ವಾಷಿಂಗ್ಟನ್: ಅಮೆರಿಕದ ಬಾಂಬ್ ದಾಳಿಯಿಂದ (America Strikes In Iran) ನಮ್ಮಲ್ಲಿ ಅಂಥದ್ದೇನೂ ಹಾನಿಯಾಗಿಲ್ಲ ಎಂದಿದ್ದ ಇರಾನ್ಗೆ ಅಮೆರಿಕ ಈಗ ವಿಡಿಯೋ ಸಮೇತ ತಿರುಗೇಟು ಕೊಟ್ಟಿದೆ.
ಇರಾನ್ನ ಅಣುಸ್ಥಾವರದ ಮೇಲೆ ಮಾಡಿರುವ ಬಿ2 ಬಾಂಬರ್ಗಳ (B2 Bomber) ಮಿಡ್ನೈಟ್ ಹ್ಯಾಮರ್ ದಾಳಿಯ ಹೊಸ ವಿಡಿಯೋವನ್ನು ಪೆಂಟಗನ್ (Pentagon) (ಅಮೆರಿಕ ರಕ್ಷಣಾ ಸಚಿವಾಲಯದ ಪ್ರಧಾನ ಕಚೇರಿ) ಅಮೆರಿಕ ಬಿಡುಗಡೆ ಮಾಡಿದೆ. ಈ ವಿಡಿಯೋನಲ್ಲಿ ಅಮೆರಿಕವು ವಿಶ್ವದ ಶಕ್ತಿಶಾಲಿ ವೆಪೆನ್ ʻಬಂಕರ್ ಬಸ್ಟರ್ʼ ಬಳಸಿ ದಾಳಿ ನಡೆಸಿರುವುದು ಸ್ಪಷ್ಟವಾಗಿದೆ. ಇದನ್ನೂ ಓದಿ: ವಿಶ್ವದ ಪವರ್ಫುಲ್ ವೆಪೆನ್ ʻಬಂಕರ್ ಬಸ್ಟರ್ʼ – 14,000 ಕೆಜಿ ತೂಕದ ಬಾಂಬ್ ಬಳಸಿ ಇರಾನ್ ಪರಮಾಣು ಕೇಂದ್ರದ ಮೇಲೆ ಅಮೆರಿಕ ದಾಳಿ
ಪೆಂಟಗನ್ನ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಮತ್ತು ಲೆಫ್ಟಿನೆಂಟ್ ಜನರಲ್ ಡ್ಯಾನ್ ಕೈನ್ ಅಮೆರಿಕದ ಬಿ2 ಬಾಂಬರ್ಗಳು ಹೇಗೆ ದಾಳಿ ನಡೆಸಿವೆ ಎಂಬುದನ್ನು ಇಂಚಿಂಚಾಗಿ ವಿವರಿಸಿದ್ರು. ಒಂದೊಂದೇ ದೃಶ್ಯಗಳನ್ನು ಬಿಡುಗಡೆ ಮಾಡುತ್ತಾ.. ಸಾಮಾನ್ಯ ಬಾಂಬ್ಗಳಿಗಿಂತ ʻಬಂಕರ್ ಬಸ್ಟರ್ʼ ಎಷ್ಟು ವಿಭಿನ್ನ? ಇದರ ಹಾನಿ ಪ್ರಮಾಣ ಹೇಗಿರುತ್ತೆ? ಭೂಮಿಯನ್ನು ಸೀಳಿಕೊಂಡು ಪರಮಾಣು ಕೇಂದ್ರವನ್ನು ಧ್ವಂಸಗೊಳಿಸಿದ್ದು ಹೇಗೆ? ಎಂಬೆಲ್ಲ ಮಾಹಿತಿಗಳನ್ನ ವಿವರಿಸಿದ್ದಾರೆ. ಇದನ್ನೂ ಓದಿ: ಇರಾನ್ನ ಮೂರು ಪರಮಾಣು ಕೇಂದ್ರಗಳ ಮೇಲೆ ಅಮೆರಿಕ ಬಾಂಬ್ ದಾಳಿ
ನೆಲದಡಿಯಿಂದ ಸುಮಾರು 80 ರಿಂದ 90 ಮೀಟರ್ (295 ಅಡಿ) ಆಳದಲ್ಲಿರುವ ಫೋರ್ಡೋ ಪರಮಾಣು ಘಟಕವನ್ನು ಅಮೆರಿಕ ಬಿ2 ಬಾಂಬರ್ ಧ್ವಂಸಗೊಳಿಸಿರುವುದು, ಅದರ ಭೀಕರತೆ ಹೇಗಿತ್ತು? ಎಂಬುದನ್ನು ವಿಡಿಯೋ ಬಿಚ್ಚಿಟ್ಟಿದೆ. ಇದನ್ನೂ ಓದಿ: ಅಮೆರಿಕ ಬಳಿಕ ಇರಾನ್ನ ಶಕ್ತಿಶಾಲಿ ಫೋರ್ಡೋ ಪರಮಾಣು ಘಟಕದ ಮೇಲೆ ಇಸ್ರೇಲ್ ದಾಳಿ
ಅಮೆರಿಕ ದಾಳಿ ಎಷ್ಟು ಭೀಕರ?
ಇರಾನ್ನ ಫೋರ್ಡೊ, ನಟಾಂಜ್ ಮತ್ತು ಇಸ್ಪಹಾನ್ ಪರಮಾಣು ಕೇಂದ್ರಗಳ ಮೇಲೆ ಅಮೆರಿಕ ಯಶಸ್ವಿ ಬಾಂಬ್ ದಾಳಿ ನಡೆಸಿತ್ತು. ಅಮೆರಿಕವು 6 ಶಕ್ತಿಶಾಲಿ Northrop B-2 Spirit ಯುದ್ಧವಿಮಾನ ಬಳಸಿಕೊಂಡು ಡಜನ್ಗಟ್ಟಲೇ ಜಿಬಿಯು -57 ಎ/ಬಿ ಬೃಹತ್ ಆರ್ಡ್ನೆನ್ಸ್ ಪೆನೆಟ್ರೇಟರ್ (MOP) ಬಾಂಬ್ಗಳನ್ನ ಬಳಸಿ ದಾಳಿ ನಡೆಸಿತ್ತು. ಇದನ್ನ ʻಬಂಕರ್ ಬಸ್ಟರ್ʼ ಎಂದೂ ಕರೆಯಲಾಗುತ್ತದೆ. ಈ ʻಬಂಕರ್ ಬಸ್ಟರ್ʼ ಇರಾನ್ ರಾಜಧಾನಿ ಟೆಹ್ರಾನ್ನಿಂದ 100 ಕಿಮೀ ದೂರದಲ್ಲಿರುವ ಫೋರ್ಡೋ ಘಟಕದ ಮೇಲೆ ದಾಳಿ ಮಾಡಿದ್ರೆ, ಜಲಾಂತರ್ಗಾಮಿ ನೌಕೆಗಳಿಂದ ಹಾರಿಸಲಾದ 30 ಟೊಮಾಹಾಕ್ ಕ್ಷಿಪಣಿಗಳು (ಕ್ರೂಸ್ ಕ್ಷಿಪಣಿ) ಉಳಿದ 2 ಅಣು ಕೇಂದ್ರಗಳ ಮೇಲೆ ದಾಳಿ ನಡೆಸಿ ಧ್ವಂಸಗೊಳಿಸಿದ್ದವು.
ಫೋರ್ಡೋ ಅಣು ಕೇಂದ್ರ ಎಷ್ಟು ಸೇಫ್?
ಫೋರ್ಡೋ ಪರಮಾಣು ಘಟಕದ ಮುಖ್ಯ ಸಭಾಂಗಣವು ನೆಲದಡಿಯಲ್ಲಿ ಸುಮಾರು 80 ರಿಂದ 90 ಮೀಟರ್ (295 ಅಡಿ) ಆಳದಲ್ಲಿದೆ. ಇಷ್ಟು ಅಡಿ ಆಳದಲ್ಲಿರುವ ಈ ಘಟಕವನ್ನು ಇಸ್ರೇಲ್ ಹೊಂದಿರುವ ಯಾವುದೇ ವೈಮಾನಿಕ ಬಾಂಬ್ನಿಂದ ಧ್ವಂಸ ಮಾಡಲು ಸಾಧ್ಯವಿಲ್ಲ. ಹೀಗಾಗಿಯೇ ವಿಶ್ವದಲ್ಲೇ ಅತಿಹೆಚ್ಚು ಪವರ್ಫುಲ್ ಆಗಿರುವ ಸ್ವದೇಶಿ ನಿರ್ಮಿತ GBU-57A/B Massive Ordinance Penetrator ಬಾಂಬ್ನಿಂದ ಅಮೆರಿಕ ದಾಳಿ ನಡೆಸಿದೆ.
ಇನ್ನೂ ಇಸ್ರೇಲ್-ಇರಾನ್ ಮಧ್ಯೆ ಕದನ ವಿರಾಮ ಘೋಷಣೆಯಾಗಿದ್ದರೂ, ಇರಾನ್ ಸಿಟ್ಟು ಕಡಿಮೆಯಾಗಿಲ್ಲ. ಇರಾನ್ ಪರಮೋಚ್ಛ ನಾಯಕ ಖಮೇನಿ ಮತ್ತೆ ಅಮೆರಿಕ ವಿರುದ್ಧ ಕೆಂಡಕಾರಿದ್ದಾರೆ. ಇಸ್ರೇಲ್ ಸೋಲುವ ಭೀತಿಯಿಂದಲೇ ಅಮೆರಿಕ ಎಂಟ್ರಿ ಕೊಟ್ಟಿದೆ. ಈ ಯುದ್ಧದಿಂದ ಅಮೆರಿಕ ಸಾಧಿಸಿದ್ದೇನೂ ಇಲ್ಲ. ನಾವು ಅಮೆರಿಕಕ್ಕೆ ಶರಣಾಗತಿಯಾಗೋ ಪ್ರಶ್ನೆಯೇ ಇಲ್ಲವೆಂದು ಸ್ಪಷ್ಟಪಡಿಸಿದ್ದಾರೆ.
ಇನ್ನು ಇಸ್ರೇಲ್ ಜೊತೆಗಿನ ಕದನ ವಿರಾಮ ಬಳಿಕ ಇರಾನ್ ತನ್ನ ವಾಯುಪ್ರದೇಶವನ್ನು ಮತ್ತೆ ಸಂಚಾರಕ್ಕೆ ಮುಕ್ತಗೊಳಿಸಿದೆ. ಜೂನ್ 12ರಿಂದಲೂ ಇರಾನ್ ವಾಯುಪ್ರದೇಶ ಮುಚ್ಚಿತ್ತು.. ಅಂತಾರಾಷ್ಟ್ರೀಯ, ದೇಶೀಯ ವಿಮಾನಗಳಿಗೆ ಏರ್ಸ್ಪೇಸ್ ಓಪನ್ ಮಾಡಲಾಗಿದೆ ಎಂದು ಇರಾನ್ ತಿಳಿಸಿದೆ.
ಸಂಘರ್ಷಪೀಡಿತ ಇರಾನ್ನಲ್ಲಿ ಸಿಲುಕಿದ್ದ ಒಟ್ಟು 3,154 ಭಾರತೀಯ ಪ್ರಜೆಗಳನ್ನು ಆಪರೇಷನ್ ಸಿಂಧು ಕಾರ್ಯಾಚರಣೆಯಡಿ ಕರೆತರಲಾಗಿದೆ. 296 ಭಾರತೀಯರು ಮತ್ತು ನಾಲ್ವರು ನೇಪಾಳಿ ಪ್ರಜೆಗಳನ್ನು ಹೊತ್ತ ವಿಮಾನ ನಿನ್ನೆ ದೆಹಲಿಗೆ ಮರಳಿತ್ತು. ಇದರೊಂದಿಗೆ ಆಪರೇಷನ್ ಸಿಂಧು ಅಡಿಯಲ್ಲಿ ಸ್ಥಳಾಂತರಿಸಲಾದ ಒಟ್ಟು ಭಾರತೀಯರ ಸಂಖ್ಯೆ 3,154ಕ್ಕೆ ತಲುಪಿದೆ.