ಕೋಲ್ಕತ್ತಾ/ನವದೆಹಲಿ: 12ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ (IDY 2026) ಅಂಗವಾಗಿ ಇದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಕೋಲ್ಕತ್ತಾದ(Kolkata) ಐತಿಹಾಸಿಕ ರೆಡ್ ರೋಡ್‌ನಲ್ಲಿ ಯೋಗ (Yoga) ನಡೆಸಲಿದ್ದಾರೆ.
ಮೋದಿಯವರೊಂದಿಗೆ ಸುಮಾರು 35 ಸಾವಿರಕ್ಕೂ ಹೆಚ್ಚು ಜನರು ನೇರವಾಗಿ ಯೋಗಾಸನ ಮಾಡಲಿದ್ದಾರೆ. ಇಡೀ ನಗರಾದ್ಯಂತ ವಿವಿಧ ಕಾರ್ಯಕ್ರಮಗಳಲ್ಲಿ ಲಕ್ಷಾಂತರ ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ.
ಹೂಗ್ಲಿ ನದಿಯ ‘ಬಾಬು ಘಾಟ್’ ಬಳಿ ವಿಶೇಷ ಜಲ ಯೋಗ ಪ್ರದರ್ಶನ ಆಯೋಜನೆಗೊಂಡಿದ್ದು ಸುಂದರಬನ್ಸ್ ಸೇರಿದಂತೆ ವಿವಿಧ ಭಾಗಗಳಿಂದ ಬಂದ 500 ಕ್ಕೂ ಹೆಚ್ಚು ಬೋಟ್‌ಗಳ (ದೋಣಿಗಳು) ಮೇಲೆ ಯೋಗಪಟುಗಳು ಏಕಕಾಲದಲ್ಲಿ ಯೋಗಾಸನಗಳನ್ನು ಮಾಡಲಿದ್ದಾರೆ. ಇದನ್ನು ಗಿನ್ನಿಸ್ ವಿಶ್ವ ದಾಖಲೆಗೆ ಸೇರಿಸಲು ಭರ್ಜರಿ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಆರೋಗ್ಯಕರ ವೃದ್ಧಾಪ್ಯಕ್ಕಾಗಿ ಯೋಗ (Yoga for Healthy Ageing) ಈ ವರ್ಷದ ಯೋಗ ದಿನದ ಮುಖ್ಯ ಧ್ಯೇಯವಾಕ್ಯವಾಗಿದೆ. ಪಶ್ಚಿಮ ಬಂಗಾಳ ಸರ್ಕಾರವು ತನ್ನ ಎಲ್ಲಾ ಸರ್ಕಾರಿ ನೌಕರರು ಈ ಸಾಮೂಹಿಕ ಯೋಗ ದಿನಾಚರಣೆಯಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕು ಎಂದು ಆದೇಶಿಸಿದೆ
ಕೇವಲ ರೆಡ್ ರೋಡ್ ಮಾತ್ರವಲ್ಲದೆ, ಕೋಲ್ಕತ್ತಾದ ಪ್ರಮುಖ ಐತಿಹಾಸಿಕ ಸ್ಥಳಗಳಲ್ಲೂ ಯೋಗ ಕೇಂದ್ರಗಳನ್ನು ತೆರೆಯಲಾಗಿದೆ. ವಿಕ್ಟೋರಿಯಾ ಮೆಮೋರಿಯಲ್ ಆವರಣ, ಹೌರಾ ಸೇತುವೆಯ ಆಯ್ದ ಭಾಗಗಳು, ಈಡನ್ ಗಾರ್ಡನ್ಸ್ ಕ್ರೀಡಾಂಗಣದ ಆವರಣಈ ಎಲ್ಲಾ ಸ್ಥಳಗಳಲ್ಲಿ ಜೂನ್ 21 ರ ಬೆಳಿಗ್ಗೆ ಏಕಕಾಲದಲ್ಲಿ ಹೂವಿನ ಅಲಂಕಾರಗಳ ನಡುವೆ ಸಹಸ್ರಾರು ಜನರು ಯೋಗ ಮಾಡಲಿದ್ದಾರೆ.
ಭಾರತೀಯ ರಾಯಭಾರ ಕಚೇರಿಗಳ (Indian Missions) ಸಹಯೋಗದೊಂದಿಗೆ ವಿಶ್ವದ 210 ಕ್ಕೂ ಹೆಚ್ಚು ದೇಶಗಳ ಸುಮಾರು 2,500 ಪ್ರಮುಖ ಸ್ಥಳಗಳಲ್ಲಿ ಏಕಕಾಲದಲ್ಲಿ ಯೋಗ ದಿನವನ್ನು ಆಚರಿಸಲಾಗುತ್ತಿದೆ. ಹಂಪಿ, ಮಹಾಬಲಿಪುರಂ, ಕೆಂಪುಕೋಟೆ ಮತ್ತು ನಲಂದಾ ಸೇರಿದಂತೆ ಭಾರತದಾದ್ಯಂತ ಇರುವ 100 ಪ್ರಸಿದ್ಧ ಐತಿಹಾಸಿಕ ಪ್ರವಾಸಿ ತಾಣಗಳಲ್ಲಿ ಭಾರತೀಯ ಪುರಾತತ್ವ ಇಲಾಖೆಯು (ASI) ವಿಶೇಷ ಯೋಗಾಭ್ಯಾಸ ಹಮ್ಮಿಕೊಂಡಿದೆ.
