ಮಡಿಕೇರಿ : ಚಿಕ್ಕಮಗಳೂರಿನ ರೆಸಾರ್ಟ್ ಒಂದರಲ್ಲಿ ನಡೆದಿರುವ ಸಭೆಗೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ಹೇಳುವ ಮೂಲಕ ಸಭೆ ನಡೆದಿರುವುದನ್ನು ಸಹಕಾರ ಸಚಿವ ಎಸ್‌ಟಿ ಸೋಮಶೇಖರ್ ಒಪ್ಪಿಕೊಂಡಿದ್ದಾರೆ.
ಸಚಿವ ಆರ್ ಅಶೋಕ್, ಜಗದೀಶ್ ಶೆಟ್ಟರ್ ಮತ್ತು ಸಿ ಟಿ ರವಿ ಅವರು ಪ್ರತ್ಯೇಕ ಸಭೆ ನಡೆಸಿದ್ದಾರೆ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವ ಸೋಮಶೇಖರ್ ಸಭೆ ನಡೆದಿರುವುದನ್ನು ಖಚಿತಪಡಿಸಿದ್ದಾರೆ.
ಅವರರೆಲ್ಲರೂ ನಾವೂ ಯಾವುದೇ ಸಭೆ ನಡೆಸಿಲ್ಲ ಎಂದು ಹೇಳುತ್ತಿದ್ದರೆ, ಇತ್ತ ಸಚಿವ ಸೋಮಶೇಖರ್ ಮಾತ್ರ ಅವರು ಯಾವುದೋ ಲ್ಯಾಂಡ್ ವಿಚಾರಕ್ಕೆ ಸಭೆ ನಡೆಸಿದ್ದಾರೆ ಅಷ್ಟೇ. ಅದಕ್ಕೆ ವಿಶೇಷ ಅರ್ಥ ಕಲ್ಪಿಸುವುದು ಬೇಡ ಎಂದು ಹೇಳುವ ಮೂಲಕ ಸಭೆ ನಡೆದಿರುವುದನ್ನು ಖಚಿತಪಡಿಸಿದ್ದಾರೆ.
ಎಚ್ ವಿಶ್ವನಾಥ್ ಅವರಿಗೆ ಪರಿಷತ್ ಟಿಕೆಟ್ ಕೈ ತಪ್ಪಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವ ಸೋಮಶೇಖರ್ ಈಗಾಗಲೇ ಎಂಟಿಬಿ ನಾಗರಾಜ್, ಆರ್ ಶಂಕರ್ ಅವರಿಗೂ ಅವಕಾಶ ಕಲ್ಪಿಸಿದ್ದಾರೆ. ಮುನಿರತ್ನ ಮತ್ತು ಪ್ರತಾಪ್ ಗೌಡ ಅವರಿಗೆ ಮುಂದಿನ ಚುನಾವಣೆಯಲ್ಲಿ ಅವಕಾಶ ಸಿಗಲಿದೆ. ಇನ್ನು ವಿಶ್ವನಾಥ್ ಒಬ್ಬರು ಮಾತ್ರವೇ ಉಳಿದಿದ್ದಾರೆ. ಈ ವಿಷಯವನ್ನು ಈಗಾಗಲೇ ಹೈಕಮಾಂಡ್ ಗಮನಕ್ಕೆ ತರಲಾಗಿದ್ದು, ಮುಂದಿನ ದಿನಗಳಲ್ಲಿ ಅವರಿಗೂ ಅವಕಾಶ ದೊರೆಯಲಿದೆ ಎಂದರು.
ಜೊತೆಗೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಪ್ರತಿಜ್ಞಾ ವಿಧಿ ಸ್ವೀಕಾರ ಮಾಡುತ್ತಿರುವ ಮತ್ತು ಪ್ರತಿಭಟನೆ ಮಾಡಿದ್ದು ಸರಿಯಲ್ಲ. ಇಂತಹ ಸಂದರ್ಭದಲ್ಲಿ ಅದೆಲ್ಲವೂ ಬೇಕಾಗಿರಲಿಲ್ಲ ಎಂದರು.