ಬೆಂಗಳೂರು: ಕವಿರತ್ನ ಡಾ. ವಿ.ನಾಗೇಂದ್ರ ಪ್ರಸಾದ್ ಯೋಧರ ಬಗೆಗೊಂದು ಹಾಡು ಬರೆಯುತ್ತಿದ್ದಾರೆಂಬ ಬಗ್ಗೆ ಈ ಹಿಂದೆಯೇ ಸುದ್ದಿಯಾಗಿತ್ತು. ಇದೀಗ ಎಲ್ಲರೊಳಗೂ ಆಕ್ರೋಶದ ಕಿಚ್ಚು ಹಚ್ಚುವ, ಉಗ್ರರ ವಿರುದ್ಧ ಕೆಚ್ಚೆದೆಯಿಂದ ಹೋರಾಡೋ ಯೋಧರಿಗೆ ಮತ್ತಷ್ಟು ಛಲ ತುಂಬುವಂಥಾ ಯೋಧ ಶಿವ ಶೀರ್ಷಿಕೆಯ ಹಾಡು ಮ್ಯೂಸಿಕ್ ಬಜಾರ್ ಯೂಟ್ಯೂಬ್ ಚಾನೆಲ್ ಮೂಲಕ ಹೊರ ಬಂದಿದೆ.
ಉಗ್ರರನ್ನು ಗರ್ಭದಲ್ಲೆ ಮಟ್ಟ ಹಾಕಬೇಕು, ಉಗ್ರನನ್ನ ಫ್ರೆಂಡು ಅಂದ್ರೆ ಮಟ್ಟ ಹಾಕಬೇಕು. ಎಂಬಂಥಾ ಈ ನೆಲದ ಜನಸಾಮಾನ್ಯರ ಧ್ವನಿ ಹೊಂದಿರೋ ಈ ಹಾಡೀಗ ಬಿಡುಗಡೆಯಾಗಿದೆ. ಇದು ಅನಾವರಗೊಂಡು ಅರೆಕ್ಷಣದಲ್ಲಿಯೇ ಎಲ್ಲರ ಮೆಚ್ಚುಗೆ ಗಳಿಸಿಕೊಂಡು ಹೆಚ್ಚು ಹೆಚ್ಚು ಜನರನ್ನು ತಲುಪಿಕೊಳ್ಳುತ್ತಿದೆ.
ಈ ಹಾಡನ್ನು ಮಹಾಶಿವರಾತ್ರಿಯ ಶುಭಾಶಯ ಹೇಳುತ್ತಲೇ ಕವಿರತ್ನ ವಿ ನಾಗೇಂದ್ರ ಪ್ರಸಾದ್ ಅವರು ಅನಾವರಣಗೊಳಿಸಿದ್ದಾರೆ. ಈ ಹಾಡಿನಲ್ಲಿ ಉಗ್ರರ ವಿರುದ್ಧ ಶಿವತಾಂಡವವಾಡುವಂತೆ ಯೋಧರನ್ನೂ ಕೂಡಾ ಉತ್ತೇಜಿಸುವಂಥಾ ಸಾಲುಗಳನ್ನೂ ಕೂಡಾ ನಾಗೇಂದ್ರ ಪ್ರಸಾದ್ ಅವರು ಪರಿಣಾಮಕಾರಿಯಾಗಿಯೇ ಬರೆದಿದ್ದಾರೆ.
ಯಾರು ಯಾವುದೇ ಕ್ಷೇತ್ರದಲ್ಲಿದ್ದರೂ ಕೂಡಾ ದೇಶ, ಭಾಷೆ, ಸಮಸ್ಯೆಗಳೆಂಬ ವಿಚಾರ ಬಂದಾಗೆಲ್ಲ ಪ್ರತಿಯೊಬ್ಬರಿಗೂ ಜವಾಬ್ದಾರಿಗಳಿರುತ್ತವೆ. ಅದಕ್ಕೆ ತಕ್ಕುದಾಗಿ ನಾಗೇಂದ್ರ ಪ್ರಸಾದ್ ಅವರು ತಮ್ಮ ಶಕ್ತಿಯಂತಿರೋ ಹಾಡಿನ ಮೂಲಕವೇ ದೇಶಭಕ್ತಿಯ ಕೆಚ್ಚು ಎಲ್ಲರೆದೆಯಲ್ಲಿಯೂ ಮಿರುಗುವಂತೆ ಮಾಡಿದ್ದಾರೆ. ಅವರೇ ಈ ಹಾಡಿಗೆ ಸಮ್ಮೋಹಕವಾದ ಸಂಗೀತ ಸಂಯೋಜನೆಯನ್ನೂ ಮಾಡಿದ್ದಾರೆ. ಸಚಿನ್ ಮತ್ತು ವಿನಯ್ ಈ ಹಾಡಿಗೆ ನರನಾಡಿಗಳಲ್ಲಿಯೂ ದೇಶಭಕ್ತಿಯ ಶಕ್ತಿ ಸಂಚಾರವಾಗುವಂಥಾ ಆ ವೇಗದೊಂದಿಗೆ ಧ್ವನಿಯಾಗಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv