ಉಡುಪಿ: ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಬಜೆಟ್ ಮಂಡಿಸಿದ ನಂತರ ಕರಾವಳಿ ಜನ ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದಾರೆ. ಕರಾವಳಿಯ ಪ್ರಬಲ ಸಮುದಾಯ ಮೊಗವೀರರು ಎಚ್ ಡಿಕೆ ವಿರುದ್ಧ ಕೋಪಗೊಂಡಿದ್ದಾರೆ. ಬಜೆಟ್ ನಲ್ಲಿ ನಮಗೆ ಏನು ಕೊಟ್ಟಿದ್ದೀರಿ? ನೀವು ನಮ್ಮ ಸಿಎಂ ಅಲ್ಲವೇ ಅಲ್ಲ ಅಂತ ಎಂದು ಹೇಳಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಕರಾವಳಿ ಜೊತೆ ತಾರತಮ್ಯ ನಿಲ್ಲಿಸಿ. ಪ್ರಜಾಪ್ರಭುತ್ವದ ಕೊಲೆಗಾರ ನೀವು. ಕುಮಾರಸ್ವಾಮಿಯವರೇ ನೀವು ನಮ್ಮ ಸಿಎಂ ಅಲ್ಲ ಇಂತಹ ಸ್ಲೋಗನ್ ಗಳನ್ನು ಪಕ್ಕದಲ್ಲಿಟ್ಟು ಉಡುಪಿಯ ಮೀನು ಮಾರುಕಟ್ಟೆಯಲ್ಲಿ ಮೊಗವೀರ ಮಹಿಳೆಯರು ವ್ಯಾಪಾರ ಮಾಡುತ್ತಿದ್ದಾರೆ.
ಉಡುಪಿ ಜಿಲ್ಲೆಯ ಪ್ರಬಲ ಮೀನುಗಾರ ಸಮುದಾಯ ಸಿಎಂ ಕುಮಾರಸ್ವಾಮಿ ವಿರುದ್ಧ ಗರಂ ಆಗಿದೆ. ಮೊನ್ನೆಯ ಬಜೆಟ್ ನಲ್ಲಿ ಕರಾವಳಿಗೆ ಯಾವುದೇ ಅನುದಾನ ಕೊಡದೆ, ಯೋಜನೆಗಳನ್ನು ಘೋಷಣೆ ಮಾಡದೆ ಈ ಭಾಗದ ಜನರ ಆಕ್ರೋಶಕ್ಕೆ ಕಾರಣವಾಗಿದ್ದಾರೆ. ಈ ನಡುವೆ ಉಡುಪಿಯಲ್ಲಿ ಮೀನುಗಾರ ಮಹಿಳೆಯರು ಮೀನು ಮಾರುಕಟ್ಟೆಯಲ್ಲಿ ಬೋರ್ಡ್ ಗಳನ್ನು ಅಳವಡಿಸಿದ್ದಾರೆ. ಮೀನು ಖರೀದಿಗೆ ಬರುವವರ ಬಳಿ ಸಮಸ್ಯೆಗಳನ್ನು ಹೇಳಿಕೊಳ್ಳುತ್ತಿದ್ದಾರೆ.
ನಾವು ಸಾಲ ಮಾಡಿ ಜೀವನ ಮಾಡುವುದಿಲ್ಲ. ದುಡಿದು ತಿನ್ನುತ್ತೇವೆ. ಸಂಪಾದನೆ ಆಗದಿದ್ದರೆ ಉಪವಾಸ ಕೂರುವ ಸ್ವಾಭಿಮಾನಿಗಳು. ಆದ್ರೆ ನಮ್ಮ ವಿರುದ್ಧ ನಿಮ್ಮ ಸಮರ ಯಾಕೆ. ನಾವು ನಿಮಗೆ ಏನು ದ್ರೋಹ ಮಾಡಿದ್ದೇವೆ ಅಂತ ಮೀನು ಮಾರಾಟಗಾರ ಮಹಿಳಾ ಸಂಘದ ಅಧ್ಯಕ್ಷೆ ಬೇಬಿ ಸಾಲಿಯಾನ್ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ಆಕ್ರೋಶ ವ್ಯಕ್ತಗೊಳಿಸಿದ್ದಾರೆ. ಇದನ್ನೂ ಓದಿ: #KumaraswamynotmyCm- ಎಚ್ ಡಿಕೆ ವಿರುದ್ಧ ಕರಾವಳಿಯ ಜನರಿಂದ ಆನ್‍ಲೈನ್ ಹೋರಾಟ
ಈ ನಡುವೆ ಸಾಮಾಜಿಕ ಜಾಲತಾಣದಲ್ಲಿ ಹೇಟ್ ಹೆಚ್ ಡಿಕೆ ಎಂಬ ಅಭಿಯಾನ ಶುರುಮಾಡಿದ್ದಾರೆ. ಕುಮಾರಸ್ವಾಮಿ ಈಸ್ ನಾಟ್ ಅವರ್ ಸಿಎಂ ಎಂಬ ಬರಹಗಳು ಓಡಾಡುತ್ತಿದೆ. ನಾವು ಸಾಲನೂ ಮಾಡಿಲ್ಲ, ಮಾಡಿದ ಸಾಲವನ್ನು ಸಮುದ್ರದಲ್ಲಿ ದುಡಿದು ತೀರಿಸುತ್ತೇವೆ. ಇಷ್ಟಿದ್ದರೂ ನಮ್ಮ ಮೇಲೆ ಮುಖ್ಯಮಂತ್ರಿಗಳಿಗೆ ಯಾಕೆ ಅನ್ನೋ ಪ್ರಶ್ನೆ ಕೇಳಿದ್ದಾರೆ. ಪ್ರತೀ ಮೀನುಗಾರಿಕಾ ಬೋಟ್, ಸಂಘ ಸಂಸ್ಥೆಗಳು, ವಾಹನಗಳಲ್ಲಿ ಇಂತಹ ಸ್ಟಿಕ್ಕರ್ ಗಳನ್ನು ಅಂಟಿಸುವುದಾಗಿ ಮೀನುಗಾರ ಯುವ ಮುಖಂಡ ಯತೀಶ್ ಕೋಟ್ಯಾನ್ ಎಚ್ಚರಿಕೆ ನೀಡಿದರು.
13 ವಿಧಾನಸಭಾ ಕ್ಷೇತ್ರಗಳ ಕರಾವಳಿಯ ಎರಡು ಜಿಲ್ಲೆಯಲ್ಲಿ ಒಂದು ಕಾಂಗ್ರೆಸ್ ಗೆದ್ದಿದೆ. 13 ಶಾಸಕರು ಬಿಜೆಪಿಯಿಂದ ಗೆದ್ದಿದ್ದಾರೆ. ಹೀಗಾಗಿ ಈ ಬಾರಿ ಸರಕಾರದಿಂದ ಕರಾವಳಿ ಭಾಗಕ್ಕೆ ಅನುದಾನವನ್ನು ಸಿಎಂ ನೀಡಿಲ್ಲ. ಮುಂದಿನ ಚುನಾವಣೆಯಲ್ಲಿ ಸರಕಾರಕ್ಕೆ ಮತ್ತು ಜೆಡಿಎಸ್ ಬೆಂಬಲ ನೀಡಿದ ಕಾಂಗ್ರೆಸ್ಸಿಗೆ ಇದರಿಂದ ಹಿನ್ನಡೆಯಾಗುವ ಸಾಧ್ಯತೆಯಿದೆ.