ಬೆಂಗಳೂರು: ನಾಳೆ ಎತ್ತಿನಹೊಳೆ ಯೋಜನೆಯ (Yettinahole Project) ಮೊದಲ ಹಂತಕ್ಕೆ ಚಾಲನೆ ಕೊಡಲು ಸರ್ಕಾರ ಮುಂದಾಗಿದೆ. ಈ ಬೆನ್ನಲ್ಲೇ ಯೋಜನೆಯಲ್ಲಿ ಸಾವಿರಾರು ಕೋಟಿ ಭ್ರಷ್ಟಾಚಾರ ಆಗಿದೆ ಎಂದು ವಿಪಕ್ಷಗಳು ಆರೋಪಿಸಿವೆ. ಈ ಸಂಬಂಧ ಸಿಎಂ ಸಿದ್ದರಾಮಯ್ಯಗೆ (Siddaramaiah) ಪರಿಷತ್ ಸದಸ್ಯ ಸಿ.ಟಿ.ರವಿ ಇಂದು ಬಹಿರಂಗ ಪತ್ರ ಬರೆದಿದ್ದಾರೆ.
ಎತ್ತಿನಹೊಳೆ ಯೋಜನೆಯಲ್ಲಿ ಸಾವಿರಾರು ಕೋಟಿ ರೂಪಾಯಿ ದುರುಪಯೋಗವಾಗಿದೆ. ಅಕ್ರಮ ವಿರುದ್ಧ ಕ್ರಮಕೈಗೊಳ್ಳಿ ಎಂದು ಸಿಟಿ ರವಿ (C.T.Ravi) ಪತ್ರದಲ್ಲಿ ಆಗ್ರಹಿಸಿದ್ದಾರೆ. ನೀರಿನ ಲಭ್ಯತೆ, ಪೂರೈಕೆ, ಕೊಟ್ಟ ಭರವಸೆ ಬಗ್ಗೆ ಗೊಂದಲಗಳಿವೆ. ಹಾಲಿ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ಕೇಂದ್ರ ಸರ್ಕಾರದ ವೈಜ್ಞಾನಿಕ ಸಂಸ್ಥೆಗಳು, ತಾಂತ್ರಿಕ ಸಂಸ್ಥೆ ಮತ್ತು ಐಐಎಸ್ಸಿ ಸಂಸ್ಥೆ ನೆರವಿನಿಂದ ಸಮಗ್ರ ಅಧ್ಯಯನ ನಡೆಸಲು ಸಿಟಿ ರವಿ ಒತ್ತಾಯಿಸಿದ್ದಾರೆ. ಸಿ.ಟಿ.ರವಿ ಬರೆದ ಪತ್ರದ ಪೂರ್ಣ ಯಥಾವತ್ ಅಂಶ ಇಲ್ಲಿದೆ. ಇದನ್ನೂ ಓದಿ: ಶಿಕ್ಷಕರ ಸಮಸ್ಯೆಗೆ ಶೀಘ್ರವೇ ಪರಿಹಾರ: ಸಿದ್ದರಾಮಯ್ಯ
Advertisement
Advertisement
ಪತ್ರದಲ್ಲಿ ಏನಿದೆ?
ಬೆಟ್ಟ ಅಗೆದು ಇಲಿ ಹಿಡಿದ ಎತ್ತಿನಹೊಳೆ ಯೋಜನೆ ಕುರಿತಂತೆ 7 ಜಿಲ್ಲೆಯ ಜನರ ಪರವಾಗಿ ನಿಮಗೊಂದು ಬಹಿರಂಗ ಪತ್ರ. ಎತ್ತಿನಹೊಳೆ ಯೋಜನೆ ಕುರಿತಂತೆ ತಾವು ಮತ್ತು ಉಪಮುಖ್ಯಮಂತ್ರಿಗಳು ನೀಡಿದ ಸಾರ್ವಜನಿಕ ಹೇಳಿಕೆ ಮತ್ತು ಜಾಹೀರಾತನ್ನು ನೋಡಿ, ನಮಗಿರುವ ಸಾರ್ವಜನಿಕರ ಆತಂಕವನ್ನು ದೂರ ಮಾಡಬೇಕೆಂದು ಆಗ್ರಹಿಸಿ ಈ ಕೆಲವು ಪ್ರಶ್ನೆಗಳನ್ನು ಕೇಳಲು ಬಯಸುತ್ತೇನೆ.
Advertisement
ಆರಂಭದಲ್ಲಿ ಈ ಯೋಜನೆಯ ಉದ್ದೇಶವೇ ನಿರಂತರ ಬರದ ದವಡೆಗೆ ಸಿಲುಕಿರುವ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ತುಮಕೂರು, ಹಾಸನ ಮತ್ತು ರಾಮನಗರ ಜಿಲ್ಲೆಯ ಜನರಿಗೆ ಕುಡಿಯುವ ನೀರು ಒದಗಿಸುವುದು. 38 ಪಟ್ಟಣಗಳಿಗೆ, 6,657 ಗ್ರಾಮಗಳಿಗೆ, 527 ಕೆರೆ ತುಂಬಿಸುವುದು, 75 ಲಕ್ಷ ಜನರಿಗೆ, ಶುದ್ಧ ಕುಡಿಯುವ ನೀರು, ಆಗಿತ್ತು. ಇದಕ್ಕಾಗಿ ಆರಂಭಿಕ ಯೋಜನೆ ಮೊತ್ತ 8,323 ಕೋಟಿ. ನಂತರ ಪರಿಷ್ಕೃತ ಮೊತ್ತ 12912 ಕೋಟಿ ರೂ. ಗಳು. ಈಗ ಮತ್ತೊಮ್ಮೆ ಮೊತ್ತವನ್ನು ಪರಿಷ್ಕೃತ 23,251 ಕೋಟಿ ರೂ.ಗೆ ಹೆಚ್ಚಳ ಮಾಡಿದ್ದೀರಿ. ಈಗಾಗಲೇ ನೀವೆ ಹೇಳಿರುವ ಹಾಗೆ ದಿನಾಂಕ 30.06.2024 ರವರೆಗೆ ರೂ. 16,076 ಕೋಟಿ ವೆಚ್ಚವನ್ನು ಮಾಡಿದ್ದೀರಿ. ಈಗ ಮಾಡಿರುವ ವೆಚ್ಚದಲ್ಲಿ ಎಷ್ಟು ಹಳ್ಳಿಯ ಜನರಿಗೆ ಕುಡಿಯುವ ನೀರು, ಎಷ್ಟು ಕೆರೆಗಳಿಗೆ ನೀರು ತುಂಬಿಸುತ್ತೀರಿ? ಸ್ಪಷ್ಟಪಡಿಸಿ. ಇದನ್ನೂ ಓದಿ: ಆದಾಯಕ್ಕಿಂತ ಅಧಿಕ ಆಸ್ತಿ ಗಳಿಕೆ – ಡಿಕೆಶಿ ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಯತ್ನಾಳ್
Advertisement
10 ವರ್ಷದಲ್ಲಿ ಯೋಜನೆಯ ವೆಚ್ಚ 8,323 ಕೋಟಿಯಿಂದ 23,251 ಕೋಟಿಗೆ ಹೆಚ್ಚಾಯ್ತು. ಆದ್ರೆ ನೀರಿನ ಇಳುವರಿ 24 ಟಿಎಂಸಿಯಿಂದ 8.5 ಟಿಎಂಸಿಗೆ ಇಳಿದಿದೆ. ಇದೊಂದು ಅವೈಜ್ಞಾನಿಕ ಯೋಜನೆ ಅಂತಾ ಅನಿಸುತ್ತಾ ಇಲ್ವಾ? 2014ರ ಲೋಕಸಭಾ ಚುನಾವಣೆಯ ಮುಂಚೆ ಚಿಕ್ಕಬಳ್ಳಾಪುರದಲ್ಲಿ ಈ ಯೋಜನೆಗೆ ಶಂಕುಸ್ಥಾಪನೆ ಮಾಡಿ, ಈ ಮೂಲಕ ಸಾರ್ವಜನಿಕವಾಗಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜನಪ್ರತಿನಿಧಿಗಳ ಸಮಕ್ಷಮದಲ್ಲಿ ಜನರಿಗೆ 3 ವರ್ಷದಲ್ಲಿ ಯೋಜನೆ ಪೂರ್ಣಗೊಳಿಸಿ, ಮೊದಲ ಹಂತದಲ್ಲಿ ಕುಡಿಯುವ ನೀರು ಒದಗಿಸುವುದಾಗಿ ಹೇಳಿದ್ದೀರಿ. ಈಗ ಈ ಯೋಜನೆಗೆ ಶಂಕುಸ್ಥಾಪನೆಯಾಗಿ 10 ವರ್ಷ ಕಳೆದರೂ ಯಾವ ಹಳ್ಳಿಯ ಜನರಿಗೆ ನೀರನ್ನು ಒದಗಿಸಿದ್ದೀರಿ? ಸ್ಪಷ್ಟಪಡಿಸಿ.
ಕೋಲಾರ ಜಿಲ್ಲೆ ಮುಳಬಾಗಿಲು ತಾಲ್ಲೂಕಿನ ಕಟ್ಟಕಡೆಯ ಗ್ರಾಮ ನಂಗಲಿ ಜನ ಎತ್ತಿನಹೊಳೆ ನೀರಿಗಾಗಿ ರಾಮನನ್ನು ಕಾಯ್ದ ಶಬರಿಯಂತೆ ನಿಮ್ಮ ಮಾತನ್ನು ನಂಬಿ ಕಾಯುತ್ತಿದ್ದಾರೆ. ಯಾವಾಗ ನೀರು ಕೊಡ್ತೀರಿ? ಆರಂಭದಲ್ಲಿ ಹೇಳಿರುವ ಹಾಗೆ 24 ಟಿಎಂಸಿ ನೀರು ಲಭ್ಯವಿದೆ. ಅದಕ್ಕಾಗಿ ಜಿಲ್ಲಾವಾರು ನೀರನ್ನು ಹಂಚಿಕೆ ಮಾಡಿದ್ರಿ. Central Water Commission (ಕೇಂದ್ರೀಯ ಜಲ ಆಯೋಗ) ವರದಿಯ ಪ್ರಕಾರ ನೀವು ಹೇಳಿರುವ ಹಾಗೆ 24 ಟಿಎಂಸಿ ನೀರು ಲಭ್ಯವಿಲ್ಲ ಎಂದು 2012 ರಲ್ಲಿಯೇ ಕರ್ನಾಟಕ ಸರ್ಕಾರಕ್ಕೆ ಪತ್ರ ಬರೆದಿತ್ತು. Indian Institute of Science (ಭಾರತೀಯ ವಿಜ್ಞಾನ ಸಂಸ್ಥೆ) 24 ಟಿಎಂಸಿ ನೀರು ಇಳುವರಿ ಸಾಧ್ಯವಿಲ್ಲ, ಕೇವಲ ಕಾಲ್ಪನಿಕ. 3 ರಿಂದ 4 ಟಿಎಂಸಿ ನೀರು ಮಾತ್ರ ಎಂದು ತಿಳಿಸಿತ್ತು. 2018-23 ರವರೆಗೆ ನೀರಾವರಿ ಇಲಾಖೆ ನೇಮಿಸಿದ್ದ ಟೆಲಿಮೆಟ್ರಿಕ್ ಗೇಜ್ ಅಧ್ಯಯನದ ವರದಿಯ ಪ್ರಕಾರ 8.5 ಟಿಎಂಸಿ ನೀರು ಮಾತ್ರ. ನಂತರ ಸತತ ಅಧ್ಯಯನದ ನಂತರ ಟೆಲಿಮೆಟ್ರಿಕ್ ಗೇಜ್ ವರದಿ 24 ಟಿಎಂಸಿ ಕೇವಲ ಊಹಾತ್ಮಕ ಎನ್ನುವುದನ್ನು ಖಾತ್ರಿ ಪಡಿಸಿದೆ. Institute of Science (ಭಾರತೀಯ ವಿಜ್ಞಾನ ಸಂಸ್ಥೆ) ಕೊಟ್ಟ ವರದಿ, Central Water Commission (ಕೇಂದ್ರೀಯ ಜಲ ಆಯೋಗ) ಕೊಟ್ಟ ಎಚ್ಚರಿಕೆ, National Institute of Hydrology ವರದಿಯನ್ನು ಪರಿಗಣಿಸದೇ, ಗುತ್ತಿಗೆದಾರರು ಗುತ್ತಿಗೆ ಪಡೆಯುವ ಉದ್ದೇಶದಿಂದ 24 ಟಿಎಂಸಿ ನೀರು ಸಿಗುತ್ತದೆ ಎಂಬ ಖಾಸಗಿಯಾಗಿ ಮಾಡಿಕೊಟ್ಟ ವರದಿಯನ್ನೇ ಇಟ್ಟುಕೊಂಡು, ಕರ್ನಾಟಕ ಸರ್ಕಾರ 23,251 ಕೋಟಿ ಯೋಜನೆ ರೂಪಿಸಿ, 16,076 ಕೋಟಿ ಈಗಾಗಲೇ ವೆಚ್ಚ ಮಾಡಿದೆ, ಯೋಜನೆ ಉದ್ದೇಶವೇನು? ಎಲ್ಲೆಲ್ಲಿಗೆ ನೀರು ಕೊಡಬೇಕಿತ್ತು? ಆ ಎಲ್ಲ ಹಳ್ಳಿಗಳಿಗೂ ನೀರು ಕೊಡುವ ವಿಶ್ವಾಸ ಈಗಲೂ ನಿಮಗೆ ಉಳಿದಿದೆಯಾ? ಯೋಜನೆಯ ಆರಂಭದಲ್ಲಿ ಪ್ರಸ್ತಾಪಿಸಿದಂತೆ 24 ಟಿಎಂಸಿ ನೀರು ಇಲ್ಲ ಎಂದು ಮಾನ್ಯ ಸದಸ್ಯರೊಬ್ಬರ ಪ್ರಶ್ನೆಗೆ ವಿಧಾನಸಭೆಯಲ್ಲಿ ನೀರಾವರಿ ಸಚಿವರೇ ದಿನಾಂಕ: 16.07.2024ರಂದು ಉತ್ತರ ಕೊಟ್ಟಿದ್ದಾರೆ. ಇದಕ್ಕೆ ನಿಮ್ಮ ಉತ್ತರವೇನು? ಇದನ್ನೂ ಓದಿ: ದರ ಏರಿಕೆ ನಿಯಂತ್ರಿಸಲು ಕಡಿಮೆ ಬೆಲೆಗೆ ಈರುಳ್ಳಿ ಮಾರಾಟಕ್ಕೆ ಮುಂದಾದ ಕೇಂದ್ರ ಸರ್ಕಾರ
ಅನುಬಂಧ-2ರಲ್ಲಿ Actual Flow in the Streams ಅದರಲ್ಲಿ ನೀರಿನ ಲಭ್ಯವಿರುವುದೇ 8.85 ಟಿಎಂಸಿ ಎಂದು ಟೆಲಿಮೆಟ್ರಿಕ್ ಗೇಜ್ ವರದಿ ಹೇಳಿದೆ. ಅದನ್ನ ಲಿಪ್ಟ್ ಮಾಡುವುದೇ 3 ರಿಂದ 4 ಟಿಎಂಸಿ ನೀರು ಮಾತ್ರ. ಇದನ್ನು ನೋಡಿದಾಗ ಮೂಗಿಗಿಂತ ಮೂಗುತಿ ಭಾರ ಅನ್ನುವ ನಾನ್ನುಡಿ ಅನ್ವಯವಾಗುತ್ತೆ. ಯೋಜನೆ ಲಾಭಕ್ಕಿಂತ ಯೋಜನಾ ವೆಚ್ಚವೇ ಅಧಿಕವಾಗಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಆಸೆ ತೋರಿಸಿದ್ದು ಬರಪೀಡಿತ ಜನರಿಗೆ, ಹೊಟ್ಟೆ ತುಂಬಿಸಿದ್ದು, ಗುತ್ತಿಗೆದಾರರು, ಅಧಿಕಾರಿಗಳು ಮತ್ತು ಭ್ರಷ್ಟ ರಾಜಕಾರಿಣಿಗಳಿಗೆ ಅಂತ ಸಂಶಯ ಬರುತ್ತದೆ. ನೀವು ಈ ಭಾಗದ ಪ್ರದೇಶಗಳಿಗೆ ನೀರು ಕೊಡಲು ಈಗಲೂ ಬದ್ಧರಿದ್ದೀರಾ? ಈಗಲಾದರೂ ನೈಜ ಅಧ್ಯಯನ ನಡೆಸಿ, ತಪ್ಪು ಯೋಜನೆ ರೂಪಿಸಿ, ಸಾವಿರಾರು ಕೋಟಿ ರೂಪಾಯಿ ದುರುಪಯೋಗವಾಗಿರುವುದರ ವಿರುದ್ಧ ಕ್ರಮಕೈಗೊಳ್ಳಿ ಮತ್ತು ಹಾಲಿ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ಕೇಂದ್ರ ಸರ್ಕಾರದ ವೈಜ್ಞಾನಿಕ ಸಂಸ್ಥೆಗಳು, ತಾಂತ್ರಿಕ ಸಂಸ್ಥೆಗಳು ಮತ್ತು Indian Institute of Science (ಭಾರತೀಯ ವಿಜ್ಞಾನ ಸಂಸ್ಥೆ)ಗಳನ್ನು ಬಳಕೆ ಮಾಡಿಕೊಂಡು ಒಂದು ಸಮಗ್ರ ಅಧ್ಯಯನ ನಡೆಸಿ. ಈ ಯೋಜನೆ ಬೆಟ್ಟ ಅಗೆದು ಇಲಿ ಹಿಡಿದ ಹಾಗೆ ಆಗಿದೆ ಅಲ್ಲವೇ ಮಾನ್ಯ ಮುಖ್ಯಮಂತ್ರಿಗಳೆ ಎಂದು ಸಿ.ಟಿ.ರವಿ ಪ್ರಶ್ನಿಸಿದ್ದಾರೆ.