ಮಂಡ್ಯ: ಕಾಲೇಜಿಗೆ ಹೋಗಿ ಬರುತ್ತೇನೆ ಎಂದು ಮನೆಯಿಂದ ಹೋದ ಯುವತಿ ಅಜ್ಞಾತ ಸ್ಥಳದಲ್ಲಿ ಸುಟ್ಟು ಕರಕಲಾಗಿರುವ ಸ್ಥಿತಿಯಲ್ಲಿ ಸಿಕ್ಕಿದ್ದು, ಆ ಯುವತಿಯನ್ನು ಆಕೆಯ ಪ್ರಿಯಕರನೇ ಕೊಲೆ ಮಾಡಿ ಸುಟ್ಟು ಹಾಕಿ ಪಾರಾರಿಯಾಗಿದ್ದಾನೆ ಎಂಬ ಆರೋಪ ಮಂಡ್ಯ ಜಿಲ್ಲೆಯ ಮಳವಳ್ಳಿ ಪಟ್ಟಣದಲ್ಲಿ ಕೇಳಿ ಬರುತ್ತಿದೆ.
Advertisement
ಮೃತ ದುರ್ದೈವಿಯನ್ನು ಯುಕ್ತಿ ಎಂದು ಗುರುತಿಸಲಾಗಿದೆ. ಜನವರಿ 27 ರಂದು ಕಾಲೇಜಿಗೆ ಹೋಗಿ ಬರುತ್ತೇನೆ ಎಂದು ಬೆಳಗ್ಗೆಯೇ ಮನೆಯಿಂದ ಯುಕ್ತಿ ಕಾಲೇಜಿಗೆ ಹೋಗಿದ್ದಳು. ಅಂದು ಸಂಜೆ 6 ಗಂಟೆಯಾದರೂ ಯುಕ್ತಿ ಮನೆಗೆ ಬಾರದ ಕಾರಣ ಆಕೆಯ ಪೋಷಕರು ಪೊಲೀಸ್ ಠಾಣೆಗೆ ದೂರು ನೀಡಲು ಮುಂದಾಗಿದ್ದಾರೆ. ಆದರೆ ಅಂದು ಪೊಲೀಸರು ಈ ಬಗ್ಗೆ ಪ್ರಕರಣ ದಾಖಲು ಮಾಡಿಕೊಂಡಿಲ್ಲ. ಯುಕ್ತಿ ಮಳವಳ್ಳಿ ಪಟ್ಟಣದ ಶಶಿಕುಮಾರ್ ಎಂಬಾತನನ್ನು ಪ್ರೀತಿ ಮಾಡುತ್ತಿದ್ದಳು. ಯುಕ್ತಿ ಕಾಣೆಯಾದ ದಿನವೇ ಶಶಿಕುಮಾರ್ ಸಹ ನಾಪತ್ತೆಯಾಗಿದ್ದಾನೆ. ಹೀಗಾಗಿ ಯುಕ್ತಿ ಪೋಷಕರು ಮಾರನೇ ದಿನ ಬೆಳಗ್ಗೆ ಶಶಿಕುಮಾರ್ ಮೇಲೆ ಕಿಡ್ನಾಪ್ ಕೇಸ್ ಹಾಕಲು ಪೊಲೀಸ್ ಠಾಣೆಗೆ ಹೋದಾಗ ಪೊಲೀಸರು ಕಿಡ್ನಾಪ್ ಕೇಸ್ ದಾಖಲು ಮಾಡಿಕೊಳ್ಳದೇ ಮಿಸ್ಸಿಂಗ್ ಕಂಪ್ಲೇಂಟ್‍ನ್ನು ದಾಖಲು ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಉಜ್ವಲ ಭವಿಷ್ಯಕ್ಕೆ ನ್ಯಾನೋ ತಂತ್ರಜ್ಞಾನ ನಿರ್ಣಾಯಕ: ಬೊಮ್ಮಾಯಿ
Advertisement
Advertisement
ಇತ್ತ ಯುಕ್ತಿ ಶಶಿಕುಮಾರ್ ಜೊತೆ ಹೊರಟು ಹೋಗಿರಬೇಕೆಂದು ಆಕೆಯ ಪೋಷಕರು ಮನೆ ಮತ್ತು ಪೊಲೀಸ್ ಠಾಣೆಗೆ ಅಲೆದಾಡುತ್ತಿದ್ದರು. ಆದರೆ ಜನವರಿ 27 ರಂದು ಮಳವಳ್ಳಿ ತಾಲೂಕಿನ ಕಿರುಗಾವಲು ಗ್ರಾಮದ ನೀಲಗಿರಿ ತೋಪಿನಲ್ಲಿ ಯುವತಿಯ ಶವವೊಂದು ಸುಟ್ಟುಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗುತ್ತದೆ. ಈ ವೇಳೆ ಮಿಸ್ಸಿಂಗ್ ಕಂಪ್ಲೇಂಟ್ ಇದ್ದರೂ ಸಹ ಆ ಶವವನ್ನು ಯುಕ್ತಿ ಪೋಷಕರಿಗೆ ಪೊಲೀಸರು ತೋರಿಸಿರುವುದಿಲ್ಲ. ಪೊಲೀಸರೇ ಇದೊಂದು ಅನಾಥ ಶವ ಎಂದು ಅಂತ್ಯಸಂಸ್ಕಾರ ಮಾಡಿದ್ದರು. ಇದಾದ ಬಳಿಕ ಫೆಬ್ರವರಿ 17 ರಂದು ಪೊಲೀಸರು ಯುಕ್ತಿ ತಾಯಿಯ ವಾಟ್ಸ್‌ಆಪ್‌ಗೆ ಅನಾಥ ಶವದ ಮೈ ಮೇಲೆ ಇದ್ದ ಓಲೆ ಮತ್ತು ಉಂಗರವನ್ನು ಕಳುಹಿಸಿ ಇದು ನಿಮ್ಮ ಮಗಳದ್ದಾ ಎಂದು ಕೇಳಿದ್ದಾರೆ. ಇದನ್ನು ಕಂಡ ತಾಯಿ ಹೌದು ಇದು ನನ್ನ ಮಗಳದ್ದೇ ಎಂದು ಗುರುತಿಸಿದ್ದಾರೆ. ಈ ವೇಳೆ ಶಶಿಕುಮಾರ್ ಜೊತೆ ಮದುಯಾಗಲು ಯುಕ್ತಿ ಓಡಿ ಹೋಗಿದ್ದಾಳೆ ಎಂದುಕೊಂಡಿದ್ದ ಪೋಷಕರಿಗೆ ಆಕೆ ಕ್ರೂರವಾಗಿ ಸಾವನ್ನಪ್ಪಿದ್ದಾಳೆ ಎಂಬ ವಿಷಯ ತಿಳಿಯುತ್ತದೆ. ಈ ಮಧ್ಯೆ ಶಶಿಕುಮಾರ್ ಕುಟುಂಬದವರು ನಿಮ್ಮ ಮಗಳು, ನಮ್ಮ ಮಗ ಓಡಿ ಹೋಗಿದ್ದಾರೆ. ಅವರಿಗೆ ಮದುವೆ ಮಾಡೋಣಾ ಎಂದು ಯುಕ್ತಿ ಕುಟುಂಬದವರೊಂದಿಗೆ ಮಾತನಾಡಿದ್ದರು. ಆದರೆ ಇದೀಗ ಯುಕ್ತಿ ಕೊಲೆಯಾಗಿರುವುದರಿಂದ ಆ ಕೊಲೆ ಮಾಡಿರುವುದು ಶಶಿಕುಮಾರ್ ಎಂದು ಆಕೆಯ ಪೋಷಕರು ಆರೋಪ ಮಾಡುತ್ತಿದ್ದಾರೆ.
Advertisement
ಈ ಘಟನೆ ನಡೆದು ಇಲ್ಲಿಯವರೆಗೆ ಒಂದೂವರೆ ತಿಂಗಳಾದರೂ ಸಹ ಪೊಲೀಸರು ಆರೋಪಿಯನ್ನು ಬಂಧಿಸಿಲ್ಲ. ಅಲ್ಲದೇ ಕೊಲೆಯಾದ ದಿನದಿಂದಲೂ ಶಶಿಕುಮಾರ್ ಕಣ್ಮರೆಯಾಗಿದ್ದು, ಆತನ ಪತ್ತೆಯನ್ನು ಸಹ ಪೊಲೀಸರು ಮಾಡಿಲ್ಲ. ಇಡೀ ಪ್ರಕರಣವನ್ನು ಗಮನಿಸಿದರೆ ಶಶಿಕುಮಾರ್ ಆರೋಪಿ ಎಂದು ಎಲ್ಲಾ ಸಾಕ್ಷಿಗಳು ಬೆಟ್ಟು ಮಾಡಿ ತೋರಿಸುತ್ತಿವೆ. ಹೀಗಿದ್ದರೂ ಸಹ ಶಶಿಕುಮಾರ್‌ನನ್ನು ಪತ್ತೆ ಮಾಡದ ಕಾರಣ, ಪೊಲೀಸರು ಆತನನ್ನು ಈ ಪ್ರಕರಣದಿಂದ ಬಚಾವ್ ಮಾಡಲು ಪ್ರಯತ್ನ ಪಡುತ್ತಿದ್ದಾರೆ ಎಂದು ಯುಕ್ತಿ ಪೋಷಕರು ಆರೋಪ ಮಾಡುತ್ತಿದ್ದಾರೆ. ಇತ್ತ ಶಶಿಕುಮಾರ್ ಕುಟುಂಬಸ್ಥರು ನನ್ನ ಮಗನು ಸಹ ಆ ದಿನದಿಂದ ಕಾಣೆಯಾಗಿದ್ದಾನೆ. ಆತ ಏನು ಆಗಿದ್ದಾನೆ ಎಂದು ನಮಗೆ ಗೊತ್ತಿಲ್ಲ. ನಮ್ಮ ಮಗನನ್ನು ಸಹ ಪೊಲೀಸರು ಹುಡುಕಿಕೊಡಬೇಕು. ನನ್ನ ಮಗ ಅಲ್ಲ ಯಾರೇ ಯುಕ್ತಿ ಕೊಲೆ ಮಾಡಿದರೂ ಸಹ ಅವರಿಗೆ ಶಿಕ್ಷೆಯಾಗಬೇಕು ಎಂದು ಹೇಳುತ್ತಿದ್ದಾರೆ. ಇದನ್ನೂ ಓದಿ: ಜೇಮ್ಸ್ ಅಪ್ಪು ನಟನೆಯ ಕೊನೆ ಸಿನಿಮಾವಲ್ಲ: ಜೇಮ್ಸ್ ನಂತರವೂ ಮತ್ತೊಂದು ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್
ಒಟ್ಟಾರೆ ಕಾಲೇಜಿಗೆ ಹೋಗಿ ಬರುತ್ತೇನೆ ಎಂದು ಹೋದ ಯುವತಿ ಕಾಣೆಯಾಗಿದ್ದು, ನಂತರ ಸುಟ್ಟುಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಇತ್ತ ಆಕೆಯ ಪ್ರಿಯಕರನು ನಾಪತ್ತೆಯಾಗಿರುವುದು, ಆತನನ್ನು ಹುಡುಕುವಲ್ಲಿ ಪೊಲೀಸರು ತಡಮಾಡುತ್ತಿರುವುದು ಎಲ್ಲ ನೋಡುತ್ತಿದ್ದರೆ ಹಲವು ಅನುಮಾನಗಳಿಗೆ ಕಾರಣವಾಗುತ್ತಿದೆ. ಪೊಲೀಸರು ಸತ್ಯ ಸತ್ಯತೆಗಳನ್ನು ಪರಿಶೀಲಿಸಿ ಕೊಲೆ ಮಾಡಿರುವವರನ್ನು ಪತ್ತೆ ಮಾಡಿ ನ್ಯಾಯಾಲಯದ ಮುಂದೆ ನಿಲ್ಲಿಸಬೇಕೆಂದು ಜನರು ಆಗ್ರಹಿಸುತ್ತಿದ್ದಾರೆ.