ರಾಯಚೂರು: ಅನುಮಾನಾಸ್ಪದ ರೀತಿಯಲ್ಲಿ ಇಬ್ಬರು ಯುವಕರ ಮೃತದೇಹಗಳು ನಗರದ ಹಾಜಿ ಕಾಲೋನಿ ಬಳಿಯ ರೈಲ್ವೆ ಹಳಿ ಮೇಲೆ ಪತ್ತೆಯಾಗಿವೆ.
ಬೆಳಗಿನ ಜಾವ ಈ ಘಟನೆ ಬೆಳಕಿಗೆ ಬಂದಿದ್ದು, ಎರಡು ದೇಹಗಳು ಛಿದ್ರ ಛಿಧ್ರವಾಗಿವೆ. ಮೃತರನ್ನು ಜಮೀಷಿರ್ (25) ಮತ್ತು ಸಾದಿಕ್ (26) ಎಂದು ಗುರುತಿಸಲಾಗಿದೆ. ಹಾಜಿ ಕಾಲೋನಿಯ ಬಳಿಯ ರೈಲ್ವೆ ಹಳಿ ಮೇಲೆ ಸಂಜೆ ವೇಳೆ ಯುವಕರು ಮದ್ಯಪಾನ ಮಾಡುವುದು, ಹಳಿಗಳ ಮೇಲೆ ಗಂಟೆಗಟ್ಟಲೆ ಕುಳಿತುಕೊಳ್ಳುವುದು ಇತ್ತೀಚಿಗೆ ಸಾಮಾನ್ಯವಾಗಿದೆ. ಹೀಗಾಗಿ ಯುವಕರ ಸಾವಿನ ಬಗ್ಗೆ ನಾನಾ ಸಂಶಯಗಳು ಮೂಡಿವೆ.
ಸದ್ಯಕ್ಕೆ ಯುವಕರ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಆದರೆ ಕೊಲೆ ಮಾಡಿ ಮೃತದೇಹಗಳನ್ನು ತಂದು ರೈಲ್ವೆ ಹಳಿಯ ಮೇಲೆ ಹಾಕಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಮಾಹಿತಿ ತಿಳಿದು ಸ್ಥಳಕ್ಕೆ ರೈಲ್ವೆ ಪೊಲೀಸಲು ಬಂದು ಪರಿಶೀಲನೆ ಮಾಡಿದ್ದಾರೆ. ನಂತರ ಮೃತದೇಹಗಳನ್ನು ನಗರದ ಆಸ್ಪತ್ರೆಗೆ ರವಾನಿಸಿದ್ದರು.
ರಾಯಚೂರು ರೈಲ್ವೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ನಗರದ ರಿಮ್ಸ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆದಿದೆ. ಇತ್ತ ಮೃತ ಯುವಕರ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.