ಬಯಲು ಸೀಮೆಯಲ್ಲಿ ಅಪರೂಪದ ಖರ್ಜೂರ ಬೆಳೆ- ತೋಟವನ್ನೇ ಮಾರುಕಟ್ಟೆಯಾಗಿ ಪರಿವರ್ತಿಸಿದ ವಿಭಿನ್ನ ರೈತ

Public TV
2 Min Read
CKB FARMERS 1

ಚಿಕ್ಕಬಳ್ಳಾಪುರ: ಬಯಲುಸೀಮೆ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ಸಾಗಾನಹಳ್ಳಿ ಗ್ರಾಮದ ಬಳಿ ಭರ್ಜರಿಯಾಗಿ ಖರ್ಜೂರ ಬೆಳೆಯಲಾಗಿದೆ. ಬೆಂಗಳೂರು ಮೂಲದ ಕೃಷಿ ಪದವೀಧರ ದಿವಾಕರ್ ಚೆನ್ನಪ್ಪ ಖರ್ಜೂರವನ್ನ ಬೆಳೆದು ಸಾಧನೆ ಮಾಡಿದ್ದಾರೆ.

ಹೆಚ್ಚಾಗಿ ಮರುಭೂಮಿ ಪ್ರದೇಶಗಳಲ್ಲಿ ಬೆಳೆಯುವ ಖರ್ಜೂರದ ಹಣ್ಣುಗಳನ್ನು ಜಿಲ್ಲೆಯಲ್ಲಿ ಬೆಳೆಯಲಾಗಿದೆ. ಈಚಲು ಹಣ್ಣುಗಳಂತೆ ಹಳದಿ ಬಣ್ಣದ ಈ ಖರ್ಜೂರದ ಹಣ್ಣುಗಳು ಒಣ ಖರ್ಜೂರಕ್ಕಿಂತ ತಿನ್ನಲು ಬಲು ರುಚಿಕರ ಹಾಗೂ ಆರೋಗ್ಯಕರ ಕೂಡ. ದಿವಾಕರ್ ಚೆನ್ನಪ್ಪ ಅವರು ತನ್ನ ತೋಟಕ್ಕೆ ಗ್ರಾಹಕರನ್ನ ಬರ ಮಾಡಿಕೊಂಡು ತಾವು ಬೆಳೆದ ಖರ್ಜೂರವನ್ನ ಮಾರಾಟ ಮಾಡಿ ಕೈ ತುಂಬಾ ಹಣ ಕೂಡ ಗಳಿಸಿದ್ದಾರೆ.

CKB FARMERS 3

ಕಳೆದ 4 ವರ್ಷಗಳಿಂದ ಖರ್ಜೂರದ ಫಸಲನ್ನ ಮಾರುಕಟ್ಟೆಗೆ ತರೆದೆ ತನ್ನದೇ ತೋಟಕ್ಕೆ ತನ್ನ ಸ್ನೇಹಿತರು, ಸಂಬಂಧಿಕರು, ಪರಿಚಯಸ್ಥರನ್ನು ಕರೆದೊಯ್ದು ಖರ್ಜೂರವನ್ನ ಮಾರಾಟ ಮಾಡುತ್ತಿದ್ದಾರೆ. ಪ್ರತಿ ವರ್ಷ ಫಸಲು ಬಂದಾಗಲೆಲ್ಲಾ ಖರ್ಜೂರದ ಕೊಯ್ಲು ಹಬ್ಬ ಆಚರಿಸುತ್ತಾರೆ. ಹಬ್ಬದ ಅಂಗವಾಗಿ ತನ್ನ ಸ್ನೇಹಿತರು, ಸಂಬಂಧಿಕರು, ಪರಿಚಯಸ್ಥರಿಗೆಲ್ಲಾ ಆಹ್ವಾನ ನೀಡಿ, ಅವರಿಗೆ ಬೇಕಾದ ಖರ್ಜೂರ ಕಟಾವು ಮಾಡಿಕೊಳ್ಳೋಕೆ ಅವಕಾಶ ಮಾಡಿಕೊಡುತ್ತಾರೆ. ಇನ್ನೂ ತೋಟಕ್ಕೆ ಬಂದ ಗ್ರಾಹಕರು ತಮಗೆ ಬೇಕಾದಷ್ಟು ಖರ್ಜೂರ ಕಟಾವು ಮಾಡಿಕೊಂಡು ಹಣ ಪಾವತಿ ಮಾಡುತ್ತಾರೆ.

ಈ ಬಾರಿಯೂ ಸಹ ಬೆಂಗಳೂರು ಸೇರಿದಂತೆ ನೆರೆಯ ಆಂಧ್ರ ಹಾಗೂ ಜಿಲ್ಲೆಯ ಹಲವು ಮಂದಿ ತೋಟಕ್ಕೆ ಭೇಟಿ ಕೊಟ್ಟು ಖರ್ಜೂರ ಕಟಾವು ಮಾಡಿಕೊಂಡರು. ಈ ಬಾರಿ ಪ್ರತಿ ಕೆಜಿ ಖರ್ಜೂರಕ್ಕೆ 300 ರೂಪಾಯಿ ನಿಗದಿ ಮಾಡಿದ್ದು, ಒಂದೇ ದಿನ ತೋಟಕ್ಕೆ ಬಂದ ಗ್ರಾಹಕರು 300 ಕೆಜಿ ಖರ್ಜೂರ ಖರೀದಿಸಿದ್ದಾರೆ. ವಿಶೇಷ ಅಂದ್ರೆ ಖರ್ಜೂರದ ಮರಗಳಿಗೆ ಯಾವುದೇ ರಾಸಾಯನಿಕ ಗೊಬ್ಬರಗಳನ್ನ ಬಳಸಿಲ್ಲ. ಸಾವಯುವ ಗೊಬ್ಬರ ಬಳಸಲಾಗಿದೆ. ಹೀಗಾಗಿ ರೈತ ದಿವಾಕರ್ ಚೆನ್ನಪ್ಪರ ಸಾಧನೆ ಇತರರಿಗೆ ಮಾದರಿ ಅಂತ ಖುಷಿಪಟ್ಟರು.

CKB FARMERS 2

ಒಟ್ಟಿನಲ್ಲಿ ಬೆಲೆ ಇಲ್ಲ, ಮಾರುಕಟ್ಟೆ ವ್ಯವಸ್ಥೆ ಇಲ್ಲ, ಬೆಳೆದ ಬೆಳೆಗೆ ಹಣ ಸಿಗದೆ, ಆತಂಕಕ್ಕೆ ಒಳಗಾಗಿ ದಿಕ್ಕು ತೋಚದೆ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಬದಲು, ರೈತ ದಿವಾಕರ್ ಚೆನ್ನಪ್ಪರಂತೆ ಭಿನ್ನ-ವಿಭಿನ್ನ ಯೋಚನೆ ಮಾಡಿ ಬೆಳೆ ಬೆಳೆದು ಮಾರಾಟ ಮಾಡಬೇಕಿದೆ.

Share This Article
Leave a Comment

Leave a Reply

Your email address will not be published. Required fields are marked *