– ಲಿವ್ ಇನ್ ರಿಲೇಷನ್ಶಿಪ್ ಒಪ್ಪಂದಕ್ಕೆ ಸಾಕ್ತಿಯಾಗಿ ಮಡದಿಯಿಂದ ಸಹಿ
ಗಾಂಧಿನಗರ: ವ್ಯಕ್ತಿಯೊಬ್ಬ ತನ್ನ ಪ್ರಿಯತಮೆಯೊಂದಿಗಿನ ಲಿವ್ ಇನ್ ರಿಲೇಷನ್ಶಿಪ್ ಒಪ್ಪಂದಕ್ಕೆ ಸಾಕ್ಷಿಯಾಗಿ ಸಹಿ ಮಾಡುವಂತೆ ಪತ್ನಿಗೆ ಒತ್ತಾಯಿಸಿದ್ದಾನೆ. ಇದೀಗ ಮಹಿಳೆ ತನ್ನ ಪತಿ ವಿರುದ್ಧ ಪೊಲೀಸರಿಗೆ ದೂರು ನೀಡಿರುವ ಘಟನೆ ಗುಜರಾತ್ನಲ್ಲಿ ನಡೆದಿದೆ.
ಈ ಘಟನೆ ಗುಜರಾತ್ನ ಖೇಡಾ ಜಿಲ್ಲೆಯಲ್ಲಿ ನಡೆದಿದೆ. ಇಬ್ಬರು ಮಹಿಳೆಯರು ಒಂದೇ ಮನೆಯಲ್ಲಿ ಸಾಮರಸ್ಯದಿಂದ ಬದುಕಲು ನನ್ನ ಪತಿ ತನ್ನ ಗೆಳತಿಯೊಂದಿಗೆ ಮಾತನಾಡಲು ನನ್ನನ್ನು ಒತ್ತಾಯಿಸಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ.
Advertisement
Advertisement
ಏನಿದು ಪ್ರಕರಣ?
ಸಂತ್ರಸ್ತೆ ತನ್ನ ಕುಟುಂಬದ ಇಚ್ಛೆಯಂತೆ ವ್ಯಕ್ತಿಯ ಜೊತೆ ಮದುವೆಯಾಗಿದ್ದಾರೆ. ಮಹಿಳೆ ಖೇಡಾದ ಸಿಜ್ವಾಡಾ ಗ್ರಾಮದ ನಿವಾಸಿಯಾಗಿದ್ದು, ಈಕೆಯ ಪತಿ ಖಾಸಗಿ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದನು. ಈ ವೇಳೆ ಪತಿ ನಾಡಿಯಾಡ್ ಪಟ್ಟಣದ ನಿವಾಸಿಯಾಗಿರುವ ಇನ್ನೊಬ್ಬ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾನೆ. ಮಹಿಳೆಯೊಂದಿಗೆ ಪತಿಯ ಸಂಬಂಧದ ಬಗ್ಗೆ ಪತ್ನಿ ತಿಳಿದುಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement
Advertisement
“ನನ್ನ ಪತಿ ಪ್ರಿಯತಮೆಯನ್ನು ಮನೆಗೆ ಕರೆದುಕೊಂಡು ಬರುತ್ತೇನೆ ಎಂದು ನನಗೆ ತಿಳಿಸಿದನು. ಆದರೆ ನಾನು ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದೆ. ಇದರಿಂದ ಕೋಪಗೊಂಡ ಪತಿ ನನ್ನ ಮೇಲೆ ಹಲ್ಲೆ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದನು. ಅಲ್ಲದೇ ಪತಿ ತನ್ನ ಗೆಳತಿಯೊಂದಿಗೆ ಮಾತನಾಡಲು ನನ್ನನ್ನು ಒತ್ತಾಯಿಸಿದನು” ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಮಹಿಳೆ ಗರ್ಭಿಣಿಯಾಗಿದ್ದರಿಂದ ತನ್ನ ಪೋಷಕರ ಮನೆಗೆ ಹೋಗಿದ್ದರು. ಆದರೆ ಮೇ 14 ರಂದು ವೈದ್ಯರನ್ನ ಭೇಟಿ ಮಾಡಬೇಕಾಗಿ ಮಹಿಳೆ ಪತಿಗೆ ತಿಳಿಸಿದ್ದಾರೆ. ಆಗ ಪತಿ ತವರು ಮನೆಗೆ ಬಂದು ಪತ್ನಿಯನ್ನು ಕರೆದುಕೊಂಡು ಹೋಗಿದ್ದಾನೆ. ಆದರೆ ವೈದ್ಯರ ಬಳಿ ಕರೆದುಕೊಂಡು ಹೋಗುವ ಬದಲು ತನ್ನ ಪತ್ನಿಯನ್ನು ವಡೋದರದ ಸ್ಥಳಕ್ಕೆ ಕರೆದುಕೊಂಡು ಹೋಗಿದ್ದಾನೆ.
“ಅಲ್ಲಿ ಪತಿ ನನ್ನನ್ನು ಹೊಡೆದು, ಕೆಲವು ಕಾಗದಗಳಿಗೆ ಸಹಿ ಹಾಕುವಂತೆ ಒತ್ತಾಯಿಸಿದನು. ಒಂದು ವೇಳೆ ಸಹಿ ಹಾಕದಿದ್ದರೆ ನನ್ನನ್ನು ಕೊಂದು ನನ್ನ ಮಗುವನ್ನು ಗರ್ಭಪಾತ ಮಾಡುವುದಾಗಿ ಬೆದರಿಕೆ ಹಾಕಿದ್ದನು. ಹೀಗಾಗಿ ನಾನು ಕಾಗದ ಪತ್ರಗಳಿಗೆ ಸಹಿ ಹಾಕಿದೆ. ನಂತರ ಪತಿ ತನ್ನ ಗೆಳತಿಯೊಂದಿಗಿನ ಲಿವ್ ಇನ್ ರಿಲೇಷನ್ಶಿಪ್ ಒಪ್ಪಂದಕ್ಕೆ ಸಹಿ ಮಾಡಿಸಿಕೊಂಡಿದ್ದಾಗಿ ಹೇಳಿದನು” ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.
ಸದ್ಯಕ್ಕೆ ಆರೋಪಿ ಪತಿ ವಿರುದ್ಧ ಚಕ್ಲಾಸಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.