ಬೀದರ್: ಭೀಕರ ಬರಗಾಲಕ್ಕೆ ತುತ್ತಾಗಿ ಕುಡಿಯುವ ನೀರಿಗೂ ಹಾಹಾಕಾರ ಪರಿಸ್ಥಿತಿ ನಿರ್ಮಾಣವಾಗಿರುವ ಬಿಸಿಲನಾಡು ರಾಯಚೂರಿನಲ್ಲಿ ರಾಕಿಂಗ್ ಸ್ಟಾರ್ ಯಶ್ ನೇತೃತ್ವದ ಯಶೋಮಾರ್ಗದ ಸೇವೆ ಆರಂಭವಾಗಿತ್ತು. ಈಗ ರಾಯಚೂರು ನಂತರ ಬೀದರ್‌ನಲ್ಲಿ ನೀರಿನ ಸೌಲಭ್ಯ ಒದಗಿಸಲು ಯಶೋಮಾರ್ಗ ಮುಂದಾಗಿದೆ.
ಶುಕ್ರವಾರ ಬೀದರ್ ಜಿಲ್ಲೆಯ ಬೋರಳ ಗ್ರಾಮದಲ್ಲಿ ಯಶೋಮಾರ್ಗ ವತಿಯಿಂದ ಟ್ಯಾಂಕರ್ ಗಳ ಮೂಲಕ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ ಜಿಲ್ಲೆಯ ಔರಾದ್ ತಾಲೂಕಿನ ರಾಮನಗರ ಗ್ರಾಮದಲ್ಲಿ ಕೂಡ ಜನರಿಗೆ ಕುಡಿಯುವ ನೀರು ಒದಗಿಸಲಾಯಿತು. ಬೀದರ್ ಜನರು ಮೊದಲು ಕುಡಿಯುವ ನೀರಿನ ಟ್ಯಾಂಕರ್ ಗೆ ಪೂಜೆ ಮಾಡಿದ್ದಾರೆ. ಬಳಿಕ ಕೊಡಗಳಲ್ಲಿ ನೀರು ತುಂಬಿಸಿಕೊಂಡಿದ್ದಾರೆ.
ರಾಯಚೂರು ತಾಲೂಕಿನ ಬಿಜನಗೇರಾ, ಬೋಳಮಾನದೊಡ್ಡಿ, ಬಾಯಿದೊಡ್ಡಿ, ಗೌಶ್ ನಗರದಲ್ಲಿ ಬುಧವಾರ ಕುಡಿಯುವ ನೀರನ್ನು ಒದಗಿಸಲಾಗಿತ್ತು. ಹತ್ತಿರದಲ್ಲಿ ಲಭ್ಯವಿರುವ ಖಾಸಗಿ ಬೋರ್ ವೆಲ್‍ಗಳಿಂದ ಟ್ಯಾಂಕರ್ ಗೆ ನೀರನ್ನು ತುಂಬಿಸಿಕೊಂಡು ಉಚಿತವಾಗಿ ಕೊಡಲಾಗುತ್ತಿತ್ತು. ಸದ್ಯ ಕುಡಿಯುವ ನೀರಿನ ಸಮಸ್ಯೆಯಿಂದ ಬೇಸತ್ತ ಜನ ಯಶೋಮಾರ್ಗದ ಸಾಮಾಜಿಕ ಕಾಳಜಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.