ಮಂಗಳೂರು: ಪೊಲೀಸ್ ದೌರ್ಜನ್ಯಕ್ಕೊಳಗಾಗಿ ಪುತ್ತೂರು ತಾಲೂಕು ಆಸ್ಪತ್ರೆಗೆ ದಾಖಲಾಗಿರುವ ಬಾಲಕಿಯನ್ನು ಭೇಟಿಯಾಗಲು ತೆರಳಿದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಅಲ್ಲಿಯ ಕರ್ತವ್ಯನಿರತ ವೈದ್ಯೆಯನ್ನು ದಬಾಯಿಸಿದ ವಿಡಿಯೋ ಜಾಲತಾಣದಲ್ಲಿ ಭಾರೀ ಟೀಕೆಗೊಳಗಾಗಿದೆ.
ಪೊಲೀಸರು ತನಿಖೆಯ ನೆಪದಲ್ಲಿ ಕೌಡಿಚ್ಚಾರಿನ ಆಶಾ ಮತ್ತು ಆಕೆಯ ಅಪ್ರಾಪ್ತಾ ಬಾಲಕಿಗೆ ಠಾಣೆಗೆ ಕರೆಸಿ ಚಿತ್ರಹಿಂಸೆ ನೀಡಿದ್ದು, ಸಂತ್ರಸ್ತರು ಪುತ್ತೂರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ನಡುವೆ ಜಿಪಂ ಅಧ್ಯಕ್ಷರು ಬಾಲಕಿಯನ್ನು ನೋಡಲು ಆಸ್ಪತ್ರೆಗೆ ತೆರಳಿದ್ದು, ಕರ್ತವ್ಯದಲ್ಲಿದ್ದ ಮಹಿಳಾ ವೈದ್ಯರು ಸ್ಥಳಕ್ಕೆ ಬಂದಿರಲಿಲ್ಲ. ಬೇರೆ ವಾರ್ಡಿನಲ್ಲಿ ಕರ್ತವ್ಯದಲ್ಲಿದ್ದ ಕಾರಣ ಹೋಗಿರಲಿಲ್ಲ. ಇದರಿಂದ ಸಿಟ್ಟಾದ ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ವೈದ್ಯರ ಚೇಂಬರಿಗೆ ಆಗಮಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ.
Advertisement
Advertisement
ನಾನು ಕರೆದರೂ, ಬಾರದೆ ನಿರ್ಲಕ್ಷ್ಯ ತೋರಿದ್ದೀರಿ. ನೀವು ಜನಸಾಮಾನ್ಯರು ಬಂದರೆ ಹೀಗೆ ನಿರ್ಲಕ್ಷ್ಯ ತೋರಿಸುವುದಾ? ನಿಮ್ಮ ವಿರುದ್ಧ ಜಿಲ್ಲಾ ಆರೋಗ್ಯಾಧಿಕಾರಿಗೆ ದೂರು ಕೊಡುತ್ತೇನೆ ಎನ್ನುತ್ತಾ ದಬಾಯಿಸಿದ್ದಾರೆ. ಡ್ಯೂಟಿ ಡಾಕ್ಟರ್, ತಾನು ಬೇರೆ ಕಡೆ ರೋಗಿಗಳನ್ನು ನೋಡುತ್ತಿದ್ದೆ ಎಂದರೂ, ಜಿಪಂ ಅಧ್ಯಕ್ಷರು ತಣ್ಣಗಾಗಲಿಲ್ಲ. ಹೀಗೆ ದಬಾಯಿಸಿದ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದ್ದು ಭಾರೀ ಟೀಕೆ ಕೇಳಿಬಂದಿದೆ.
Advertisement
ಜಿಪಂ ಅಧ್ಯಕ್ಷರು ಬಂದ ಮಾತ್ರಕ್ಕೆ ಓಡೋಡಿ ಬರಬೇಕಿತ್ತಾ ಎನ್ನುವ ಪ್ರಶ್ನೆಯನ್ನು ಸಾರ್ವಜನಿಕರು ಹಾಕುತ್ತಿದ್ದಾರೆ. ದೌರ್ಜನ್ಯ ಪ್ರಕರಣ ಸಂಬಂಧಿಸಿ ಪುತ್ತೂರಿನ ಸಂಪ್ಯ ಠಾಣೆಯ ಇಬ್ಬರು ಮಹಿಳಾ ಪೇದೆ ಸೇರಿದಂತೆ ಮೂವರನ್ನು ಜಿಲ್ಲಾ ಎಸ್ಪಿ ಲಕ್ಷ್ಮೀಪ್ರಸಾದ್ ಅಮಾನತುಗೊಳಿಸಿದ್ದಾರೆ. ಕಳ್ಳತನ ಪ್ರಕರಣದಲ್ಲಿ ಪೊಲೀಸರು ಕುಟುಂಬವನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದರು.