Latest

ಯುವಕನಿಗೆ ರಾಜ್ಯದ ಮುಖ್ಯಮಂತ್ರಿ ಸ್ಥಾನ – ಕಾರ್ಣಿಕ ನುಡಿದ ಗೊರವಯ್ಯ

ಹಾವೇರಿ: ಮಾಲತೇಶ ದೇವರ (Malatesh Temple) ಕಾರ್ಣಿಕ ಎಂದರೆ ವರ್ಷದ ಭವಿಷ್ಯವಾಣಿ ಅಂತಲೆ ಫೇಮಸ್. ದಸರಾ (Dasara) ಹಬ್ಬದ ಸಮಯದಲ್ಲಿ ನಡೆಯುವ ಕಾರ್ಣಿಕವಾಣಿಯ ಆಧಾರದ ಮೇಲೆ ರೈತರ ಮಳೆ, ಬೆಳೆ ನಿರ್ಧರಿಸುತ್ತಾರೆ. ರಾಜಕೀಯವಾಗಿಯೂ ಕಾರ್ಣಿಕವನ್ನು ವಿಶ್ಲೇಷಿಸಲಾಗುತ್ತದೆ. ಈ ವರ್ಷದ ಭವಿಷ್ಯವಾಣಿ ಕೇಳಿ, ನೆರೆದಿದ್ದ ಸಾವಿರಾರು ಸಂಖ್ಯೆಯ ಜನರು ಖುಷಿ ಖುಷಿಯಿಂದಲೇ ಮನೆಯತ್ತ ಹೆಜ್ಜೆ ಹಾಕಿದ್ದಾರೆ.

ಹೌದು, ಹಾವೇರಿ (Haveri) ಜಿಲ್ಲೆ ರಾಣೆಬೆನ್ನೂರು ತಾಲೂಕಿನ ದೇವರಗುಡ್ಡ ಗ್ರಾಮದಲ್ಲಿ ಇಂದು ಕಂಡುಬಂದ ದೃಶ್ಯಗಳಿವು. ಈ ಬಾರಿ ಸಣ್ಣ ಸಣ್ಣ ರೈತರಿಗೂ ಒಳ್ಳೆಯದಾಗಲಿದೆ, ರಾಜಕೀಯವಾಗಿ ಯುವ ರಾಜಕಾರಣಿಗಳಿಗೆ ಹೆಚ್ಚಿನ ಅವಕಾಶ ಸಿಗಲಿದೆ. ಯುವಕನಿಗೆ ರಾಜ್ಯದ ಮುಖ್ಯಮಂತ್ರಿಸ್ಥಾನ ದೊರೆಯಲಿದೆ ಎಂದು ಗೊರವಯ್ಯ (Goravayya) ಕಾರ್ಣಿಕ ನುಡಿದಿದ್ದಾರೆ.

ದೇವರಗುಡ್ಡದ ಮಾಲತೇಶ ದೇವಸ್ಥಾನ ಸುಮಾರು ವರ್ಷಗಳ ಇತಿಹಾಸ ಹೊಂದಿದೆ. ದಸರಾ ಹಬ್ಬದ ಸಮಯದಲ್ಲಿ ದೇವರಗುಡ್ಡದ ಕರಿಯಾಲ ಪ್ರದೇಶದಲ್ಲಿ ನಡೆಯೋ ಮಾಲತೇಶ ದೇವರ ಕಾರ್ಣಿಕ ಕೇಳಲು ಜನರ ದಂಡೆ ನೆರೆದಿರುತ್ತೆ. 9 ದಿನಗಳ ಕಾಲ ಕಠಿಣ ಉಪವಾಸ ವೃತ ಮಾಡಿ ಗೊರವಪ್ಪ ನಾಗಪ್ಪ ಉರ್ಮಿ ಕಾರ್ಣಿಕ ನುಡಿಯುತ್ತಾರೆ. ಇದನ್ನೂ ಓದಿ: ದಸರಾ ಪೆಂಡಾಲ್ ಸೌಂಡ್ ಸಿಸ್ಟಮ್ ವಯರ್ ಕಿತ್ತು ದರ್ಪ ಮೆರೆದ KAS ಅಧಿಕಾರಿ

ಪ್ರತಿ ಬಾರಿ ಕರಿಯಾಲ ಪ್ರದೇಶಕ್ಕೆ ಡಮರುಗ, ಚಾಟಿ ಏಟಿನ ಸದ್ದಿನ ಮೂಲಕ ಗೊರವಪ್ಪಗಳು ಕಾರ್ಣಿಕದ ಗೊರವಪ್ಪನನ್ನು ಮೆರವಣಿಗೆಯಲ್ಲಿ ಕರೆದುಕೊಂಡು ಬರುತ್ತಾರೆ. ಸರಿಯಾಗಿ 6 ಗಂಟೆ ಆಗುತ್ತಿದ್ದಂತೆ ಕಾರ್ಣಿಕ ಸ್ಥಳಕ್ಕೆ ಬರುವ ಗೊರವಯ್ಯ 21 ಅಡಿ ಎತ್ತರದ ಬಿಲ್ಲನ್ನೇರಿ ಸದ್ದಲೆ ಎನ್ನುತ್ತಲೆ ಕಿಕ್ಕಿರಿದು ಸೇರಿದ ಜನರ ನಡುವೆ ಕಾರ್ಣಿಕ ನುಡಿಯುತ್ತಾರೆ. ವರ್ಷದ ಭವಿಷ್ಯವಾಣಿ ನುಡಿದ ಬಳಿಕ ಬಿಲ್ಲಿನಿಂದ ಕೆಳಕ್ಕೆ ಬೀಳುತ್ತಾರೆ.

ಈ ವರ್ಷ ಬಿಲ್ಲನ್ನೇರಿದ ಗೊರವಪ್ಪ ನಾಗಪ್ಪ ಉರ್ಮಿ “ಆಕಾಶದ ಗುಡ್ಡಕ್ಕಲೆ ಶಿಶು ಏರಿತಲೆ ಪರಾಕ್” ಎಂದು ಕಾರ್ಣಿಕ ನುಡಿದಿದ್ದಾರೆ. ಬಳಿಕ ದೇವಸ್ಥಾನದ ಪ್ರಧಾನ ಅರ್ಚಕ ಸಂತೋಷ್ ಭಟ್ ಕಾರ್ಣಿಕ ವಾಣಿಯ ವಿಶ್ಲೇಷಣೆ ಮಾಡಿದ್ದಾರೆ. ಸಣ್ಣಸಣ್ಣ ರೈತರಿಗೂ ಈ ವರ್ಷ ಉತ್ತಮ ಆಗಲಿದೆ. ರಾಜಕೀಯವಾಗಿ ಯುವ ರಾಜಕಾರಣಿಗಳಿಗೆ ಹೆಚ್ಚಿನ ಅವಕಾಶ ದೊರೆಯಲಿದೆ. ಯುವಕನಿಗೆ ರಾಜ್ಯದ ಮುಖ್ಯಮಂತ್ರಿ ಸ್ಥಾನ ದೊರೆಯಲಿದೆ ಎಂದು ಅವರು ವಿಶ್ಲೇಷಿಸಿದ್ದಾರೆ. ಇದನ್ನೂ ಓದಿ: ನೈಜೀರಿಯಾದಿಂದ ತಂದ ಚೀತಾಗಳಿಂದ ದೇಶಾದ್ಯಂತ ಲಂಪಿ ವೈರಸ್‌ ಹರಡುತ್ತಿದೆ: ನಾಲಿಗೆ ಹರಿಬಿಟ್ಟ ಕೈ ನಾಯಕ ನಾನಾ ಪಾಟೋಲೆ

ಹಲವು ವರ್ಷಗಳಿಂದ ನಡೆದುಕೊಂಡು ಬಂದಿರುವ ಮಾಲತೇಶ ದೇವರ ಕಾರ್ಣಿಕ ವರ್ಷದ ಭವಿಷ್ಯವಾಣಿ ಎಂತಲೇ ಪ್ರಸಿದ್ಧಿ ಪಡೆದಿದೆ. ಸಾಕ್ಷಾತ್ ಮಾಲತೇಶ ದೇವರೆ ಗೊರವಪ್ಪನ ಮೈಮೇಲೆ ಅವತರಿಸಿ, ವರ್ಷದ ಭವಿಷ್ಯವಾಣಿ ನುಡಿಸುತ್ತಾನೆ ಎನ್ನುವುದು ಕಾರ್ಣಿಕವಾಣಿಯ ವಿಶಿಷ್ಟತೆಗೆ ಸಾಕ್ಷಿಯಾಗಿದೆ. ಒಟ್ಟಿನಲ್ಲಿ ಈ ವರ್ಷದ ಕಾರ್ಣಿಕವಾಣಿ ಆಲಿಸಿದ ಜನರು ಸಣ್ಣ ಸಣ್ಣ ರೈತರಿಗೆ ಉತ್ತಮವಾಗಲಿದೆ ಎನ್ನುವ ಸಂದೇಶ ಕೇಳಿ ತಮ್ಮ ತಮ್ಮ ಊರುಗಳತ್ತ ಖುಷಿಯಿಂದ ಹೆಜ್ಜೆ ಹಾಕಿದ್ದಾರೆ.

Live Tv

Leave a Reply

Your email address will not be published. Required fields are marked *

Back to top button