ಜೈಪುರ: 6 ಜನ ಯುವಕರು 40 ವರ್ಷದ ವಿವಾಹಿತ ಮಹಿಳೆಯ ಮೇಲೆ ಅತ್ಯಾಚಾರ ಎಸಗಿ, ರೇಪ್ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.
ರಾಜಸ್ಥಾನ ರಾಜ್ಯದ ಬಾರಾನಾ ಜಿಲ್ಲೆಯಲ್ಲಿ ಒಂದು ತಿಂಗಳ ಹಿಂದೆ ಘಟನೆ ನಡೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಂತ್ರಸ್ತೆ ಮಹಿಳೆ ಬಾರಾನಾ ಮಹಿಳಾ ಪೊಲೀಸ್ ಠಾಣೆಯಲ್ಲಿ ಮಾರ್ಚ್ 5ರಂದು ದೂರು ದಾಖಲಿಸಿದ್ದಾರೆ ಅಂತಾ ಇಂದು ಠಾಣೆಯ ಅಧಿಕಾರಿ ಅನಿಸ್ ಅಹ್ಮದ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಅಂದು ಆಗಿದ್ದೇನು?: ಮಹಿಳೆ ಕೋಟಾ ನಗರದ ದಾಬಾವೊಂದರಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ಅಂದಾಜು ಒಂದು ತಿಂಗಳ ಹಿಂದೆ ಮಹಿಳೆ ಬಾರಾನಾ ಜಿಲ್ಲೆಯ ತನ್ನ ಸಂಬಂಧಿಯ ಮನೆಗೆ ಬಂದಿದ್ದಾರೆ. ಈ ವೇಳೆ ಪರಿಚಯಿರುವ ಚೇತನ್ ಮೀನಾ (21) ಎಂಬಾತ ಬೈಕಿನಲ್ಲಿ ಡ್ರಾಪ್ ನೀಡೋದಾಗಿ ಹೇಳಿ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದಾನೆ. ಚೇತನ್ ಕರೆದುಕೊಂಡು ಹೋಗುವ ಮೊದಲೇ ಅಲ್ಲಿ ಐವರು ಯುವಕರಿದ್ದರು ಎಂದು ಸಂತ್ರಸ್ತೆ ತಿಳಿಸಿದ್ದಾರೆ.
ಬೆದರಿಕೆ: ಸಾಮೂಹಿಕ ಅತ್ಯಾಚಾರದ ಬಳಿಕ ಮಹಿಳೆಯನ್ನು ಆಕೆಯ ಸಂಬಂಧಿಕರ ಮನೆಗೆ ಡ್ರಾಪ್ ಮಾಡಿ ಹೋಗಿದ್ದಾರೆ. ಮತ್ತೆ ಮರುದಿನ ಮನೆಗೆ ಬಂದ ಯುವಕರು ವಿಷಯವನ್ನು ಯಾರಿಗಾದ್ರೂ ತಿಳಿಸಿದ್ರೆ ನಿಮ್ಮ ಕುಟುಂಬಸ್ಥರನ್ನು ಕೊಲ್ಲಲಾಗುವುದು ಎಂದು ಬೆದರಿಕೆ ಹಾಕಿದ್ದಾರೆ. ಕೃತ್ಯ ಎಸಗಿದ ಬಳಿಕ ದೃಶ್ಯಗಳನ್ನು ಮೊಬೈಲ್ ನಲ್ಲಿ ಶೂಟ್ ಮಾಡಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.
ಅತ್ಯಾಚಾರದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಮಹಿಳೆ ಆರು ಜನ ಯುವಕರ ವಿರುದ್ಧ ದೂರು ದಾಖಲಿಸಿದ್ದಾರೆ. ಆರೋಪಿಗಳ ವಿರುದ್ಧ ಸೆಕ್ಷನ್ 376ರ ಅನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿಗಳ ಬಂಧನಕ್ಕಾಗಿ ವಿಶೇಷ ತಂಡವನ್ನು ರಚಿಸಲಾಗಿದೆ ಅಂತಾ ಠಾಣೆಯ ಅಧಿಕಾರಿ ಅನಿಸ್ ಅಹ್ಮದ್ ಹೇಳಿದ್ದಾರೆ.