ಮಂಗಳೂರು: ನಕಲಿ ಏಜೆನ್ಸಿ ಮೂಲಕ ಕುವೈತ್ ರಾಷ್ಟ್ರಕ್ಕೆ ತೆರಳಿ, ಬೀದಿಗೆ ಬಿದ್ದಿದ್ದ ಕರಾವಳಿ ಮೂಲದ 19 ಮಂದಿ ಯುವಕರು ಕೊನೆಗೂ ತಾಯ್ನಾಡಿಗೆ ಮರಳಿದ್ದಾರೆ.
ಗುರುವಾರ ಮುಂಬೈಗೆ ವಿಮಾನದಲ್ಲಿ ಬಂದಿದ್ದ ಯುವಕರನ್ನು ಇಂದು ಬೆಳಗ್ಗೆ ಬಸ್ ಮೂಲಕ ಮಂಗಳೂರಿಗೆ ಕರೆ ತರಲಾಯಿತು. ಅನಿವಾಸಿ ಉದ್ಯಮಿಗಳಾದ ಮೋಹನ್ ದಾಸ್ ಕಾಮತ್, ರಾಜ್ ಭಂಡಾರಿ ಕುವೈತ್‍ನಲ್ಲಿ ಸಿಕ್ಕಿಬಿದ್ದಿದ್ದ ಯುವಕರಿಗೆ ಆಶ್ರಯ ನೀಡಿ, ವಿಮಾನದ ಟಿಕೆಟ್ ವ್ಯವಸ್ಥೆ ಮಾಡಿದ್ದಾರೆ.
Advertisement
Advertisement
ಮಂಗಳೂರಿನ ಮಾಣಿಕ್ಯ ಅಸೋಸಿಯೇಟ್ಸ್ ಎನ್ನುವ ಏಜೆನ್ಸಿ ಮೂಲಕ ತೆರಳಿದ್ದ ನೂರಾರು ಯುವಕರು, ಅಲ್ಲಿ ಉದ್ಯೋಗ ಸಿಗದೇ ಬೀದಿ ಪಾಲಾಗಿದ್ದರು. ಹಿಂತಿರುಗಿ ಬರಲು ವೀಸಾ ಇಲ್ಲದೆ, ಊಟಕ್ಕೂ ಗತಿಯಿಲ್ಲದ ಸ್ಥಿತಿ ಒದಗಿತ್ತು. ಬಳಿಕ ಯುವಕರು ಒಂದೆಡೆ ಸೇರಿ, ವಿಡಿಯೋ ಮಾಡಿ ಮಂಗಳೂರು ಶಾಸಕ ವೇದವ್ಯಾಸ ಕಾಮತ್ ಮೂಲಕ ರಕ್ಷಣೆಗೆ ಮೊರೆಹೋಗಿದ್ದರು.
Advertisement
Advertisement
ಕೂಡಲೇ ಎಚ್ಚೆತ್ತ ಶಾಸಕ ವೇದವ್ಯಾಸ ಕಾಮತ್, ಭಾರತೀಯ ವಿದೇಶಾಂಗ ಇಲಾಖೆ ಮೂಲಕ ರಾಯಭಾರ ಕಚೇರಿ ಸಂಪರ್ಕಿಸಿದ್ದಲ್ಲದೆ, ಅಲ್ಲಿರುವ ಕರಾವಳಿ ಮೂಲದ ಉದ್ಯಮಿಗಳ ಮೂಲಕ ರಕ್ಷಣಾ ವ್ಯವಸ್ಥೆ ಮಾಡಿದ್ದಾರೆ. ಎರಡು ತಿಂಗಳ ನಿರಂತರ ಶ್ರಮದಿಂದ ಇದೀಗ 19 ಮಂದಿ ಮಂಗಳೂರು ತಲುಪಿದ್ದಾರೆ. ಹಲವರು ಕುವೈತ್‍ನಲ್ಲಿ ಸಿಕ್ಕಿಬಿದ್ದಿದ್ದು ಕರೆ ತರುವ ವ್ಯವಸ್ಥೆ ಮಾಡಲಾಗುತ್ತಿದೆ.