ಬೆಂಗಳೂರು: 20 ಜನ ಯುವಕರ ತಂಡವೊಂದು ರಾತ್ರಿ ವೇಳೆ ಗ್ರಾಮಕ್ಕೆ ನುಗ್ಗಿ ಮನೆಯ ಬಳಿ ನಿಲ್ಲಿಸಿದ್ದ ಕಾರುಗಳ ಗಾಜುಗಳನ್ನು ಪುಡಿ ಪುಡಿ ಮಾಡಿದ್ದಲ್ಲದೆ ಕೇಳಲು ಬಂದ ಗ್ರಾಮಸ್ಥರ ಮೇಲೆ ಲಾಂಗ್ ಮಚ್ಚುಗಳಿಂದ ಹಲ್ಲೆ ನಡೆಸಿರುವಂತಹ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಸಿಡಿಹೊಸಕೋಟೆ ಗ್ರಾಮದಲ್ಲಿ ನಡೆದಿದೆ.
ಮಧ್ಯರಾತ್ರಿ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಶ್ರೀರಾಮ ಎಂಬವರ ಮನೆ ಬಳಿ ನಿಲ್ಲಿಸಿದ್ದ ಕಾರಿನ ಗಾಜುಗಳನ್ನು ಯುವಕರು ಜಖಂ ಮಾಡುತ್ತಿದ್ದರು. ಈ ವೇಳೆ ಅಕ್ಕಪಕ್ಕದ ಮನೆಯವರು ಹೊರಗೆ ನೋಡುತ್ತಿದ್ದಂತೆ ಅವರ ಮೇಲೆಯೂ ಯುವಕರು ಲಾಂಗು, ಮಚ್ಚು ಹಾಗು ಚಾಕುಗಳಿಂದ ಹಲ್ಲೆ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಶ್ರೀರಾಮ ಮನೆಯಲ್ಲಿದ್ದ ಪಿಸ್ತೂಲಿನಿಂದ ಗಾಳಿಯಲ್ಲಿ ಮೂರಕ್ಕೂ ಹೆಚ್ಚು ಬಾರಿ ಗುಂಡು ಹಾರಿಸಿದ್ದು, ಇದರಿಂದ ಭಯಭೀತರಾದ ಯುವಕರು ಅಲ್ಲಿಂದ ಪರಾರಿಯಾಗಿದ್ದಾರೆ. ರಾತ್ರಿ 10 ಗಂಟೆಯ ಸಮಯದಲ್ಲಿ ಘಟನೆ ನಡೆದಿದ್ದರಿಂದ ಗ್ರಾಮದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿತ್ತು.
ಈ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪಿಎಸ್‍ಐ ಹಾಗು ಪೊಲೀಸರ ತಂಡ ಹಲ್ಲೆಗೊಳಗಾಗಿದ್ದ ಪ್ರಕಾಶ್ ಅವರನ್ನು ಆನೇಕಲ್‍ನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಎರಡು ದಿನಗಳ ಹಿಂದೆ ಗ್ರಾಮ ಪಂಚಾಯ್ತಿಯ ಗ್ರಾಮ ಸಭೆಯೊಂದು ನಡೆದಿತ್ತು.
ಸಭೆಯಲ್ಲಿ ಜಮೀನಿನ ವಿಚಾರಕ್ಕೆ ಶ್ರೀರಾಮ ಹಾಗು ರವಿ ಎಂಬಾತನ ನಡುವೆ ಮಾತಿನ ಚಕಮಕಿ ನಡೆದಿತ್ತು. ಈಗ ಇದೇ ವಿಚಾರಕ್ಕೆ ರಾತ್ರಿ ಯುವಕರನ್ನು ಕರೆದುಕೊಂಡು ಬಂದು ಗಲಾಟೆ ಮಾಡಿದ್ದಾರೆ ಎಂದು ಶ್ರೀರಾಮ ಆರೋಪಿಸಿದ್ದಾರೆ. ಹಲ್ಲೆಗೊಳಗಾದ ಪ್ರಕಾಶ್ ಗಲಾಟೆ ಯಾಕೆ ಮಾಡುತ್ತಿದೀರಾ ಎಂದು ಕೇಳಲು ಹೋದಾಗ ಮಚ್ಚಿನಿಂದ ಹಲ್ಲೆ ಮಾಡಿರುವುದಾಗಿ ತಿಳಿಸಿದ್ದಾರೆ.