ರಾಯಚೂರು: ಬೈಕ್ ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಕುಕನೂರು ಬಳಿ ನಡೆದಿದೆ.
18 ವರ್ಷದ ಭಗವಂತ ಮೃತ ಯುವಕ. ಎಂದಿನಂತೆ ಇಂದು ಕೂಡ ಭಗವಂತ ತರಕಾರಿ ಮಾರಾಟ ಮಾಡಲೆಂದು ಕುಕನೂರಿನಿಂದ ರಾಯಚೂರಿಗೆ ಹೊರಟಿದ್ದನು. ಮುಂಜಾನೆ ಸುಮಾರು 5.30ರ ವೇಳೆಗೆ ರೋಡ್ ಖಾಲಿಯಿದ್ದರಿಂದ ಅತೀ ವೇಗದಲ್ಲಿದ್ದ ಲಾರಿಯೊಂದು ಬೈಕ್‍ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಭಗವಂತ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಈ ಘಟನೆ ಸಂಬಂಧ ರಾಯಚೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತದ ನಂತರ ಚಾಲಕ ಲಾರಿಯೊಂದಿಗೆ ಪರಾರಿಯಾಗಿದ್ದಾನೆ. ಸದ್ಯ ಮೃತ ಭಗವಂತನ ಕುಟುಂಬಸ್ಥರು ಆತನ ಕಣ್ಣುಗಳನ್ನ ದಾನ ಮಾಡಲು ಮುಂದಾಗಿದ್ದಾರೆ.