಚಯ ಪ್ರೀತಿಗೆ ತಿರುಗಿದೆ.
ಮಾತುಕತೆ ಶುರುವಾದ ಈ ಜೋಡಿಗೆ ತಾವು ಪ್ರೀತಿಯ ಬಲೆಯಲ್ಲಿ ಸಿಲುಕಿರುವುದು ತಿಳಿಯಿತು. ಹೀಗಾಗಿ ಅವರಿಬ್ಬರು ಜೊತೆಯಾಗಿ ಸಮಯ ಕಳೆಯಲು ನಿರ್ಧರಿಸಿದರು. ಹೀಗಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಓಂಕಾರ್, ಗುಡ್ಡಿಬಾಯ್ ಅವರನ್ನು ತನ್ನ ಮನೆಗೆ ಕರೆದೊಯ್ದಿದ್ದಾರೆ.
ಓಂಕಾರ್ ತನ್ನ 4 ಗಂಡು 12 ಮೊಮ್ಮಕ್ಕಳ ಜೊತೆ ಗುಡ್ಡಿಬಾಯ್ ಮೇಲೆ ಇರುವ ತನ್ನ ಭಾವನೆಗಳನ್ನು ವಿವರಿಸಿದ್ದಾರೆ. ಹೀಗೆ ಅವರ ಕುಟುಂಬದ ಒಪ್ಪಿಗೆ ಪಡೆದ ನಂತರ ಈ ಜೋಡಿ ಇಡೀ ಹಳ್ಳಿಯ ಜನರ ಮುಂದೆಯೇ ವಿವಾಹವಾದರು. ನೃತ್ಯ, ಬೃಹತ್ ಮೆರವಣಿಗೆಯ ಮೂಲಕ ಮದುವೆ ಸಮಾರಂಭ ನಡೆದಿದೆ.
ಈ ಶುಭ ಸಂದರ್ಭದಲ್ಲಿ ಗುಡ್ಡಿಬಾಯ್ ಗೋಲ್ಡ್ ಹಾಗೂ ಕಂದು ಬಣ್ಣದ ಸೀರೆಯನ್ನು ಧರಿಸಿದ್ದರೆ, ಓಂಕಾರ್ ತನ್ನ ಪ್ರಿಯತಮೆಯ ಉಡುಪಿನೊಂದಿಗೆ ಹೋಲಿಸಲು ಹಳದಿ ಪೇಟ ಧರಿಸಿದ್ದರು. ಓಂಕಾರ್ ಅವರ ಮೊದಲ ಪತ್ನಿ ಮೂರು ವರ್ಷಗಳ ಹಿಂದೆ ನಿಧನರಾಗಿದ್ದರು.