ಬೆಂಗಳೂರು: ಪ್ರೀತ್ಸೆ ಎಂದು ಬೆನ್ನು ಬಿದ್ದ ಪಾಗಲ್ ಪ್ರೇಮಿಯ ಪ್ರೀತಿಯನ್ನು ನಿರಾಕರಿಸಿದ್ದಕ್ಕೆ ಯುವತಿಗೆ ರೇಪ್ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ ಘಟನೆ ಬೆಂಗಳೂರಿನ ಸಂಪಂಗಿರಾಮನಗರದಲ್ಲಿ ನಡೆದಿದೆ.
ರಕ್ಷಿತಾ(ಹೆಸರು ಬದಲಾಯಿಸಲಾಗಿದೆ) ಸಂಪಂಗಿರಾಮನಗರ ನಿವಾಸಿಯಾಗಿದ್ದು, ಈಗ ತಾನೇ ಆಕೆಯ ಕಾಲೇಜು ಮುಗಿದಿದೆ. ಆದರೆ ಅಷ್ಟರಲ್ಲಿ ಪಾಗಲ್ ಪ್ರೇಮಿಯೊಬ್ಬ ಆಕೆಗೆ ಪ್ರಪೋಸ್ ಮಾಡಿದ್ದು, ರಕ್ಷಿತಾ ಆತನ ಪ್ರೀತಿಯನ್ನು ನಿರಾಕರಿಸಿದ್ದಾಳೆ. ಇದರಿಂದ ಬೇಸರಗೊಂಡ ಪಾಗಲ್ ಪ್ರೇಮಿ, ಇವಳಿಲ್ಲದೇ ನಾನು ಬದುಕಲ್ಲ ಎಂದು ಮನೆಯಲ್ಲಿ ರಂಪಾಟ ಮಾಡಿದ್ದಾನೆ. ಆತನ ಸ್ನೇಹಿತರು, ಕುಟುಂಬಸ್ಥರು, ಪಾಗಲ್ ಪ್ರೇಮಿಗೆ ಬುದ್ಧಿ ಹೇಳುವ ಬದಲು ಆಕೆಗೆ ಟಾರ್ಚರ್ ನೀಡಲು ಶುರು ಮಾಡಿದ್ದಾರೆ.
ಪಾಗಲ್ ಪ್ರೇಮಿಯ ಸ್ನೇಹಿತರು ಯುವತಿ ಮನೆಯ ರೋಡಿನಲ್ಲಿ ನಿಂತು ಅಸಭ್ಯವಾಗಿ ವರ್ತಿಸಿದ್ದಾರೆ. ಅಲ್ಲದೆ ರೇಪ್ ಮಾಡುತ್ತೀನಿ ಎಂದು ಬೆದರಿಕೆ ಹಾಕಲು ಶುರು ಮಾಡಿದ್ದಾರೆ. ಈ ಯುವಕರಿಗೆ ಪಾಗಲ್ ಪ್ರೇಮಿಯ ಚಿಕ್ಕಮ್ಮ ಕೂಡ ಸಾಥ್ ನೀಡಿದ್ದು, ಅವರು ಕೂಡ ಅಸಭ್ಯವಾಗಿ ಮಾತಾನಾಡ್ತಾರೆ ಎಂದು ರಕ್ಷಿತಾ ತನ್ನ ಅಳಲನ್ನು ತೋಡಿಕೊಂಡಿದ್ದಾಳೆ.
ಈ ಬಗ್ಗೆ ರಕ್ಷಿತಾ ಪೊಲೀಸ್ ಠಾಣೆಗೆ ದೂರು ನೀಡಿದ್ದರೆ, ಇದೆಲ್ಲ ಜಗಳ ಯಾಕೆ ಸುಮ್ಮನಿರಿ. ವಿದ್ಯಾಭ್ಯಾಸ ಹಾಳು ಮಾಡಿಕೊಳ್ಳಬೇಡಿ ಎಂದು ಪೊಲೀಸರು ಹೇಳುತ್ತಿದ್ದಾರೆ. ತುಂಬಾ ಒತ್ತಡ ಹೇರಿದ ಮೇಲೆ ಪೊಲೀಸರು ಈ ಯುವಕರನ್ನು ಅರೆಸ್ಟ್ ಮಾಡಿ ಒಂದು ಬಾರಿ ಎರಡು ಮೂರು ದಿನ ಅರೆಸ್ಟ್ ಮಾಡುತ್ತಾರೆ. ನಂತರ ಮತ್ತೆ ಅದೇ ಕಾಟ ಶುರುವಾಗುತ್ತದೆ ಎಂದು ರಕ್ಷಿತಾ ದೂರಿದ್ದಾಳೆ.
ಯುವಕರ ಕಾಟದಿಂದ ನೊಂದ ರಕ್ಷಿತಾ ಸಂಪಗಿರಾಮನಗರ ಠಾಣೆಯಲ್ಲಿಯೇ ಆತ್ಮಹತ್ಯೆಗೂ ಯತ್ನಿದ್ದಾಳೆ. ಪೊಲೀಸರು ನ್ಯಾಯ ಕೊಡಿಸುತ್ತಿಲ್ಲ. ಈ ಯುವಕರ ಕಾಟಕ್ಕೆ ನೊಂದು ಹೋಗಿದ್ದೇನೆ ಎಂದು ಅಳಲು ತೋಡಿಕೊಂಡಿದ್ದಾಳೆ. ಈ ಬಗ್ಗೆ ಪ್ರತಿಕ್ರಿಯಿಸಿದ ರಕ್ಷಿತಾ ತಾಯಿ, ಅಂದು ರಾತ್ರಿ ಅರೆಸ್ಟ್ ಆಗಿ ರಿಲೀಸ್ ಆಗಿ ಅವರೆಲ್ಲ ಮನೆಗೆ ಬಂದು ಇವಳಿಗೆ ರೇಪ್ ಮಾಡುತ್ತೀನಿ ಎಂದು ಹೇಳಿದ್ದಾರೆ. ಪೊಲೀಸರಿಗೂ ಹೇಳಿದ್ದೀವಿ. ಆದರೆ ಅವರು ಕ್ಯಾರೆ ಎಂದಿಲ್ಲ. ಈಗ ನನ್ನ ಮಗಳು ವಿಷ ಕುಡಿದಿದ್ದಾಳೆ ಎಂದು ತಿಳಿಸಿದ್ದಾರೆ.