ಪ್ರೀತಿ ನಿರಾಕರಿಸಿದ್ದಕ್ಕೆ ಯುವತಿ ಮನೆ ಮುಂದೆಯೇ ಪೆಟ್ರೋಲ್ ಸುರಿದು ಬೆಂಕಿ ಹಚ್ಕೊಂಡು ಭಸ್ಮವಾದ!

Public TV
1 Min Read
KENGERI

ಬೆಂಗಳೂರು: ಗೆಳತಿಯು ತನ್ನ ಪ್ರೀತಿಯನ್ನು ನಿರಾಕರಿಸಿದಳೆಂದು ಬೇಸತ್ತ ಯುವಕನೋರ್ವ ಮೈಮೇಲೆ ಪೆಟ್ರೋಲ್ (Petrol) ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಮೃತಪಟ್ಟ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

ಈ ಘಟನೆ ಬೆಂಗಳೂರಿನಲ್ಲಿ ಕೆಂಗೇರಿಯ (Kengeri) ಕೊಡಿಗೆ ಪಾಳ್ಯದಲ್ಲಿ ಬುಧವಾರ ಬೆಳಗ್ಗೆ ನಡೆದಿದೆ. ಮೃತನನ್ನು ರಾಕೇಶ್ ಎಂದು ಗುರುತಿಸಲಾಗಿದ್ದು, ಈತ ಆನೇಕಲ್ ತಾಲೂಕಿನ ಜಿಗಣಿಯ ಕಲ್ಲುಬಾಳು ಗ್ರಾಮದ ನಿವಾಸಿ.

ನಡೆದಿದ್ದೇನು..?: ಮೃತ ರಾಕೇಶ್ ಕಳೆದ ಐದಾರು ವರ್ಷದಿಂದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಆದರೆ ಇತ್ತೀಚೆಗೆ ಆ ಯುವತಿ ಬೇರೊಬ್ಬ ಯುವಕನ ಜೊತೆ ಮದುವೆಗೆ ಒಪ್ಪಿಕೊಂಡಿದ್ದಳು. ಪರಿಣಾಮ ರಾಕೇಶ್‍ನನ್ನು ನಿಧಾನವಾಗಿ ದೂರ ಮಾಡುತ್ತಾ ಬಂದಳು. ಇತ್ತ ಪ್ರಿಯತಮೆಯ ವರ್ತನೆಯಿಂದ ಅನುಮಾನಗೊಂಡ ರಾಕೇಶ್, ಆಕೆಯನ್ನು ಪ್ರಶ್ನೆ ಮಾಡಿದ್ದಾನೆ. ಈ ವೇಳೆ ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆದಿದೆ.

KENGERI POLICE STATION

ಗಲಾಟೆ ನಡುವೆ ಯುವತಿ ತನ್ನ ನಿರ್ಧಾರದ ಕುರಿತು ಬಾಯಿಬಿಟ್ಟಿದ್ದಾಳೆ. ಇದರಿಂದ ನೊಂದ ರಾಕೇಶ್ ಕಠಿಣ ನಿರ್ಧಾರ ಕೈಗೊಳ್ಳಲು ಮುಂದಾಗಿದ್ದು, ಯುವತಿಯ ಮನೆ ಮುಂದೆ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾನೆ. ಕೂಡಲೇ ರಾಕೇಶ್ ನನ್ನ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ರಾಕೇಶ್ ದೇಹದ ಬಹುತೇಕ ಭಾಗ ಸುಟ್ಟು ಹೋಗಿತ್ತು. ತೀವ್ರ ನೋವಿನಿಂದ ಬಳಲುತ್ತಿದ್ದ ರಾಕೇಶ್ ಬುಧವಾರ ರಾತ್ರಿ ಮೃತಪಟ್ಟಿದ್ದಾನೆ.

ಪ್ರಕರಣ ಸಂಬಂಧ ರಾಕೇಶ್ ಕುಟುಂಬಸ್ಥರು ಕೆಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Share This Article