ಚಿಕ್ಕಬಳ್ಳಾಪುರ: ಪ್ರವಾಸಿಗರ ನೆಚ್ಚಿನ ತಾಣವಾಗಿರುವ ಚಿಕ್ಕಬಳ್ಳಾಪುರ (Chikkaballapura) ತಾಲೂಕಿನ ಪ್ರಸಿದ್ಧ ಸ್ಕಂದಗಿರಿ ಬೆಟ್ಟದಲ್ಲಿ ಟ್ರೆಕ್ಕಿಂಗ್ ವೇಳೆ ಯುವಕನಿಗೆ ವಿಷಕಾರಿ ಹಾವು ಕಚ್ಚಿರುವ ಘಟನೆ ನಡೆದಿದೆ.
ಬೆಂಗಳೂರಿನ ಸಹಕಾರನಗರ ನಿವಾಸಿ ದೇವೇಂದ್ರ (33) ಹಾವು ಕಡಿತಕ್ಕೊಳಗಾದ ಯುವಕ.
ಸ್ಕಂದಗಿರಿ ಬೆಟ್ಟಕ್ಕೆ ಟ್ರೆಕ್ಕಿಂಗ್ಗೆ ತೆರಳಿದ್ದ ದೇವೇಂದ್ರ ಅವರಿಗೆ ಚಾರಣದ ವೇಳೆ ಹಾವು ಕಚ್ಚಿದೆ. ಪ್ರಾಥಮಿಕ ಮಾಹಿತಿ ಪ್ರಕಾರ, ಯುವಕನಿಗೆ ಬ್ಯಾಂಬೂ ಪಿಟ್ ವೈಪರ್ (Bamboo Pit Viper) ಜಾತಿಯ ವಿಷಕಾರಿ ಹಾವು ಕಚ್ಚಿರುವುದಾಗಿ ತಿಳಿದುಬಂದಿದೆ.
ಹಾವು ಕಡಿತದಿಂದ ಗಾಯಗೊಂಡ ದೇವೇಂದ್ರ ಅವರನ್ನು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.
ಆಸ್ಪತ್ರೆಗೆ ಡಿಎಫ್ಒ ಗಿರೀಶ್ ಭೇಟಿ
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಚಿಕ್ಕಬಳ್ಳಾಪುರ ಜಿಲ್ಲಾ ಅರಣ್ಯಾಧಿಕಾರಿ (ಡಿಎಫ್ಒ) ಗಿರೀಶ್ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಗಾಯಾಳು ದೇವೇಂದ್ರ ಅವರ ಆರೋಗ್ಯ ವಿಚಾರಿಸಿದ್ದಾರೆ. ಹಾವು ಕಡಿತದ ಘಟನೆ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ.
ಸುಮಾರು ಆರು ತಿಂಗಳ ಕಾಲ ಸ್ಥಗಿತಗೊಂಡಿದ್ದ ಸ್ಕಂದಗಿರಿ ಬೆಟ್ಟದ ಟ್ರೆಕ್ಕಿಂಗ್ಗೆ ಇತ್ತೀಚೆಗಷ್ಟೇ ಅರಣ್ಯ ಇಲಾಖೆ ಷರತ್ತುಬದ್ಧ ಅನುಮತಿ ನೀಡಿತ್ತು. ಚಾರಣ ಪುನರಾರಂಭಗೊಂಡ ಬೆನ್ನಲ್ಲೇ ಯುವಕನಿಗೆ ಹಾವು ಕಚ್ಚಿರುವ ಘಟನೆ ವರದಿಯಾಗಿದ್ದು, ಚಾರಣಿಗರ ಸುರಕ್ಷತೆ ಕುರಿತು ಮತ್ತೊಮ್ಮೆ ಚರ್ಚೆಗೆ ಕಾರಣವಾಗಿದೆ. ಇದನ್ನೂ ಓದಿ: ದುರ್ಗಾಪೂಜೆ ವೇಳೆ ದುರಂತ | ಮನೇಲಿ ಮದ್ವೆ ತಯಾರಿ ನಡೀತಿತ್ತು, ಕಣ್ಣೆದುರೇ ಅಮ್ಮನನ್ನ ಕಳೆದುಕೊಂಡೆ – ಗೋಳಾಡಿದ ಯುವತಿ
ಬೆಂಗಳೂರಿಗೆ ಸಮೀಪದಲ್ಲಿರುವ ಸ್ಕಂದಗಿರಿ ಬೆಟ್ಟ ಪ್ರಕೃತಿ ಸೌಂದರ್ಯ ಹಾಗೂ ಸೂರ್ಯೋದಯದ ದೃಶ್ಯಗಳಿಗೆ ಪ್ರಸಿದ್ಧವಾಗಿದೆ. ವಾರಾಂತ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. ಬೆಟ್ಟದ ಪ್ರದೇಶದಲ್ಲಿ ವಿಷಕಾರಿ ಹಾವುಗಳು ಸೇರಿದಂತೆ ವಿವಿಧ ವನ್ಯಜೀವಿಗಳಿರುವ ಸಾಧ್ಯತೆಯ ಹಿನ್ನೆಲೆಯಲ್ಲಿ ಚಾರಣಿಗರು ಹೆಚ್ಚಿನ ಮುನ್ನೆಚ್ಚರಿಕೆ ವಹಿಸುವುದು ಅಗತ್ಯವಾಗಿದೆ.ಇದನ್ನೂ ಓದಿ: ದಾಂಡಿಯಾ ಸಂಭ್ರಮಾಚರಣೆ ವೇಳೆ ದುರಂತ – ಲೈಟಿಂಗ್ ಕಂಬ ಬಿದ್ದು ಮೂವರು ವಿದ್ಯಾರ್ಥಿನಿಯರು ಸಾವು
