ಬೆಂಗಳೂರು: ಕೇಂದ್ರದ ಕೃಷಿ ಕಾಯ್ದೆ ವಿರೋಧಿಸಿ ರಾಜ್ಯದ ರೈತರು ಮತ್ತೊಮ್ಮೆ ಬೀದಿಗಿಳಿಯಲಿದ್ದಾರೆ. ಜನವರಿ 26ರಂದು ಅಂದ್ರೆ ಗಣರಾಜ್ಯೋತ್ಸವದಂದೇ ಟ್ರ್ಯಾಕ್ಟರ್ ಮಾರ್ಚ್ ಮೂಲಕ ಬಿಸಿ ಮುಟ್ಟಿಸಲು ರೈತ ಸಂಘಟನೆಗಳು ಮುಂದಾಗಿವೆ. ಬೆಂಗಳೂರಿನಲ್ಲಿ ಟ್ರ್ಯಾಕ್ಟರ್ ಸೇರಿದಂತೆ 25 ಸಾವಿರಕ್ಕೂ ಹೆಚ್ಚು ವಾಹನಗಳ ಮೂಲಕ ಅನ್ನದಾತರು ಬೃಹತ್ ರ‍್ಯಾಲಿ ಮಾಡಲಿದ್ದಾರೆ.
Advertisement
ಬೆಂಗಳೂರಿಗೆ ರಾಜ್ಯದ ಮೂಲೆ ಮೂಲೆಯಿಂದ ರೈತರು ಆಗಮಿಸಲಿದ್ದಾರೆ. ಐಕ್ಯ ಹೋರಾಟ ಸಮಿತಿ, ರೈತ ಸಂಘಟನೆ, ದಲಿತ ಸಂಘಟನೆಗಳು, ಕನ್ನಡ ಸಂಘಟನೆಗಳು ಹೋರಾಟ ನಡೆಸಲಿದ್ದು, ನೈಸ್ ರಸ್ತೆ ಜಂಕ್ಷನ್‍ನಿಂದ ಆರಂಭವಾಗುವ ರೈತರ ರ‍್ಯಾಲಿ, ಗೊರಗುಂಟೆಪಾಳ್ಯ, ಯಶವಂತಪುರ ಮಾರ್ಗವಾಗಿ ಫ್ರೀಡಂಪಾರ್ಕ್ ತಲುಪಲಿದೆ. ಕೇವಲ ನೈಸ್ ರೋಡ್ ಮಾತ್ರವಲ್ಲ.. ಬೆಂಗಳೂರಿನ ದಶ ದಿಕ್ಕುಗಳಿಂದಲೂ ರೈತ ಪ್ರವಾಹ ರಾಜಧಾನಿಗೆ ಹರಿದುಬರಲಿದೆ. ಸಿಎಂ ಯಡಿಯೂರಪ್ಪ ಭಾಷಣ ಮುಗಿಯುತ್ತಲೇ, ರಾಜಧಾನಿಯಲ್ಲಿ ಟ್ರ್ಯಾಕ್ಟರ್ ಮಾರ್ಚ್‍ಗೆ ರೈತ ಸಂಘಟನೆಗಳು ಸಕಲ ಪ್ಲಾನ್ ಮಾಡಿಕೊಂಡಿವೆ.
Advertisement
Advertisement
ರಾಜಧಾನಿಗೆ ಟ್ರ್ಯಾಕ್ಟರ್ ಪ್ರವಾಹ: ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ನೈಸ್ ರೋಡ್ ಜಂಕ್ಷನ್‍ನಿಂದ ಪ್ರತಿಭಟನೆ ಶುರುವಾಗಲಿದೆ. ಗೊರಗುಂಟೆಪಾಳ್ಯ – ಮಲ್ಲೇಶ್ವರಂ – ಫ್ರೀಡಂಪಾರ್ಕ್‍ವರೆಗೂ ಟ್ರ್ಯಾಕ್ಟರ್ ರ‍್ಯಾಲಿ ನಡೆಯಲಿದೆ. ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ಮೈಸೂರಿನಿಂದಲೇ ರ‍್ಯಾಲಿ ಆರಂಭಗೊಂಡು ನಾಯಂಡಳ್ಳಿ ಮಾರ್ಗವಾಗಿ ಟ್ರ್ಯಾಕ್ಟರ್, ಎತ್ತಿನ ಗಾಡಿ ಮೂಲಕ ರೈತರು ಬೆಂಗಳೂರಿಗೆ ಎಂಟ್ರಿ ಕೊಡಲಿದ್ದಾರೆ. ಚಿಕ್ಕಬಳ್ಳಾಪುರ ರೈತರು ಹೆಬ್ಬಾಳ ಮಾರ್ಗವಾಗಿ ಮತ್ತು ಕೋಲಾರ ರೈತರು ಕೆ.ಆರ್ ಪುರಂ ಮಾರ್ಗವಾಗಿ ಪೆರೇಡ್ ನಡೆಸಲಿದ್ದಾರೆ. ಇನ್ನು ರಾಜ್ಯದ ವಿವಿಧ ಭಾಗಗಳಿಂದ ಆಗಮಿಸುವ ರೈತರು ಸಂಗೊಳ್ಳಿ ರಾಯಣ್ಣ ರೈಲ್ವೇ ನಿಲ್ದಾಣದಲ್ಲಿ ಸೇರಿ ಬೃಹತ್ ರ್ಯಾಲಿ ನಡೆಸಲಿದ್ದಾರೆ.
Advertisement
ನಮ್ಮ ಪೆರೇಡ್ ಅನ್ನು ತಡೆದರೇ ಇಡೀ ಬೆಂಗಳೂರು ಲಾಕ್ ಆಗಲಿದೆ. ದೆಹಲಿ ಮಾದರಿಯಲ್ಲೇ ನಮ್ಮ ಹೋರಾಟ ಸಾಗಲಿದೆ ಎಂದು ಸರ್ಕಾರಕ್ಕೆ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಎಚ್ಚರಿಸಿದ್ದಾರೆ. ನಮ್ಮ ಬೃಹತ್ ಹೋರಾಟ ಶಾಂತಿಯುತವಾಗಿರಲಿದೆ. ಸರ್ಕಾರಕ್ಕೆ ರೈತರ ಮೇಲೆ ಕಾಳಜಿ ಇದ್ದರೆ ಈ ಕೂಡಲೇ ಕಾಯ್ದೆಯನ್ನು ವಾಪಸ್ ಪಡೆಯಬೇಕು ಎಂದು ರೈತರ ಮುಖಂಡ ಕುರುಬೂರು ಶಾಂತಕುಮಾರ್ ಆಗ್ರಹಿಸಿದ್ದಾರೆ.
‘ಖಾಕಿ’ ಬ್ರೇಕ್?: ಬೆಂಗಳೂರಿನಲ್ಲಿ ನಡೆಯಲಿರುವ ರೈತರ ಬೃಹತ್ ಟ್ರ್ಯಾಕರ್ ರ‍್ಯಾಲಿಗೆ ಇನ್ನೂ ಅನುಮತಿ ಸಿಕ್ಕಿಲ್ಲ. ಪೊಲೀಸ್ ಆಯುಕ್ತರಿಗೆ ಅನುಮತಿ ಕೋರಿ ಪತ್ರ ಬರೆಯಲಾಗಿದೆ. ಸೋಮವಾರ ಆಯುಕ್ತ ಕಮಲ್ ಪಂಥ್ ಸಭೆ ನಡೆಸಿ ನಿರ್ಧಾರ ತಿಳಿಸಲಿದ್ದಾರೆ. ಪಬ್ಲಿಕ್ ಟಿವಿಗೆ ಸಿಕ್ಕ ಮಾಹಿತಿ ಪ್ರಕಾರ, ಅನ್ನದಾತರ ಟ್ರ್ಯಾಕ್ಟರ್ ರ‍್ಯಾಲಿಗೆ ಬ್ರೇಕ್ ಹಾಕಲು ಖಾಕಿ ಪಡೆ ಪ್ಲಾನ್ ಮಾಡಿಕೊಂಡಿದೆ.
ಬೆಂಗಳೂರು ಹೊರ ಭಾಗದಲ್ಲೇ ಟ್ರ್ಯಾಕ್ಟರ್ ತಡೆಗೆ ಪೊಲೀಸರು ಪ್ಲಾನ್ ಮಾಡಿಕೊಂಡಿದ್ದಾರೆ. ಟ್ರ್ಯಾಕ್ಟರ್ ಬಿಟ್ಟು, ರೈತರು ರ‍್ಯಾಲಿಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡುವ ಸಾಧ್ಯತೆಗಳಿವೆ. ರೈತರು ಬೈಕ್‍ಗಳಲ್ಲಿ ಬಂದರೇ ತಡೆ ಉಂಟು ಮಾಡಬಾರದು. ಬೆಂಗಳೂರು ಸುತ್ತಲಿನ ಜಿಲ್ಲಾ ಎಸ್‍ಪಿಗಳಿಗೆ ಆದೇಶ ರವಾನಿಸಲಾಗಿದೆ ಎನ್ನಲಾಗಿದೆ. ಜಿಲ್ಲೆಗಳಿಂದ ಟ್ರ್ಯಾಕ್ಟರ್ ಹೊರಡದಂತೆ ತಡೆಯಲು ಸೂಚನೆ ನೀಡಲಾಗಿದೆ ಎನ್ನಲಾಗಿದೆ.
ಯಾರ ಬೆಂಬಲ: ರೈತರ ಟ್ರ್ಯಾಕ್ಟರ್ ರಣಕಹಳೆಗೆ ಕಾಂಗ್ರೆಸ್ ಕಿಸಾನ್ ಘಟಕ ಬೆಂಬಲ ಸೂಚಿಸಿದೆ. ಇನ್ನುಳಿದಂತೆ ಕನ್ನಡ ಪರ ಸಂಘಟನೆಗಳು, ಕಾರ್ಮಿಕ ಸಂಘಟನೆ, ದಲಿತ ಸಂಘಟನೆ, ಮಹಿಳಾ ಸಂಘಟನೆಗಳು ಮತ್ತು ಕನ್ನಡ ಸಂಘಟನೆಗಳು ರೈತರ ಹೋರಾಟಕ್ಕೆ ಬೆಂಬಲ ನೀಡಿವೆ. ಬೃಹತ್ ರ‍್ಯಾಲಿಯಿಂದ ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ಆಗಲಿದೆ. ಸರ್ಕಾರಿ ರಜೆ ಅಂತ ಬೆಂಗಳೂರಿನಲ್ಲಿ ರಸ್ತೆಗಿಳಿದ್ರೆ ಮಂಗಳವಾರ ಟ್ರಾಫಿಕ್‍ನಲ್ಲಿ ಸಿಲುಕಿಕೊಳ್ಳುವುದು ಖಂಡಿತ.
ದೆಹಲಿಯಲ್ಲೂ ರೈತರ ಟ್ರ್ಯಾಕ್ಟರ್ ಪರೇಡ್‍ಗೆ ದೆಹಲಿ ಪೊಲೀಸರು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. 1 ಲಕ್ಷಕ್ಕೂ ಅಧಿಕ ಟ್ರ್ಯಾಕ್ಟರ್ ಮೂಲಕ ರೈತರು ಕೇಂದ್ರದ ವಿರುದ್ಧ ಪ್ರತಿಭಟಿಸಲಿದ್ದಾರೆ. ಸಿಂಘು, ಠಿಕ್ರಿ, ಘಾಜಿಯಾಬಾದ್, ಬುರಾರಿ ಮೂಲಕ ಪೊಲೀಸರು ಸೂಚಿಸಿರುವ ನಿಗದಿತ ಮಾರ್ಗದಲ್ಲಿ ರೈತರು ಶಾಂತಿಯು ಹೋರಾಟ ನಡೆಸಲಿದ್ದಾರೆ. ಪಂಜಾಬ್, ಹರಿಯಾಣ, ಉತ್ತರಪ್ರದೇಶದಿಂದ ಟ್ರ್ಯಾಕ್ಟರ್ ಮೂಲಕ ರೈತರು ಆಗಮಿಸಲಿದ್ದಾರೆ. ಕೃಷಿ ಕಾಯ್ದೆ ವಿರುದ್ಧ ಅನ್ನದಾತನ ಕಿಚ್ಚು ಇನ್ನು ಆರಿಲ್ಲ. ದೆಹಲಿಯಲ್ಲಿ ದಾಖಲೆ ಪ್ರತಿಭಟನೆ ಮಾಡ್ತಿರುವ ರೈತರು ಮತ್ತೊಮ್ಮೆ ಸರ್ಕಾರದ ಗಮನ ಸೆಳೆಯಲು ಬೃಹತ್ ಹೋರಾಟಕ್ಕಿಳಿದಿದ್ದಾರೆ. ಜನವರಿ 26ರ ಗಣರಾಜ್ಯೋತ್ಸವದಂದು ಕಿಸಾನ್‍ರ ಹೋರಾಟಕ್ಕೆ ಪ್ರತಿಫಲ ಸಿಗುತ್ತದೋ ನೋಡಬೇಕು.