– ಸ್ವಲ್ಪ ದೂರದಲ್ಲೇ ಯುವತಿ ಶವವಾಗಿ ಪತ್ತೆ
– ಲೈಂಗಿಕ ಕಿರುಕುಳ ನೀಡಿ ಕೊಲೆಗೈದ್ರಾ..?
ಹೈದರಾಬಾದ್: ಸ್ನಾನಕ್ಕೆಂದು ಹೋಗಿದ್ದ ಯುವತಿಯೊಬ್ಬಳ ಮೃತದೇಹ ಪತ್ತೆಯಾಗಿರುವ ಘಟನೆ ಆಂಧ್ರ ಪ್ರದೇಶದ ಶ್ರೀಕಾಕುಲಂ ಜಿಲ್ಲೆಯ ರಾಮಚಂದ್ರಪುರಂನ ಸೋಮಪೇಟಾ ಮಂಡಲ್ ನಲ್ಲಿ ನಡೆದಿದೆ.
ಮೃತಳನ್ನು ಕನಕ ಲತಾ ಮಹಂತಿ ಅಲಿಯಾಸ್ ಲಿಲ್ಲಿ (22) ಎಂದು ಗುರುತಿಸಲಾಗಿದೆ. ಮೃತ ಯುವತಿ ಕುರಾ ಮಹಾಂತಿ ಮತ್ತು ರಾಧಾಮಣಿ ಮಹಾತಿಯ ಪುತ್ರಿಯಾಗಿದ್ದು, ಅವರ ಪೋಷಕರು ಅಡುಗೆ ಕೆಲಸ ಮಾಡುತ್ತಿದ್ದರು. ಮೃತ ಯುವತಿ ಸ್ಥಳೀಯ ಶಾಲೆಯೊಂದರಲ್ಲಿ ಸ್ವಯಂ ಸೇವಕಳಾಗಿ ಕಾರ್ಯನಿರ್ವಹಿಸುತ್ತಿದ್ದಳು. ಕನಕ ಲತಾ ತನ್ನ ತಾಯಿಯೊಂದಿಗೆ ದಿನನಿತ್ಯವೂ ಗ್ರಾಮದ ಹೊರಗೆ ಸ್ನಾನಕ್ಕಾಗಿ ಹೋಗುತ್ತಿದ್ದಳು. ಆದರೆ ಶನಿವಾರ ಒಬ್ಬಳೇ ಹೋಗಿದ್ದಳು.
ರಸ್ತೆಯ ಮೇಲೆ ಯುವತಿಯ ಉಡುಪು ಪತ್ತೆಯಾಗಿದೆ. ಇದನ್ನು ನೋಡಿದ ಸ್ಥಳೀಯರು ಪರಿಶೀಲನೆ ಮಾಡಿದ್ದು, ಸ್ವಲ್ಪ ದೂರ ಹೋಗಿ ನೋಡಿದಾಗ ಕನಕ ಲತಾ ನೆಲದಲ್ಲಿ ಬಿದ್ದಿರುವುದನ್ನು ನೋಡಿದ್ದಾರೆ. ತಕ್ಷಣ ಅವರು ಆಕೆಯ ಪೋಷಕರಿಗೆ ತಿಳಿಸಿದ್ದರು. ಕೂಡಲೇ ಪೋಷಕರು ಸ್ಥಳಕ್ಕೆ ದೌಡಾಯಿಸಿದ್ದು, ನಂತರ ಗ್ರಾಮಸ್ಥರು ಮತ್ತು ಆಕೆಯ ಪೋಷಕರು ಯುವತಿಯನ್ನು ಎಚ್ಚರಗೊಳಿಸಲು ಪ್ರಯತ್ನಗಳನ್ನು ಮಾಡಿದ್ದಾರೆ. ಆದರೆ ಕನಕ ಲತಾ ಅದಾಗಲೇ ಮೃತಪಟ್ಟಿದ್ದಳು.
ಸ್ಥಳೀಯರು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ವಿಚಾರ ತಿಳಿದ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದು, ಯುವತಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸೊಂಪೇಟಾ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಕುರಿತು ಪೊಲೀಸರು ಕೊಲೆಯ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ಯುವತಿಯ ಮುಖದ ಮೇಲೆ ಗಾಯದ ಗುರುತು ಪತ್ತೆಯಾಗಿದ್ದು, ಸ್ಥಳೀಯರು ಮೃತ ಯುವತಿಗೆ ಲೈಂಗಿಕವಾಗಿ ಕಿರುಕುಳ ನೀಡಿ ಕೊಲೆ ಮಾಡಿದ್ದಾರೆ ಎಂದು ಶಂಕಿಸಿದ್ದಾರೆ. ಆದರೆ ಪೊಲೀಸರು ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ಸಾವಿನ ಬಗ್ಗೆ ಖಚಿತವಾಗಿ ತಿಳಿಸಲಾಗುವುದು ಎಂದು ಹೇಳಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv