ಬೆಳಗಾವಿ: ಗಣೇಶ ಉತ್ಸವ ಮೆವಣಿಗೆಯಲ್ಲಿ ಡಿಜೆ ಬೇಡ ಎಂದು ಪೊಲೀಸರಿಗೆ ಮನವಿ ಮಾಡಿದ್ದ ವ್ಯಕ್ತಿಗಳ ಮನೆಯೊಳಗೆ ಪುಂಡರು ಪಟಾಕಿ ಎಸೆದಿದ್ದಾರೆ. ಪರಿಣಾಮ ಜಿಲ್ಲೆಯ ಸವದತ್ತಿ ತಾಲೂಕಿನ ಸತ್ತಿಗೇರಿ ಗ್ರಾಮದಲ್ಲಿ ಬಿಗುವಿನ ಪರಿಸ್ಥಿತಿ ನಿರ್ಮಾಣವಾಗಿದೆ.
ಸತ್ತಿಗೇರಿ ಗ್ರಾಮದಲ್ಲಿ ಗ್ರಾಮಸ್ಥರು ಹಾಗೂ ಯುವಕರ ತಂಡ ಅದ್ಧೂರಿಯಾಗಿ ಗಣೇಶ ಹಬ್ಬವನ್ನು ಆಚರಿಸಿದ್ದರು. ಗಣಪತಿ ವಿಸರ್ಜನೆ ವೇಳೆ ಡಿಜೆ ಅನುಮತಿ ನೀಡಿ ಎಂದು ಪೊಲೀಸರ ಬಳಿ ಮನವಿ ಮಾಡಿಕೊಂಡಿದ್ದರು. ಆದರೆ ಗ್ರಾಮದ ಸರನಾಡಗೌಡ್ರ ಸೇರಿದಂತೆ ಕೆಲವು ವ್ಯಕ್ತಿಗಳು ಗಣೇಶ ವಿಸರ್ಜನೆ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಡಿಜೆ ಹಾಕಲು ಅನುಮತಿ ನೀಡಬಾರದೆಂದು ಪೊಲೀಸರಿಗೆ ದೂರು ಕೊಟ್ಟಿದ್ದರು.
ಪೊಲೀಸರಿಗೆ ಡಿಜೆ ಬಳಸದಂತೆ ದೂರು ಕೊಟ್ಟ ಹಿನ್ನೆಲೆಯಲ್ಲಿ, ಆಕ್ರೋಶಗೊಂಡ ಕೆಲ ಯುವಕರು ಗಣೇಶ ಉತ್ಸವದ ಮೆರವಣಿಗೆಯ ವೇಳೆ ಉದ್ದೇಶ ಪೂರ್ವಕವಾಗಿ ದೂರು ಕೊಟ್ಟ ಸರನಾಡಗೌಡ್ರ ಸೇರಿದಂತೆ ಹಲವರ ಮನೆಗಳ ಒಳಗೆ ಪಟಾಕಿ ಹಚ್ಚಿ ಎಸೆದಿದ್ದಾರೆ. ಅಲ್ಲದೆ ಮನೆ ಮುಂದೆ ಪಟಾಕಿ ಹಚ್ಚಿ ಕುಣಿದು ಕುಪ್ಪಳಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯುವಕರ ಈ ವರ್ತನೆಯಿಂದಾಗಿ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಈ ಬಗ್ಗೆ ಮುರಗೋಡು ಪೊಲೀಸರಿಗೆ ಮಾಹಿತಿ ನೀಡಿದ್ರೂ ಯಾವುದೇ ಪ್ರಯೋಜನವಾಗಿಲ್ಲ. ಸದ್ಯ ಗ್ರಾಮದಲ್ಲಿನ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡತಂದಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv