– ಜೂ.15 ರಿಂದ ಅ.15ರ ವರೆಗೆ ಸಂಚಾರಕ್ಕೆ ಬ್ರೇಕ್
ಶಿವಮೊಗ್ಗ: ಮಲೆನಾಡಿನ ಭಾಗದಲ್ಲಿ ಅತಿಯಾದ ಮಳೆಯಾಗುತ್ತಿದೆ. ಹೀಗಾಗಿ ಆಗುಂಬೆ ಘಾಟಿಯಲ್ಲಿ ಮಳೆಗಾಲ ಮುಗಿಯುವವರೆಗೂ ಭಾರೀ ವಾಹನಗಳ ಸಂಚಾರವನ್ನು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ನಿಷೇಧಿಸಿದ್ದಾರೆ.
ಅನೇಕ ದಿನಗಳಿಂದ ಮಲೆನಾಡಿನ ಭಾಗದಲ್ಲಿ ಭಾರೀ ಮಳೆಯಾಗುತ್ತಿದೆ. ಹೀಗಾಗಿ ಆಗುಂಬೆ ಘಾಟಿಯಲ್ಲಿ ಅಧಿಕ ಭಾರದ ವಾಹನಗಳು ಸಂಚಾರ ನಡೆಸಿದರೆ ರಸ್ತೆಯ ಇಕ್ಕೆಲಗಳಲ್ಲಿ ಮಣ್ಣು ಕುಸಿಯುವ ಸಾಧ್ಯತೆ ಇದೆ. ಒಂದು ವೇಳೆ ರಸ್ತೆ ಕುಸಿದು ಬಿದ್ದರೆ ಸಾರ್ವಜನಿಕ ವಾಹನ ಸಂಚಾರಕ್ಕೆ ತೊಂದರೆ ಉಂಟಾಗುತ್ತದೆ. ಜೊತೆಗೆ ಸಾರ್ವಜನಿಕರ ಆಸ್ತಿ ಮತ್ತು ಪ್ರಾಣ ಹಾನಿಯಾಗುವ ಸಾಧ್ಯತೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಆಗುಂಬೆ ಘಾಟಿಯಲ್ಲಿ ಭಾರೀ ವಾಹನಗಳ ಸಂಚಾರವನ್ನು ಬಂದ್ ಮಾಡಲಾಗಿದೆ.
Advertisement
Advertisement
ರಾಷ್ಟ್ರೀಯ ಹೆದ್ದಾರಿ 169 ಎ ರಸ್ತೆಯ ಮಾರ್ಗದಲ್ಲಿ ಅಂದರೆ ಶಿವಮೊಗ್ಗ-ತೀರ್ಥಹಳ್ಳಿ, ಉಡುಪಿ-ಮಂಗಳೂರು ರಸ್ತೆಯ ಆಗುಂಬೆ ಘಾಟಿಯಲ್ಲಿ ಮಳೆಗಾಲ ಮುಗಿಯುವವರೆಗೂ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ. ಅಂದರೆ ಜೂನ್ 15 ರಿಂದ ಅಕ್ಟೋಬರ್ 15 ರವರೆಗೆ 12 ಟನ್‍ಗಿಂತ ಅಧಿಕ ಭಾರದ ವಾಹನಗಳ ಸಂಚಾರವನ್ನು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ನಿಷೇಧಿಸಿ ಆದೇಶಿಸಿದ್ದಾರೆ.
Advertisement
ಪರ್ಯಾಯ ಮಾರ್ಗಗಳು: 12 ಟನ್‍ಗಿಂತ ಅಧಿಕ ಭಾರದ ವಾಹನಗಳ ಸಂಚಾರಕ್ಕೆ ಪರ್ಯಾಯ ಮಾರ್ಗಗಳನ್ನು ಕಲ್ಪಿಸಲಾಗಿದೆ.
* ಶಿವಮೊಗ್ಗ-ತೀರ್ಥಹಳ್ಳಿ-ಆಗುಂಬೆ-ಶೃಂಗೇರಿ-ಕೆರೆಕಟ್ಟೆ ಕಾರ್ಕಳ-ಉಡುಪಿ-ಮಂಗಳೂರು
* ಶಿವಮೊಗ್ಗ-ತೀರ್ಥಹಳ್ಳಿ-ಮಾಸ್ತಿಕಟ್ಟೆ-ಹುಲಿಕಲ್-ಹೊಸಂಗಡಿ-ಸಿದ್ದಾಪುರ-ಉಡುಪಿ