ಶ್ರೀನಗರ: ಕಳೆದ ವರ್ಷ ಈದ್‍ಗೆ ಎಂದು ಮನೆಗೆ ಬರುತ್ತಿದ್ದ ಯೋಧನನ್ನು ಉಗ್ರರು ಕಿಡ್ನಾಪ್ ಮಾಡಿ ಹತ್ಯೆ ಮಾಡಿದ್ದರು. ಈಗ ಯೋಧನ ಹತ್ಯೆಯ ಸೇಡು ತೀರಿಸಿಕೊಳ್ಳಲು ಅವರ ಇಬ್ಬರು ತಮ್ಮಂದಿರು ಸೇನೆಗೆ ಸೇರಿದ್ದಾರೆ.
ಕಳೆದ ವರ್ಷ ಜೂನ್ 14 ರಂದು ಈದ್ ಹಬ್ಬ ಆಚರಿಸಲು ಯೋಧ ಔರಂಗಜೇಬ್ ಅವರು ಮನೆಗೆ ತೆರಳುತ್ತಿದ್ದರು. ಈ ವೇಳೆ ಜಮ್ಮು -ಕಾಶ್ಮೀರದ ಉಗ್ರರು ಪ್ಲ್ಯಾನ್ ಮಾಡಿ ಯೋಧ ಔರಂಗಜೇಬ್ ಅವರನ್ನು ಕಿಡ್ನಾಪ್ ಮಾಡಿ ಹತ್ಯೆ ಮಾಡಿದ್ದರು. ಹುತಾತ್ಮ ಯೋಧ ಔರಂಗಜೇಬ್ ಹತ್ಯೆಯ ಸೇಡು ತೀರಿಸಿಕೊಳ್ಳಲು ಈಗ ಅವರ ಇಬ್ಬರು ಸಹೋದರರಾದ ಮೊಹಮ್ಮದ್ ತಾರೀಕ್ ಹಾಗೂ ಮೊಹಮ್ಮದ್ ಶಬ್ಬೀರ್ ಸೇನೆಗೆ ಸೇರಿದ್ದಾರೆ.
Advertisement
Advertisement
ನಾವು ದೇಶಪ್ರೇಮಕ್ಕಾಗಿ ಹಾಗೂ ನಮ್ಮ ಸಹೋದರನ ಹತ್ಯೆಯ ಸೇಡು ತೀರಿಸಿಕೊಳ್ಳಲು ಸೇನೆಗೆ ಸೇರಿದ್ದೇವೆ. ದಕ್ಷಿಣ ಕಾಶ್ಮೀರದಲ್ಲಿ ಹಿಜ್‍ಬುಲ್ ಉಗ್ರರು ನನ್ನ ಸಹೋದರನನ್ನು ಹತ್ಯೆ ಮಾಡಿದ್ದರು ಎಂದು ಮೊಹಮ್ಮದ್ ಶಬ್ಬೀರ್ ಹೇಳಿದ್ದಾರೆ. ಇದನ್ನೂ ಓದಿ: ಮೇಜರ್ ಆದಿತ್ಯ ಕುಮಾರ್, ರೈಫಲ್‍ಮ್ಯಾನ್ ಔರಂಗಜೇಬ್‍ಗೆ ಶೌರ್ಯ ಚಕ್ರ ಪುರಸ್ಕಾರ
Advertisement
ವರದಿಗಳ ಪ್ರಕಾರ ಔರಂಗಜೇಬ್ ಅವರ ಸಹೋದರ ಮೊಹಮ್ಮದ್ ತಾರೀಕ್ ಅವರು ಪಂಜಾಬ್ ರೆಜಿಮೆಂಟ್‍ನಲ್ಲಿ ತರಬೇತಿ ಪಡೆಯಲಿದ್ದಾರೆ. ಈ ವೇಳೆ ಅವರು ಮಾತನಾಡಿ, ನಾವು ಪ್ರತಿಯೊಂದು ಲಿಖಿತ, ವೈದ್ಯಕೀಯ, ದೈಹಿಕ ಪರೀಕ್ಷೆಯಲ್ಲಿ ಪಾಸ್ ಆಗಿದ್ದೇವೆ. ಕಳೆದ ವರ್ಷ ಜೂನ್ 14ರಂದು ಉಗ್ರರು ನನ್ನ ಅಣ್ಣನನ್ನು ಹತ್ಯೆ ಮಾಡಿದ ನಂತರ ನಾವು ಸೇನೆ ಸೇರಲು ನಿರ್ಧರಿಸಿದ್ದೇವು ಎಂದು ತಿಳಿಸಿದ್ದಾರೆ.
Advertisement
ತಾರೀಕ್ ಹಾಗೂ ಶಬ್ಬೀರ್ ಅವರು ಮೇ ತಿಂಗಳಿನಲ್ಲಿ ಪೂಂಚ್‍ನ ಸುರಂಕೋಟೆಯಲ್ಲಿ ನಡೆದ ಸೇನಾ ನೇಮಕಾತಿ ಅಭಿಯಾನದಲ್ಲಿ ಆಯ್ಕೆ ಆಗಿದ್ದರು. ತಾರೀಕ್ ಹಾಗೂ ಶಬ್ಬೀರ್ ಅವರ ತಂದೆ ಮೊಹಮ್ಮದ್ ಹನೀಫ್ ಸೇನೆಯಲ್ಲಿ ಕಾರ್ಯ ನಿರ್ವಹಿಸಿದ್ದರು. ಇದೇ ವರ್ಷ ಅಂದರೆ ಫೆಬ್ರವರಿ 3ರಂದು ಪ್ರಧಾನಿ ನರೇಂದ್ರ ಮೋದಿ ಅವರ ಜಮ್ಮು ರ‍್ಯಾಲಿಯಲ್ಲಿ ಹನೀಫ್ ಅವರು ಬಿಜೆಪಿಗೆ ಸೇರ್ಪಡೆಯಾಗಿದ್ದರು.
ನನ್ನ ಇಬ್ಬರು ಮಕ್ಕಳಾದ ತಾರೀಕ್ ಹಾಗೂ ಶಬ್ಬೀರ್ ತಮ್ಮ ಸಹೋದರ ಔರಂಗಜೇಬ್ ಸಾಹಸದಿಂದ ಪ್ರೇರಣೆಗೊಂಡಿದ್ದಾರೆ. ಉಗ್ರರು ನನ್ನ ಮಗನಿಗೆ ಮೋಸ ಮಾಡಿ ಹತ್ಯೆ ಮಾಡಿದ್ದಾರೆ. ನನ್ನ ಮಗ ಉಗ್ರರ ಜೊತೆ ಸೆಣಸಾಡಿ ಹುತ್ಮಾತನಾಗಿದ್ದರೆ, ನನಗೆ ಬೇಸರವಾಗುತ್ತಿರಲಿಲ್ಲ. ಆದರೆ ಅವರು ಮೋಸದಿಂದ ನನ್ನ ಮಗನ ಹತ್ಯೆ ಮಾಡಿದ್ದಾರೆ. ನನ್ನ ಇಬ್ಬರು ಮಕ್ಕಳು ಸೇನೆಗೆ ಸೇರಿರುವುದರಿಂದ ನನಗೆ ಹೆಮ್ಮೆ ಇದೆ. ನನ್ನ ಎದೆಯ ಮೇಲಿನ ಗಾಯ ಹಾಗೆಯೇ ಇದೆ. ನನ್ನ ಮಗನನ್ನು ಹತ್ಯೆ ಮಾಡಿದ ಉಗ್ರರ ಜೊತೆ ನಾನೇ ಹೋರಾಡಬೇಕು ಎಂದು ಒಮ್ಮೊಮ್ಮೆ ಅನಿಸುತ್ತದೆ. ಆದರೆ ಈಗ ನನ್ನ ಇಬ್ಬರು ಪುತ್ರರು ಈ ಉಗ್ರರನ್ನು ಮಟ್ಟಹಾಕುತ್ತಾರೆ ಎಂಬ ವಿಶ್ವಾಸವಿದೆ ಎಂದು ಹನೀಫ್ ಹೇಳಿದ್ದಾರೆ.
ಸೋಮವಾರ ರಜೌರಿಯಲ್ಲಿ ಭಾರತೀಯ ಸೇನೆ 100 ಹೊಸ ಯೋಧರನ್ನು ನೇಮಕಾತಿ ಮಾಡಿಕೊಂಡಿದೆ. ಇದರಲ್ಲಿ ತಾರೀಕ್ ಹಾಗೂ ಶಬ್ಬೀರ್ ಅವರು ಸೇರಿದ್ದಾರೆ. ತಾರೀಕ್ ಹಾಗೂ ಶಬ್ಬೀರ್ ಗೆ 16 ವರ್ಷದ ತಮ್ಮನಿದ್ದು ಆತ ಕೂಡ ಸೇನೆ ಸೇರಿ ದೇಶದ ಸೇವೆ ಮಾಡುತ್ತೇನೆ ಎಂದು ಹೇಳಿದ್ದಾನೆ.