Friday, 24th November 2017

Recent News

ಹಾಲಿವುಡ್ ಸಿನಿಮಾಕ್ಕಾಗಿ ಸಿಕ್ಸ್ ಪ್ಯಾಕ್ ಮಾಡಲಿದ್ದಾರಾ ಕಿಚ್ಚ ಸುದೀಪ್?

ಬೆಂಗಳೂರು: ಸುದೀಪ್ ಸಿಕ್ಸ್ ಪ್ಯಾಕ್ ಮಾಡುತ್ತಾರಾ? ಹೀಗೊಂದು ನಿರೀಕ್ಷೆ, ಆಸೆ ಮತ್ತು ಕುತೂಹಲ ಕಿಚ್ಚನ ಅಭಿಮಾನಿಗಳಲ್ಲಿ ಎದ್ದಿದೆ. ಅದಕ್ಕೆ ಕಾರಣ ಕಿಚ್ಚನ ಹಾಲಿವುಡ್ ಸಿನಿಮಾ ರೈಸನ್. ಮಿಲಿಟರಿ ಕಮಾಂಡರ್ ಪಾತ್ರದಲ್ಲಿ ಕಾಣಿಸುತ್ತಿರುವ ಸುದೀಪ್ ಸಿಕ್ಕಾಪಟ್ಟೆ ಬೆವರು ಹರಿಸುತ್ತಿದ್ದಾರಂತೆ, ಸಿಕ್ಸ್ ಪ್ಯಾಕ್ ಮಾಡಿದರೂ ಅಚ್ಚರಿ ಇಲ್ಲ ಎಂದು ಹೇಳಲಾಗಿದೆ.

ಸುದೀಪ್ ಗೆ ಮೊದಲಿನಿಂದಲೂ ಜಿಮ್, ಸಿಕ್ಸ್ ಪ್ಯಾಕ್, ಬಾಡಿ ಬಿಲ್ಟಿಂಗ್ ಅಂದರೆ ಅಷ್ಟಕ್ಕಷ್ಟೇ. ಆದರೆ ನಿತ್ಯ ಬ್ಯಾಡ್ಮಿಂಟನ್, ಕ್ರಿಕೆಟ್ ಅಥವಾ ಇನ್ಯಾವುದಾದರೂ ಆಟಗಳಿಂದ ದೇಹ ದಂಡಿಸಿ ಹುರಿಗೊಳಿಸುತ್ತಾರೆ. ಅತಿಯಾದ ಡಯಟ್ ಮಾಡಲ್ಲ. ಬಟ್ ಫಿಟ್ ಅಂಡ್ ಫೈನ್ ಆಗಿರುವುದನ್ನು ಮರೆಯುವುದಿಲ್ಲ. ಆರಂಭದಿಂದಲೂ ಅದೇ ಬಾಡಿ ಟೋನ್ ಉಳಿಸಿಕೊಂಡಿದ್ದಾರೆ.

ಹೆಬ್ಬುಲಿ ಸಿನಿಮಾದಲ್ಲಿ ಮಿಲಿಟರಿ ಆಫೀಸರ್ ಪಾತ್ರದಲ್ಲಿ ಕಾಣಿಸಿದ್ದರು. ಡಿಫರೆಂಟ್ ಹೇರ್ ಸ್ಟೈಲ್ ಮಾಡಿಕೊಂಡರೂ, ದೇಹದಲ್ಲಿ ಮಾತ್ರ ಕಿಚ್ಚ ಅದೇ ಹಳೇ ಖದರ್ ಉಳಿಸಿಕೊಂಡಿದ್ದರು. ಹಾಗಾದರೂ ಪಾತ್ರಕ್ಕೆ ಎಲ್ಲೂ ಚ್ಯುತಿ ತಂದಿರಲಿಲ್ಲ. ಅದಕ್ಕೆ ಏನು ಬೇಕೊ ಎಲ್ಲವನ್ನೂ ಧಾರೆ ಎರೆದಿದ್ದರು ಮತ್ತು ಭರ್ಜರಿ ಗೆಲುವು ಕಂಡಿದ್ದರು.

‘ದಿ-ರೈಸನ್’ ಇದು ಕಿಚ್ಚ ನಟಿಸುತ್ತಿರುವ ಮೊದಲ ಹಾಲಿವುಡ್ ಸಿನಿಮಾ. ಯಡ್ಡಿ ಆರ್ಯ ಈ ಚಿತ್ರದ ನಿರ್ದೇಶಕ. ಇತ್ತೀಚೆಗೆ ಇವರು ಬೆಂಗಳೂರಿಗೆ ಬಂದು ಸುದೀಪ್ ರನ್ನು ಭೇಟಿ ಮಾಡಿದ್ದರು. ಗುಟ್ಟಾಗಿ ಫೋಟೊ ಶೂಟ್ ಮಾಡಿದ್ದರು. ಅದರ ಫಸ್ಟ್ ಲುಕ್ ಕೆಲವೇ ದಿನಗಳ ಹಿಂದೆ ರಿಲೀಸ್ ಆಗಿ ಬಂಪರ್ ಟಾಕ್ ಕ್ರಿಯೇಟ್ ಮಾಡಿತ್ತು.

ಈಗ ಬಂದಿರುವ ಸುದ್ದಿ ಪ್ರಕಾರ ಸುದೀಪ್ ಇದೇ ಮೊದಲ ಬಾರಿಗೆ ದೇಹವನ್ನು ಇನ್ನಷ್ಟು ಹುರಿಗೊಳಿಸುತ್ತಿದ್ದಾರಂತೆ. ಹಾಲಿವುಡ್ ಸಿನಿಮಾ ಆಗಿರುವುದರಿಂದ ಅಲ್ಲಿಯ ಪ್ರೇಕ್ಷಕರಿಗೆ ಸೂಟ್ ಆಗಬೇಕೆನ್ನೋ ಅದರ ಸದುದ್ದೇಶ. ಅದು ಬಿಟ್ಟು ಬೇರೇನೂ ಇಲ್ಲ.

ಇದನ್ನೆಲ್ಲಾ ಕೇಳಿದ ಕಿಚ್ಚನ ಫ್ಯಾನ್ಸ್ ಈಗಲಾದರೂ ಸುದೀಪ್ ಸಿಕ್ಸ್ ಪ್ಯಾಕ್ ಮಾಡಲಿ. ಅದನ್ನು ನೋಡಿ ಕಣ್ತುಂಬಿಕೊಳ್ಳುತ್ತೇವೆ ಎನ್ನುತ್ತಿದ್ದಾರೆ. ಆದರೆ ಸದ್ಯಕ್ಕೆ ಕಿಚ್ಚ ಏನೇನು ಮತ್ತು ಯಾವ್ಯಾವ ವರ್ಕ್ ಔಟ್ ಮಾಡುತ್ತಿದ್ದಾರೆ ಎನ್ನುವುದು ಮಾತ್ರ ಗುಟ್ಟು ಗುಟ್ಟಾಗಿದೆ.

Leave a Reply

Your email address will not be published. Required fields are marked *