ಚಾಮರಾಜನಗರ: ನಿಮ್ಮನ್ನು ಕಣ್ಣಾರೆ ನೋಡಿದ ಮೇಲೆ ನನ್ನ ಕೊನೆಯ ಉಸಿರು ನಿಲ್ಲಲಿ ಎಂದು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರನ್ನು ನೋಡಲು ಕ್ಯಾನ್ಸರ್ ಪೀಡಿತ ಯುವಕ ಹಠ ಹಿಡಿದು ಕುಳಿತಿದ್ದಾರೆ.
ಸಿದ್ದರಾಜು ಕ್ಯಾನ್ಸರ್ ಪೀಡಿತ ಯುವಕ. ಸಿದ್ದರಾಜು ಚಾಮರಾಜನಗರದ ನಂಜದೇವನಪುರ ಗ್ರಾಮದವರಾಗಿದ್ದು, ಸುದೀಪ್ ಅವರ ಅಪ್ಪಟ್ಟ ಅಭಿಮಾನಿ. ಸದ್ಯ ಈಗ ಅವರು ಸುದೀಪ್‍ರನ್ನು ನೋಡಲು ಹಠ ಹಿಡಿದು ಕುಳಿತಿದ್ದಾರೆ. ಇತ್ತ ಸಿದ್ದರಾಜು ಚಿಕಿತ್ಸೆಗಾಗಿ ವೃದ್ಧ ದಂಪತಿ ಪರದಾಡುತ್ತಿದ್ದಾರೆ.
ಸಿದ್ದರಾಜು ಅವರ ತಂದೆ ಹುಟ್ಟು ಕುರುಡರಾಗಿದ್ದು, ಭಿಕ್ಷೆ ಬೇಡಿ ತನ್ನ ಮಗನಿಗೆ ಚಿಕಿತ್ಸೆ ಕೊಡಿಸುತ್ತಿದ್ದಾರೆ. ತಂದೆಗೆ ಊರುಗೋಲಾಗಬೇಕಾದ ಮಗ ಕೈ, ಕಾಲು ಸ್ವಾಧೀನ ಕಳೆದುಕೊಂಡು ಕಳೆದ ಒಂದೂವರೆ ವರ್ಷದಿಂದ ಹಾಸಿಗೆ ಹಿಡಿದಿದ್ದಾರೆ. ಮಗನನ್ನು ಉಳಿಸಿಕೊಳ್ಳಲು ತಂದೆ-ತಾಯಿ ಕಣ್ಣೀರು ಹಾಕುತ್ತಾ ಸಹಾಯ ಹಸ್ತಕ್ಕಾಗಿ ಅಂಗಲಾಚುತ್ತಿದ್ದಾರೆ.
ಸರ್ವಿಕಲ್ ಕ್ಯಾನ್ಸರ್ ಕಾಯಿಲೆಯಿಂದ ಸಿದ್ದರಾಜು ಬಳಲುತ್ತಿದ್ದು, ಸಾವಿನ ಅಂತಿಮ ಕ್ಷಣಗಳನ್ನು ಎಣಿಸುತ್ತಿದ್ದಾರೆ. ಅಲ್ಲದೆ ಸಾಯುವುದಕ್ಕೂ ಮುನ್ನ ಒಮ್ಮೆ ಸುದೀಪ್ ನೋಡಲು ಬಯಸುತ್ತಿದ್ದಾರೆ. ಸುದೀಪಣ್ಣ ಒಮ್ಮೆ ಬಂದು ನನ್ನ ನೋಡಿ. ನಿಮ್ಮ ಕಣ್ಣಾರೆ ನೋಡಿದ ಮೇಲೆ ನನ್ನ ಕೊನೆ ಉಸಿರು ನಿಲ್ಲಲಿ ಎಂದು ಸಿದ್ದರಾಜು ಹಂಬಲಿಸುತ್ತಿದ್ದಾರೆ.
ನನಗೆ ಒಂದೂವರೆ ವರ್ಷದಿಂದ ಸರ್ವಿಕಲ್ ಕ್ಯಾನ್ಸರ್ ಇದೆ. ನಾನು ಚಿಕ್ಕ ವಯಸ್ಸಿನಿಂದ ಸುದೀಪ್ ಅವರ ಅಪ್ಪಟ್ಟ ಅಭಿಮಾನಿಯಾಗಿದ್ದೇನೆ. ನಾನು ಅವರ ಯಾವುದೇ ಚಿತ್ರ ಇದ್ದರೂ ಫಸ್ಟ್ ಶೋಗೆ ಹೋಗುತ್ತಿದೆ. ಕೈ, ಕಾಲು ಸ್ವಾಧೀನ ಇಲ್ಲದಿದ್ದರೂ 5 ಗಂಟೆ ಶೋಗೆ ಹೋಗುತ್ತಿದ್ದೆ. ನಾನು ಈಗ ತುಂಬಾ ಕಷ್ಟದಲ್ಲಿದ್ದೇನೆ. ನನ್ನ ಎರಡೂ ಕೈ, ಕಾಲು ಸ್ವಾಧೀನ ಕಳೆದುಕೊಂಡಿದ್ದೇನೆ. ನನ್ನ ತಂದೆಗೆ ಕಣ್ಣು ಕಾಣಿಸುವುದಿಲ್ಲ. ಆದರೂ ಅವರು ಭಿಕ್ಷೆ ಬೇಡಿ ನನ್ನನ್ನು ನೋಡಿಕೊಳ್ಳುತ್ತಿದ್ದಾರೆ. ನೀವು ಎಲ್ಲೆ ಇದ್ದರೂ ನಮಗೆ ಸಹಾಯ ಮಾಡಿ ಎಂದು ಸುದೀಪ್ ಅವರಲ್ಲಿ ಸಿದ್ದರಾಜು ಮನವಿ ಮಾಡಿಕೊಂಡಿದ್ದಾರೆ.