ಹಾಸನ: ನಡೆಯಲು ಸಾಧ್ಯವಾಗದ ನಾಲ್ಕು ದಿನಗಳ ಆನೆಮರಿಯೊಂದು ಕಾಫಿ ತೋಟವೊಂದರಲ್ಲಿ ಒಂದೇ ಕಡೆ ಮಲಗಿದ್ದು, ಮರಿಯನ್ನು ಕರೆದೊಯ್ಯಲು ತಾಯಿ ಆನೆ ಸಂಕಟ ಪಡುತ್ತಿರುವ ಮನಕಲಕುವ ಘಟನೆ ಜಿಲ್ಲೆಯ ಸಕಲೇಶಪುರ ತಾಲೂಕಿನ ಮಳಲಿ ಗ್ರಾಮದ ಸಮೀಪ ನಡೆದಿದೆ.
Advertisement
ಜಿಲ್ಲೆಯ ಸಕಲೇಶಪುರದ ಮಳಲಿ ಗ್ರಾಮದ ಅನೀಲ್ ಎಂಬುವರ ತೋಟದಲ್ಲಿ ನಾಲ್ಕು ದಿನಗಳ ಹಿಂದಷ್ಟೆ ಆನೆಯೊಂದು ಹೆಣ್ಣು ಮರಿಗೆ ಜನ್ಮ ನೀಡಿದೆ. ಆನೆ ಮರಿ ಹುಟ್ಟಿದ ದಿನದಿಂದಲೂ ನಡೆಯಲು ಸಾಧ್ಯವಾಗದೆ ಕಾಫಿ ತೋಟದಲ್ಲೇ ಮಲಗಿದೆ. ಆರಂಭದಲ್ಲಿ ತನ್ನೊಂದಿಗೆ ತನ್ನ ಕಂದಮ್ಮನನ್ನು ಕರೆದೊಯ್ಯಲು ತಾಯಿ ಆನೆ ಪ್ರಯತ್ನಿಸಿದೆ. ಆದರೆ ಎದ್ದು ನಿಲ್ಲಲು ಆಗದ ಮರಿಯಾನೆಯನ್ನು ನೋಡಿ ಮೂಕವೇದನೆ ಅನುಭವಿಸುತ್ತಿದೆ.
Advertisement
Advertisement
ಆಹಾರ ತಿನ್ನಲು ಕಾಫಿ ತೋಟದ ಒಳಗೆ ಹೋಗುವ ತಾಯಿ ಆನೆ ಮತ್ತೆ ತನ್ನ ಕಂದನ ಬಳಿಗೆ ಬಂದು ಹಾಲುಣಿಸಲು ಯತ್ನಿಸುತ್ತಿದೆ. ಆದರೂ ಮರಿಯಾನೆ ಮೇಲೆಳಲಾಗದೇ ಮಲಗಿದ್ದಲ್ಲೇ ಒದ್ದಾಡುತ್ತಿದೆ ಎಂದು ತೋಟದ ಮಾಲೀಕ ಅನೀಲ್ ಹೇಳಿದ್ದಾರೆ.
Advertisement
ತಾಯಿ ಆನೆ ಆಹಾರ ಸೇವನೆಗೆ ಹೋದ ತಕ್ಷಣ ಮರಿಯಾನೆ ಬಳಿ ಅರಣ್ಯ ಸಿಬ್ಬಂದಿ ಹಾಗೂ ವೈದ್ಯರು ಬಂದು ಚಿಕಿತ್ಸೆ ನೀಡಿ ಕೃತಕವಾಗಿ ಆಹಾರ ನೀಡುವ ಕೆಲಸ ಮಾಡುತ್ತಿದ್ದಾರೆ. ಆದರೂ ಮರಿಯಾನೆ ಇನ್ನೂ ಚೇತರಿಸಿಕೊಂಡಿಲ್ಲ ಎಂದು ಸ್ಥಳೀಯ ಸುರೇಶ್ ಆಳ್ವ ತಿಳಿಸಿದ್ದಾರೆ. ಹೀಗಾಗಿ ಮರಿಯಾನೆಯನ್ನು ಬೇರೆ ಕಡೆ ಸ್ಥಳಾಂತರಿಸಿ ಹೆಚ್ಚಿನ ಚಿಕಿತ್ಸೆ ನೀಡಿ ಅಂತ ಸ್ಥಳೀಯರು ಮನವಿ ಮಾಡುತ್ತಿದ್ದಾರೆ.