ಹಾವೇರಿ: ಕೊಟ್ಟ ಹಣವನ್ನು ಮರಳಿ ಕೊಡದಿದ್ದಕ್ಕೆ ಯುವಕ ಡೆತ್‍ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ಘಟನೆ ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಕುರುಬಗೊಂಡ ಗ್ರಾಮದಲ್ಲಿ ನಡೆದಿದೆ.
ಮನೋಜ್ ಕುಮಾರ್ ಬೆಣಗೇರಿ(26) ಆತ್ಮಹತ್ಯೆ ಮಾಡಿಕೊಂಡ ಯುವಕ. ಕಳೆದ ಎರಡು ವರ್ಷಗಳಿಂದ ಮನೋಜ್ ಕುಮಾರ್ ಬೇಕರಿಗಳಿಗೆ ಬಿಸ್ಕೆಟ್ ಸಪ್ಲೈ ಮಾಡುತ್ತಿದ್ದನು ಎಂದು ಹೇಳಲಾಗುತ್ತಿದೆ. ಅಲ್ಲದೆ ಮನೋಜ್, ಶ್ರೀಕಾಂತ್ ಬೆಳಲದವರ ಎಂಬವನಿಗೆ 3 ಲಕ್ಷ 40 ಸಾವಿರ ರೂ. ಸಾಲ ನೀಡಿದ್ದನು. ಆದರೆ ಶ್ರೀಕಾಂತ್ 90 ಸಾವಿರ ರೂ. ಹಣ ನೀಡಿ ಉಳಿದ ಹಣ ನೀಡುತ್ತಿರಲಿಲ್ಲ. ಹೀಗಾಗಿ ಮನೋಜ್ ಡೆತ್‍ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಡೆತ್‍ನೋಟ್‍ನಲ್ಲಿ ಏನಿದೆ?
ನನ್ನ ಸಾವಿಗೆ ಶ್ರೀಕಾಂತ್ ಬೆಳಲದವರ ಕಾರಣ. ಶ್ರೀಕಾಂತ್ ನನ್ನ ಜೊತೆ ಹಣ ತೆಗೆದುಕೊಂಡಿದ್ದು, ಕೊಡುವುದಕ್ಕೆ ಆಗುವುದಿಲ್ಲ ಎಂದು ಹೇಳಿದ್ದಾನೆ. ಹಾಗಾಗಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ಶ್ರೀಕಾಂತ್ ನನ್ನ ಬಳಿ 3 ಲಕ್ಷದ 40 ಸಾವಿರ ರೂ. ತೆಗೆದುಕೊಂಡಿದ್ದು, ಇದರಲ್ಲಿ 90 ಸಾವಿರ ರೂ. ಕೊಟ್ಟಿದ್ದಾನೆ. ಉಳಿದ ಹಣ ಕೇಳಿದರೆ ಕೊಡುವುದಿಲ್ಲ ಎಂದು ಪೀಡಿಸುತ್ತಿದ್ದಾನೆ. ಉಳಿದ ಹಣ ಕೊಡದಿದ್ದಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದೇನೆ ಎಂದು ಮನೋಜ್ ಡೆತ್‍ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಅಲ್ಲದೆ ಡೆತ್‍ನೋಟ್‍ನಲ್ಲಿ ಸಾರಿ ಅಮ್ಮಾ, ಅಪ್ಪಾ, ಆಂಟಿ ಹಾಗೂ ಅಜ್ಜಿ ಎಂದು ಬರೆದಿದ್ದಾನೆ. ಈ ವಿಷಯ ತಿಳಿಯುತ್ತಿದ್ದಂತೆ ಹಾವೇರಿ ಗ್ರಾಮೀಣ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಾವೇರಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.