ಚಿಕ್ಕಮಗಳೂರು: ಹೋಂ ಸ್ಟೇ (Homestay) ಬಾತ್ ರೂಂನಲ್ಲಿ ಸ್ನಾನಕ್ಕೆಂದು ತೆರಳಿದ್ದ ಯುವತಿ ಕುಸಿದು ಬಿದ್ದು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಮೂಡಿಗೆರೆ (Mudigere) ತಾಲೂಕಿನ ಹಾಂದಿ ಗ್ರಾಮದಲ್ಲಿ ನಡೆದಿದೆ.
ಮೃತಳನ್ನ ಹಾಸನ (Hassan) ಜಿಲ್ಲೆಯ ಬೇಲೂರು ತಾಲೂಕಿನ ದೇವಾಲಾಪುರ ಗ್ರಾಮದ ರಂಜಿತಾ (27) ಎಂದು ಗುರುತಿಸಲಾಗಿದೆ. ಮೃತ ರಂಜಿತಾ ದಾವಣಗೆರೆ ಮೂಲದ ಗೆಳತಿ ರೇಖಾ ಅವರೊಂದಿಗೆ ಶುಕ್ರವಾರ ಸಂಜೆ ಹೋಂ ಸ್ಟೇನಲ್ಲಿ ತಂಗಿದ್ದರು. ಸ್ನೇಹಿತೆಯೊಬ್ಬಳ ನಿಶ್ಚಿತಾರ್ಥಕ್ಕಾಗಿ ರಂಜಿತಾ ಮತ್ತು ರೇಖಾ ಬೆಂಗಳೂರಿನಿಂದ ಬಂದಿದ್ದರು. ಇದನ್ನೂ ಓದಿ: ಜಗಳವಾಡಿ ನಾಲ್ಕು ಮಕ್ಕಳ ತಾಯಿಯ ಹತ್ಯೆಗೈದ ಲವ್ವರ್ – ಕೆಟ್ಟು ನಿಂತಿರೋ ಆಟೋದಲ್ಲಿ ಹೆಣ ಬಿಸಾಕಿ ಎಸ್ಕೇಪ್
ಶನಿವಾರ (ಅ.25) ಬೆಳಗ್ಗೆ ರೇಖಾ ಸ್ನಾನ ಮಾಡಿ ಬಂದ ನಂತರ ರಂಜಿತಾ ಸ್ನಾನಕ್ಕೆ ತೆರಳಿದ್ದರು. ತುಂಬಾ ಹೊತ್ತಾದರೂ ಅವರು ಹೊರ ಬಾರದಿದ್ದಾಗ ಮತ್ತು ನಲ್ಲಿಯ ನೀರು ಹರಿಯುವ ಶಬ್ದ ನಿರಂತರವಾಗಿ ಕೇಳುತ್ತಿದ್ದಾಗ ರೇಖಾ ಅವರು ಬಾಗಿಲು ಬಡಿದಿದ್ದಾರೆ. ಆದರೆ, ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ ಕಿಟಕಿಯಿಂದ ನೋಡಿದಾಗ ರಂಜಿತಾ ಸ್ನಾನಗೃಹದಲ್ಲಿ ಕುಸಿದು ಬಿದ್ದಿರುವುದು ಕಂಡುಬಂದಿದೆ. ತಕ್ಷಣ ಹೋಂ ಸ್ಟೇ ಸಿಬ್ಬಂದಿಗೆ ಮಾಹಿತಿ ನೀಡಿ ಬಾಗಿಲು ಒಡೆದು ನೋಡಿದಾಗ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ರಂಜಿತಾರನ್ನು ಮೂಡಿಗೆರೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ವೈದ್ಯರು ಯುವತಿ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ.
ರಂಜಿತಾ ಅವರ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಸ್ನಾನಗೃಹದಲ್ಲಿ ಗ್ಯಾಸ್ ಗೀಸರ್ ಇದ್ದಿದ್ದರಿಂದ ಗ್ಯಾಸ್ ಸೋರಿಕೆಯಿಂದ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಆದರೆ, ಸ್ನಾನಗೃಹದಲ್ಲಿ ಸೂಕ್ತ ವೆಂಟಿಲೇಟರ್ ವ್ಯವಸ್ಥೆ ಇದ್ದು, ಗ್ಯಾಸ್ ಸೋರಿಕೆಯ ಯಾವುದೇ ಕುರುಹುಗಳು ಪತ್ತೆಯಾಗಿಲ್ಲ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ. ಯುವತಿ ಹೃದಯಾಘಾತದಿಂದ ಸಾವನ್ನಪ್ಪಿರಬಹುದಾ? ಅಥವಾ ಬೇರೇನು ಕಾರಣ ಎಂಬುದು ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ಗೊತ್ತಾಗಬೇಕಿದೆ. ಈ ಸಂಬಂಧ ಆಲ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಪತ್ನಿ ಜೊತೆ ಜಗಳ; ಅವಳಿ ಮಕ್ಕಳ ಕತ್ತು ಸೀಳಿ ಹತ್ಯೆ ಮಾಡಿದ ಪಾಪಿ

