ಜೈಪುರ: ರಾಮನ ಭಕ್ತರು ಬಿಜೆಪಿಗೆ ಮತ ಹಾಕಿದರೆ, ರಾವಣನ ಭಕ್ತರು ಕಾಂಗ್ರೆಸ್ಸಿಗೆ ಮತ ಹಾಕುತ್ತಾರೆಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಯೋಗಿ ಆದಿತ್ಯನಾಥ್ ಬಿಜೆಪಿಯ ಸ್ಟಾರ್ ಪ್ರಚಾರಕರೆಂದೇ ಗುರುತಿಸಿಕೊಂಡಿದ್ದಾರೆ. ಚುನಾವಣಾ ಪ್ರಚಾರದ ಬರದಲ್ಲಿ ರಾಮಭಕ್ತರು ಖುದ್ದು ಕೇಸರಿ ಪಕ್ಷಕ್ಕೆ ಓಟು ಹಾಕುತ್ತಾರೆ ಎನ್ನುವ ಮೂಲಕ ಕಾಂಗ್ರೆಸ್ ನಾಯಕರ ಆಕ್ರೋಶಕ್ಕೆ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ರಾಜಸ್ಥಾನದ ಮಲ್ಪುರದಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು, ರಾಮನ ಪರಮ ಭಕ್ತ ಹನುಮಂತನೂ ಸಹ ದಲಿತ ಬುಡಕಟ್ಟು ಜನಾಂಗಕ್ಕೆ ಸೇರಿದ್ದನು. ಅಲ್ಲದೇ ಕಾಡಿನ ನಿವಾಸಿಯಾಗಿದ್ದನು. ಭಜರಂಗ ಬಲಿ ಪೂರ್ವದಿಂದ ಪಶ್ಚಿಮಕ್ಕೆ ಹಾಗೂ ಉತ್ತರದಿಂದ ದಕ್ಷಿಣದ ವರೆಗೂ ಭಾರತದಲ್ಲಿರುವ ಎಲ್ಲಾ ಸಮುದಾಯಗಳನ್ನು ಒಗ್ಗೂಡಿಸುವಲ್ಲಿ ಶ್ರಮಿಸಿದ್ದನು. ಇದು ಕೇವಲ ಹನುಮಂತನ ಇಚ್ಛೆಯಾಗಿರಲಿಲ್ಲ. ರಾಮನ ಇಂಗಿತವೂ ಆಗಿತ್ತು. ಹೀಗಾಗಿ ಇವರಿಬ್ಬರ ಮಹತ್ವಾಕಾಂಕ್ಷೆಯನ್ನು ಈಡೇರಿಸುವವರೆಗೂ ವಿಶ್ರಾಂತಿಯನ್ನು ಮಾಡುವುದಿಲ್ಲವೆಂದು ಹೇಳಿದ್ದಾರೆ.
ಇದೇ ವೇಳೆ ರಾಮನನ್ನು ಪೂಜಿಸುವವರು ಖಂಡಿತವಾಗಿಯೂ ಬಿಜೆಪಿಗೆ ಮತ ಹಾಕುತ್ತಾರೆ. ಆದರೆ ರಾವಣ ಭಕ್ತರು ಕಾಂಗ್ರೆಸ್ಸಿಗೆ ಮತ ಹಾಕುವ ಮೂಲಕ ತಮ್ಮ ನಿಷ್ಠೆಯನ್ನು ತೋರುತ್ತಾರೆ. ಹೀಗಾಗಿ ಬಿಜೆಪಿ ಅಭ್ಯರ್ಥಿಗೆ ಮತ ನೀಡಿ ಗೆಲ್ಲಿಸಿ ಎಂದು ಮತದಾರರಲ್ಲಿ ಮನವಿಯನ್ನು ಮಾಡಿಕೊಂಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv