ಲಕ್ನೋ: ಉತ್ತರಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರ ಬಂದ ನಂತರ ರೌಡಿಶೀಟರ್ ಗಳು ಹಾಗೂ ಕ್ರಿಮಿನಲ್‍ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿದ ಪರಿಣಾಮ ಎನ್‍ಕೌಂಟರ್ ಗೆ ಹೆದರಿ ರೌಡಿಗಳು ಈಗ ತಮ್ಮ ಜೀವನವನ್ನ ಬದಲಾಯಿಸಿಕೊಳ್ಳುತ್ತಿದ್ದಾರೆ. ಕೆಲವರು ಸೈಕಲ್ ರಿಪೇರಿ ಅಂಗಡಿ, ಇನ್ನೂ ಕೆಲವರು ಹಣ್ಣಿನ ವ್ಯಾಪಾರ ನಡೆಸುತ್ತಿದ್ದರೆ ಮತ್ತೂ ಕೆಲವರು ಆಟೋ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ.
ಲಿಸಾದಿ ಗೇಟ್ ಪೊಲೀಸ್ ಠಾಣೆಯಲ್ಲಿ ಅಖೀಲ್(35) ನ ರೌಡಿಶೀಟ್ ನಂಬರ್ 58ಎ. ಹಲವು ಕ್ರಿಮಿನಲ್ ಪ್ರಕರಣಗಳು ದಾಖಲಾಗಿರುವುದರ ಜೊತೆಗೆ ಈತನ ವಿರುದ್ಧ ಗೂಂಡಾ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗಿದೆ. ಆದ್ರೆ ಇತ್ತೀಚೆಗೆ ಕೆಲವು ತಿಂಗಳಿನಿಂದ ಈತ ತನ್ನ ಮನೆಯ ಬಳಿಯೇ ಪುಟ್ಟದೊಂದು ಸೈಕಲ್ ರಿಪೇರಿ ಅಂಗಡಿ ತೆರೆದಿದ್ದು, ಬೆಳಗ್ಗಿನಿಂದ ಸಂಜೆವರೆಗೆ ಅಂಗಡಿಯಲ್ಲಿ ದುಡಿಯುತ್ತಾನೆ.
Advertisement
ತನ್ನ ಏರಿಯಾದಲ್ಲಿ ಕುಖ್ಯಾತ ರೌಡಿಯಾಗಿದ್ದ ಉಮರ್ ದರಜ್ ಎಂಬಾತ ಈಗ ಹಣ್ಣಿನ ವ್ಯಾಪಾರ ಮಾಡುತ್ತಿದ್ದಾನೆ. ಕೆಲವು ತಿಂಗಳ ಹಿಂದೆ ಜೀವನ ತುಂಬಾ ಕಷ್ಟಕರವಾಗಿತ್ತು. ನನ್ನ ಜೀವ ಉಳಿಸಿಕೊಳ್ಳಲು ಒಂದು ಕಡೆಯಿಂದ ಮತ್ತೊಂದು ಕಡೆಗೆ ಓಡುತ್ತಿದ್ದೆ. ಆದ್ರೆ ನನ್ನನ್ನು ಎನ್‍ಕೌಂಟರ್ ನಲ್ಲಿ ಸಾಯಿಸುವುದಿಲ್ಲ ಎಂದು ಪೊಲೀಸರು ಭರವಸೆ ನೀಡಿದ ನಂತರ, ಹಣ್ಣಿನ ವ್ಯಾಪಾರ ಮಾಡಲು ನಿರ್ಧರಿಸಿದೆ ಎಂದು ಉಮರ್ ಪತ್ರಿಕೆಯೊಂದಕ್ಕೆ ಹೇಳಿದ್ದಾನೆ.
Advertisement
ಇದೇ ರೀತಿ ಇಮ್ರಾನ್ ಎಂಬಾತ ಈಗ ಗುಜರಿ ಡೀಲರ್ ಆಗಿದ್ದಾನೆ. ರವಿ ಹಾಗೂ ಹೇಮಂತ್ ಆಟೋ ರಿಕ್ಷಾ ಚಾಲಕರಾಗಿದ್ದಾರೆ. ಇನ್ನೂ ಅನೇಕ ರೌಡಿಗಳು ಅಪರಾಧಗಳನ್ನ ಬಿಟ್ಟು ಬೇರೆ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ.
Advertisement
Advertisement
ಪೊಲೀಸರು ಹೇಳುವ ಪ್ರಕಾರ ರೌಡಿಶೀಟರ್ ಗಳ ಈ ಮನಃಪರಿವರ್ತನೆಗೆ ಕಾರಣವೆಂದರೆ ಯೋಗಿ ಸರ್ಕಾರ ರಚನೆಯಾದ ನಂತರ ಪೊಲೀಸರು ಅಳವಡಿಸಿಕೊಂಡಿರುವ ಎನ್‍ಕೌಂಟರ್ ನಂತಹ ಕಠಿಣ ಕ್ರಮಗಳು. ಇದನ್ನೂ ಓದಿ: ನನ್ನ ಅರೆಸ್ಟ್ ಮಾಡಿ, ಎನ್‍ಕೌಂಟರ್ ನಲ್ಲಿ ಸಾಯಲು ಇಷ್ಟವಿಲ್ಲ- ಯುಪಿ ಪೊಲೀಸರಿಗೆ ಕೊಲೆ ಆರೋಪಿ ಶರಣು
ಕಳೆದ ವರ್ಷ ಮಾರ್ಚ್‍ನಲ್ಲಿ ಯೋಗಿ ಆದಿತ್ಯನಾಥ್ ಸಿಎಂ ಆಗಿ ಅಧಿಕಾರ ವಹಿಸಿಕೊಂಡಾಗಿನಿಂದ ಉತ್ತರಪ್ರದೇಶದಲ್ಲಿ 1100ಕ್ಕೂ ಹೆಚ್ಚು ಎನ್‍ಕೌಂಟರ್ ಗಳು ನಡೆದಿದ್ದು, ಅವುಗಳಲ್ಲಿ ಸುಮಾರು 40ಕ್ಕೂ ಹೆಚ್ಚು ಅಪರಾಧಿಗಳು ಗುಂಡೇಟಿನಿಂದು ಸಾವನ್ನಪ್ಪಿದ್ದಾರೆ. ಹಾಗೇ 2770 ಆರೋಪಿಗಳ ಬಂಧನವಾಗಿದ್ದು, 260 ಆರೋಪಿಗಳು ಗಾಯಗೊಂಡಿದ್ದಾರೆ. ಜೊತೆಗೆ ಎನ್‍ಕೌಂಟರ್ ಗಳಲ್ಲಿ ನಾಲ್ವರು ಪೊಲೀಸ್ ಅಧಿಕಾರಿಗಳು ಸಾವನ್ನಪ್ಪಿದ್ದು, 277 ಸಿಬ್ಬಂದಿ ಗಾಯಗೊಂಡಿದ್ದಾರೆ.
ಸುಧರ್ ಜಾವೋ ಯಾ ಊಪರ್ ಜಾವೊ: ಐಡಿಯಾ ತುಂಬಾನೇ ಸರಳವಾಗಿತ್ತು: ಸುಧರ್ ಜಾವೋ ಯಾ ಊಪರ್ ಜಾವೊ (ಸರಿ ದಾರಿಗೆ ಬನ್ನಿ ಅಥವಾ ಸಾಯಲು ತಯಾರಾಗಿ). ನಾವು ತುಂಬಾ ಸರಳವಾದ ಆಫರ್ ನೀಡಿದೆವು. ಅಪರಾಧ ಚಟುವಟಿಕೆಗಳನ್ನ ಬಿಟ್ಟು ಜೀವನಾಧಾರಕ್ಕಾಗಿ ಹಣ ಸಂಪಾದಿಸಲು ಓಳ್ಳೆ ದಾರಿಯನ್ನ ಆರಿಸಿಕೊಳ್ಳಿ. ನಿಮಗೆ ನೆರವಾಗಲು ನಾವಿದ್ದೇವೆ ಹಾಗೂ ಅದಕ್ಕೆ ಪ್ರತಿಯಾಗಿ ನೀವು ಯಾವುದೇ ಭಯವಿಲ್ಲದೆ ಘನತೆಯಿಂದ ಜೀವನ ನಡೆಸಬಹುದು ಎಂದು ರೌಡಿಶೀಟರ್ ಗಳಿಗೆ ಹೇಳಿದ್ದಾಗಿ ಮೀರತ್‍ನ ಎಸ್‍ಪಿ ಮನ್ ಸಿಂಗ್ ಚೌಹಾನ್ ಹೇಳಿದ್ದಾರೆ. ಇದನ್ನೂ ಓದಿ:ಜಾಮೀನು ಸಿಕ್ಕರೂ 5,500 ಕ್ರಿಮಿನಲ್‍ಗಳು ಯುಪಿ ಜೈಲಿನಿಂದ ಹೊರಬರುತ್ತಿಲ್ಲ!
ಕೆಲವರ ವಿರುದ್ಧ ಸುಮಾರು 20 ವರ್ಷಗಳಿಂದ ಪ್ರಕರಣಗಳು ಬಾಕಿ ಇವೆ. ಕೆಲವು ಗಂಭೀರ ಪ್ರಕರಣಗಳಾಗಿದ್ದರೆ ಇನ್ನೂ ಕೆಲವು ಸಣ್ಣ ಪುಟ್ಟ ಪ್ರಕರಣಗಳು. ದೀರ್ಘ ಸಮಯದಿಂದ ಪ್ರಕರಣಗಳು ಬಾಕಿ ಇರುವ ಹಿನ್ನಲೆಯಲ್ಲಿ ಅವರು ಜೀವನದಲ್ಲಿ ನೆಲೆ ಕಂಡುಕೊಳ್ಳಲು ಸಾಧ್ಯವಾಗಿರಲಿಲ್ಲ. ಕಾನೂನಿನ ಭಯ ಹಾಗೂ ಜೀವನ ನಡೆಸಲು ಅಪರಾಧ ಚಟುವಟಿಕೆ ಮುಂದುವರಿಸದೇ ಬೇರೆ ದಾರಿ ಇಲ್ಲ ಎಂಬ ವಿಷಮ ಪರಿಸ್ಥಿತಿ ಇದಕ್ಕೆ ಕಾರಣವಾಗಿತ್ತು ಎಂದು ಚೌಹಾನ್ ವಿವರಿಸಿದ್ದಾರೆ.
ಹೀಗಾಗಿ ಮಾಧ್ಯಮಗಳು ಹಾಗೂ ಇತರೆ ಮುಲಗಳಿಂದ ಪೊಲೀಸರು ರೌಡಿಗಳು ಸಮಾಜದ ಮುಖ್ಯವಾಹಿನಿಗೆ ಹಿಂದಿರುಗುವಂತೆ ಸಂದೇಶ ರವಾನಿಸಿದ್ದರು. ಮೊದಲಿಗೆ ಸುಮಾರು 16 ಮಂದಿ ನಮ್ಮ ಬಳಿ ಬಂದರು. ಅವರ ಚಟುವಟಿಕೆಗಳ ಮೇಲೆ ಎರಡು ತಿಂಗಳವರೆಗೆ ಕಣ್ಣಿಟ್ಟ ನಂತರ ನೇರವಾಗಿ ಭೇಟಿಯಾಗುವಂತೆ ಆಹ್ವಾನಿಸಿದೆವು ಎಂದು ಚೌಹಾನ್ ತಿಳಿಸಿದ್ದಾರೆ.
ಕೆಲವು ದಿನಗಳ ಹಿಂದೆ ಲಿಸಾದಿ ಗೇಟ್ ಪೊಲೀಸ್ ಠಾಣೆಯಲ್ಲಿ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ರೌಡಿಗಳು ತಮ್ಮ ಹಿಂದಿನ ದಾರಿಯನ್ನ ಹಿಡಿಯದಂತೆ ಪ್ರಮಾಣ ಮಾಡಿಸಿ ಹಣ್ಣು ಹಾಗೂ ಸಿಹಿ ನೀಡಿ ಸನ್ಮಾನಿಸಲಾಯಿತು ಎಂದು ವರದಿಯಾಗಿದೆ.
ಮುಂದೆಯೂ ಅವರ ಮೇಲೆ ನಾವು ಕಣ್ಣಿಟ್ಟಿರುತ್ತೇವೆ. ಅದರ ಜೊತೆಗೆ ರೌಡಿಶೀಟರ್ ಪಟ್ಟಿಯಿಂದ ಅವರ ಹೆಸರನ್ನ ತೆಗೆಯಬಹುದೆಂಬ ಉದ್ದೇಶದಿಂದ ಇತ್ಯರ್ಥವಾಗದೆ ಉಳಿದ ಪ್ರಕರಣಗಳನ್ನ ತೆಗೆದುಹಾಕಲು ಎಲ್ಲಾ ರೀತಿಯ ಸಹಾಯ ಮಾಡುವ ಭರವಸೆ ನೀಡಿದ್ದೇವೆ ಎಂದು ಚೌಹಾನ್ ಹೇಳಿದ್ದಾರೆ.