CinemaKarnatakaLatestMain PostSandalwood

ವೈರಲ್ ಆದ ಗಾಳಿಪಟ 2 ಚಿತ್ರದ ‘ದೇವ್ಲೆ ದೇವ್ಲೆ’ ಹಾಡಿನ ರಹಸ್ಯ ಬಿಚ್ಚಿಟ್ಟ ಯೋಗರಾಜ್ ಭಟ್

ಬಿಡುಗಡೆಗೂ ಮುನ್ನವೇ ಸಾಕಷ್ಟು ಕುತೂಹಲ ಹುಟ್ಟಿಸಿರುವ “ಗಾಳಿಪಟ 2” ಚಿತ್ರದ “ದೇವ್ಲೆ ದೇವ್ಲೆ” ಹಾಡು ಬಿಡುಗಡೆಯಾಗಿದೆ. ಯೋಗರಾಜ್ ಭಟ್ ಬರೆದಿರುವ ಈ ಹಾಡನ್ನು ವಿಜಯ್ ಪ್ರಕಾಶ್ ಹಾಡಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಈ ಹಾಡು ಬಿಡುಗಡೆ ಸಮಾರಂಭದಲ್ಲಿ ಸಿನಿಮಾ ತಂಡ ಹಲವು ವಿಚಾರಗಳನ್ನು ಮಾತನಾಡಿದೆ.

ಈ ಹಾಡು ಹುಟ್ಟಿದ್ದರ ಬಗ್ಗೆ ಯೋಗರಾಜ್ ಭಟ್ ಹೇಳುವುದು ಹೀಗೆ, ‘ಈ ಹಾಡನ್ನು ಬರೆದು ಅರ್ಜುನ್ ಜನ್ಯ ಅವರಿಗೆ ಕಳುಹಿಸಿದೆ. ಮೊದಲು ಈ ಹಾಡನ್ನು ದೇವ್ರೆ ದೇವ್ರೆ ಎಂದು ಬರೆದಿದ್ದು. ಆನಂತರ ಇದು ಮಾಮೂಲಿ ತರಹ ಇದೆ. ಸ್ವಲ್ಪ ಏನಾದರೂ ಬದಲಾವಣೆ ಮಾಡಿ ಎಂದರು ಅರ್ಜುನ್ ಜನ್ಯ. ಆಗ ರ ಕಾರ ತೆಗೆದು ಲ‌ ಕಾರ ಹಾಕಿ ಅಂದೆ. ಆಗ ಎಲ್ಲರಿಗೂ ಹಿಡಿಸಿತು. ವಿಜಯ್ ಪ್ರಕಾಶ್ ಸುಶ್ರಾವ್ಯವಾಗಿ ಹಾಡಿದ್ದಾರೆ. ನನ್ನ , ವಿಜಯ್ ಪ್ರಕಾಶ್ ಹಾಗೂ ಅರ್ಜುನ್ ಜನ್ಯರ ಕಾಂಬಿನೇಶನ್ ನಲ್ಲಿ ಸಾಕಷ್ಟು ಎಣ್ಣೆ ಹಾಡುಗಳು ಗೆದ್ದಿವೆ. ಇದು ಕೂಡ ಗೆಲುತ್ತದೆ ಎಂಬ ಭರವಸೆಯಿದೆ. ಕೊರೋನ ತನ್ನ ಅಟ್ಟಹಾಸ ಮೆರೆಯುತ್ತಿದ್ದ ಸಮಯದಲ್ಲಿ ಚಿತ್ರೀಕರಣವಾದ ಹಾಡು ಇದು. ಎಲ್ಲಾ ಕಡೆ ಲಾಕ್ ಡೌನ್. ಅಂತಹ ಸಮಯದಲ್ಲಿ ದೂರದ ಕಜಾಕಿಸ್ತಾನದಲ್ಲಿ ಚಿತ್ರೀಕರಣ ಮಾಡುವುದು ಅಂದರೆ ಕಷ್ಟ ಸಾಧ್ಯ. ಆದರೆ ಅದನ್ನು ಸಾಧ್ಯ ಮಾಡಿದವರು ನಮ್ಮ ನಿರ್ಮಾಪಕ ರಮೇಶ್ ರೆಡ್ಡಿ ಅವರು. ಈ ಹಾಡಿಗೆ ಸ್ನೋ ಬೇಕಾಗಿದ್ದರಿಂದ ಅಲ್ಲಿಗೆ ಹೋದೆವು. ಆದರೆ ಕೊನೆಗೆ ಏಕಾದರೂ ಬಂದೆವೊ? ಅನಿಸುವಷ್ಟು ಚಳಿ ಅಲ್ಲಿ. ಇಷ್ಟೆಲ್ಲಾ ಕಷ್ಟಗಳ ನಡುವೆ ಎಲ್ಲರಿಗೂ ಇಷ್ಟವಾಗುವ ಹಾಡನ್ನು ಚಿತ್ರಿಸಿಕೊಂಡು ಬಂದಿದ್ದೀವಿ’ ಎಂದರು. ಇದನ್ನೂ ಓದಿ : ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಡೇಟಿಂಗ್ ಮಾಡುತ್ತಿದ್ದರು : ಸಾರಾ ಅಲಿ ಖಾನ್

ಕೋವಿಡ್ ಸಮಯದಲ್ಲಿ ಯಾರಿಗೂ ಏನೂ ಆಗದ ಹಾಗೆ ಕಜಾಕಿಸ್ತಾನಕ್ಕೆ ಹುಷಾರಾಗಿ ಕರೆದು ಕೊಂಡು ಹೋಗಿ ಬಂದ ನಿರ್ಮಾಪಕರಿಗೆ ಧನ್ಯವಾದ. ಇನ್ನು ಈ ಹಾಡಿನ ಬಗ್ಗೆ ಹೇಳಬೇಕೆಂದರೆ ಯೋಗರಾಜ್ ಸರ್ ಈ ಹಾಡನ್ನು ನನಗೆ ಕಳುಹಿಸಿದಾಗ, ಇದೇನ್ ಸರ್ ಹೀಗಿದೆ? ಈ ಹಾಡು ಕೇಳಿದವರು ನಿಮ್ಮ ಬಗ್ಗೆ ಏನಾದರೂ ಅಂದುಕೊಳ್ಳುತ್ತಾರೆ ಅಂದೆ. ಆನಂತರ ಇಲ್ಲ ಗಣಪ ಇನ್ನೊಂದು ಸಲ ಕೇಳು ಅಂದರು. ಕೇಳುತ್ತಾ, ಕೇಳುತ್ತಾ ನಾನೇ ಸದಾ ಗುನುಗುವಂತಾಯಿತು. ಅಂದು ಇದ್ದ  ಆತಂಕ ಈಗ ಇಲ್ಲ. ಜನ “ದೇವ್ಲೆ ದೇವ್ಲೆ” ಹಾಡನ್ನು ಒಪ್ಪಿಕೊಂಡಿದ್ದಾರೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನ, ವಿಜಯ್ ಪ್ರಕಾಶ್ ಗಾಯನ, ಪಾತಾಜೆ ಅವರ ಛಾಯಾಗ್ರಹಣ,  ಧನು ಮಾಸ್ಟರ್  ನೃತ್ಯ ನಿರ್ದೇಶನ ಹಾಗೂ ಎಲ್ಲರ ಅಭಿನಯ ಈ ಹಾಡನ್ನು  ಶ್ರೀಮಂತಗೊಳಿಸಿದೆ ಎಂದರು ನಾಯಕ ಗೋಲ್ಡನ್ ಸ್ಟಾರ್ ಗಣೇಶ್.

ಯೋಗರಾಜ್ ಭಟ್ ಹಾಗೂ ಗಣೇಶ್ ಅವರ ಮೂಲಕ ನನ್ನ ಗಾಯನದ ಜರ್ನಿ “ಗಾಳಿಪಟ” ಮೊದಲ ಭಾಗದಲ್ಲಿ ಆರಂಭವಾಯಿತು “ಕವಿತೆ ಕವಿತೆ” ಹಾಡಿನ ಮೂಲಕ. ಈಗ “ಗಾಳಿಪಟ 2” ಚಿತ್ರದಲ್ಲೂ ಹಾಡಿದ್ದೇನೆ. ಲ ಕಾರದಲ್ಲಿ ಈ ಹಾಡನ್ನು ಹಾಡುವುದು ಕಷ್ಟ ಅಂದುಕೊಂಡೆ. ಅಭ್ಯಾಸ ಮಾಡಿದ್ದೆ. ಅರ್ಧ ಗಂಟೆಯಲ್ಲಿ “ದೇವ್ಲೆ ದೇವ್ಲೆ” ಹಾಡು ಹಾಡಿದೆ. ಈ ಹಿಂದೆ ಕೂಡ ನನ್ನ ಹಾಗೂ ಭಟ್ಟರ ಕಾಂಬಿನೇಶನಲ್ಲಿ ಸಾಕಷ್ಟು ಗೀತೆಗಳು ಜನಪ್ರಿಯವಾಗಿದೆ ಎಂದರು ಗಾಯಕ ವಿಜಯ್ ಪ್ರಕಾಶ್.

ಈ ಹಾಡು ಮಾಡಿದಾಗ ಲ ಕಾರ ಇರಲಿಲ್ಲ. ಮೊದಲು ರ ಕಾರ ಇತ್ತು. ರ ಕಾರದ ಹಾಡು ಅಷ್ಟು ಮಜಾ ಇಲ್ಲ ಅಂದೆ. ಆಗ ಯೋಗರಾಜ್ ಸರ್, ರ ಕಾರಗಳನ್ನು ತೆಗೆದು ಲ ಕಾರ ಮಾಡು ಅಂದರು. ಹಾಗೆ ಮಾಡಿದಾಗ ಈ ಹಾಡು ತುಂಬಾ ಹಿಡಿಸಿತು. ವಿಜಯ್ ಪ್ರಕಾಶ್ ಅವರು ಇಂಪಾಗಿ ಹಾಡಿದ್ದಾರೆ. ನಾನು ಪದೇಪದೇ ಕೇಳುವ ಹಾಡಗಳೆಂದರೆ ಅದು “ಗಾಳಿಪಟ ೨” ಚಿತ್ರದ ಹಾಡುಗಳು ಎಂದರು ಸಂಗೀತ ನಿರ್ದೇಶಕ ಅರ್ಜುನ್ ಜನ್ಯ.

ಈ ಹಾಡಿನ‌ ಚಿತ್ರೀಕರಣ ನೋಡಲು ಕಜಾಕಿಸ್ತಾನಕ್ಕೆ ಹೋಗಿದ್ದೆ. ಅದೇ ಮೊದಲ ಬಾರಿಗೆ ನಾನು  ಅಂತರರಾಷ್ಟ್ರೀಯ ವಿಮಾನ ಹತ್ತಿದ್ದು, ಅಂತಹ ಚಳಿಯಲ್ಲಿ ಕೆಲಸ ಮಾಡಿದ್ದ ಚಿತ್ರ ತಂಡಕ್ಕೆ ಧನ್ಯವಾದ ಎಂದರು ನಿರ್ಮಾಪಕ ರಮೇಶ್ ರೆಡ್ಡಿ. ನಾಯಕರಾದ ದಿಗಂತ್, ಪವನ್ ಕುಮಾರ್, ನಾಯಕಿ ಶರ್ಮಿಳಾ ಮಾಂಡ್ರೆ, ನಟಿ ಸುಧಾ ಬೆಳವಾಡಿ, ಛಾಯಾಗ್ರಾಹಕ ಸಂತೋಷ್ ರೈ ಪಾತಾಜೆ, ನೃತ್ಯ ನಿರ್ದೇಶಕ ಧನು ಮಾಸ್ಟರ್ ಹಾಗೂ ಆನಂದ್ ಆಡಿಯೋ ಶ್ಯಾಮ್ “ದೇವ್ಲೆ ದೇವ್ಲೆ” ಹಾಡಿನ ಬಗ್ಗೆ ಹಾಗೂ ಚಿತ್ರದ ಬಗ್ಗೆ ತಮ್ಮ ಅನುಭವ ಹಂಚಿಕೊಂಡರು.

Live Tv

Leave a Reply

Your email address will not be published. Required fields are marked *

Back to top button