ಆರ್‌ಸಿಬಿ ಆಟಗಾರ ಯಶ್ ದಯಾಳ್ ವಿರುದ್ಧ FIR – ಸಂತ್ರಸ್ತೆ ಹೇಳಿಕೆ ದಾಖಲಿಸಿಕೊಂಡ ಬಳಿಕ ಪೊಲೀಸರ ಕ್ರಮ

Public TV
2 Min Read
Yash Dayal 1

2025ರ ಐಪಿಎಲ್‌ನಲ್ಲಿ (IPL) ಆರ್‌ಸಿಬಿ ತಂಡದ ಪ್ರಮುಖ ಬೌಲರ್ ಯಶ್ ದಯಾಳ್ (Yash Dayal) ವಿರುದ್ಧ ಎಫ್‌ಐಆರ್ (FIR) ದಾಖಲಾಗಿದ್ದು, ಪೊಲೀಸರು ಸಂತ್ರಸ್ತೆಯ ಹೇಳಿಕೆ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ.

ಹೌದು, ಇತ್ತೀಚಿಗಷ್ಟೇ ಗಾಜಿಯಾಬಾದ್‌ನ ಯುವತಿಯೊಬ್ಬಳು ಯಶ್ ದಯಾಳ್ ವಿರುದ್ಧ ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ಆರೋಪಿಸಿ, ದೂರು ದಾಖಲಿಸಿದ್ದರು. ದೂರಿನಲ್ಲಿ, ನನ್ನ ಜೊತೆಗೆ ಐದು ವರ್ಷಗಳಿಂದ ಸಂಬಂಧ ಹೊಂದಿದ್ದು, ಮದುವೆಯಾಗುತ್ತೇನೆಂದು ಭರವಸೆ ನೀಡಿದ್ದರು. ನನ್ನನ್ನು ನಿಮ್ಮ ಭಾವಿ ಸೊಸೆ ಎಂದು ಅವರ ಕುಟುಂಬಕ್ಕೆ ಪರಿಚಯಿಸಿದ್ದರು. ಇದರಿಂದ ಮದುವೆಯಾಗುತ್ತಾರೆ ಅನ್ನೋ ಭರವಸೆ ಇತ್ತು. ಆದರೆ ನನಗೆ ವಂಚನೆ ಮಾಡಿದ್ದಾರೆ. ಜೊತೆಗೆ ಆರ್ಥಿಕ ಮತ್ತು ಮಾನಸಿಕ ಶೋಷಣೆ ಮಾಡಿದ್ದಾರೆ ಎಂದು ಉಲ್ಲೇಖಿಸಿದ್ದರು.ಇದನ್ನೂ ಓದಿ: ಪರಪ್ಪನ ಅಗ್ರಹಾರ ಜೈಲು ಎಎಸ್‌ಐ, ಮನೋವೈದ್ಯ ಸೇರಿ ಮೂವರು ಶಂಕಿತ ಉಗ್ರರ ಬಂಧನ

ದಯಾಳ್ ನನ್ನನ್ನೂ ಹೊರತುಪಡಿಸಿ ನಾಲ್ಕೂವರೆ ವರ್ಷದಲ್ಲಿ ಹಲವು ಮಹಿಳೆಯರೊಂದಿಗೆ ಸಂಪರ್ಕ ಹೊಂದಿದ್ದ. ಅದಕ್ಕೆ ಸಾಕ್ಷಿಗಳೂ ಇವೆ. ಕನಿಷ್ಠ ಮೂವರೊಟ್ಟಿಗೆ ಅಫೇರ್ ಇಟ್ಟುಕೊಂಡಿದ್ದಾನೆ. ಇದಕ್ಕೆ ಸಂಬಂಧಿಸಿದಂತೆ ನನ್ನ ಬಳಿ ಹಲವು ಚಾಟಿಂಗ್‌ನ ಸ್ಕ್ರೀನ್‌ಶಾಟ್‌ಗಳು, ವೀಡಿಯೊ ಕಾಲ್ ರೆಕಾರ್ಡಿಂಗ್‌ಗಳು ಹಾಗೂ ಫೋಟೋಗಳಿವೆ ಎಂದು ತೋರಿಸಿದ್ದಾರೆ. ಇದೆಲ್ಲವೂ ಮೊದಲೇ ತಿಳಿದಿದ್ದರೆ ಹಿಂದೆ ಸರಿಯಬಹುದಿತ್ತು. ಆದ್ರೆ ಇದ್ಯಾವುದೂ ನನಗೆ ಗೊತ್ತಿರಲಿಲ್ಲ. ಅವನೂ ಸಹ ನನ್ನ ಬಳಿ ಇದೆಲ್ಲವನ್ನೂ ಮುಚ್ಚಿಟ್ಟಿದ್ದ. ಆ ದೇವರೇ ಎಲ್ಲ ನೋಡಿಕೊಳ್ಳಲಿ ಅಂತ ನಾನು ಸುಮ್ಮನಿದ್ದೆ. ಆದ್ರೆ ನನ್ನನ್ನ ಬಳಸಿಕೊಂಡು ಭಾವನಾತ್ಮಕವಾಗಿ ಮತ್ತು ದೈಹಿಕವಾಗಿ ವಂಚಿಸಿದ್ದಾರೆ ಎಂದು ಆಕೆ ದೂರಿದ್ದಾರೆ.

ದಯಾಳ್ ತನಗೆ ಮೋಸ ಮಾಡುತ್ತಿದ್ದಾನೆಂದು ತಿಳಿದ ತಕ್ಷಣ ನಾನು ಇದನ್ನು ಪ್ರತಿಭಟಿಸಿದೆ. ಇದರಿಂದ ನಾನು ದೈಹಿಕ ಹಿಂಸೆ ಮತ್ತು ಮಾನಸಿಕ ಕಿರುಕುಳವನ್ನು ಎದುರಿಸಬೇಕಾಯಿತು. ಜೂನ್ 14 ರಂದು ಮಹಿಳಾ ಸಹಾಯವಾಣಿಗೆ ಪ್ರಕರಣದ ಬಗ್ಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ಸಂತ್ರಸ್ತೆ ಪೊಲೀಸರ ವಿರುದ್ಧವೂ ಆರೋಪ ಹೊರಿಸಿದ್ದಾರೆ.

ಸದ್ಯ ಮಹಿಳೆಯ ದೂರಿನ ಆಧಾರದ ಮೇಲೆ ಯಶ್ ದಯಾಳ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 69ರ ಅಡಿಯಲ್ಲಿ ಲೈಂಗಿಕ ಕಿರುಕುಳ ಮತ್ತು ಶೋಷಣೆಯ ಪ್ರಕರಣ ದಾಖಲಿಸಲಾಗಿದೆ. ಸಂತ್ರಸ್ತೆ ಮುಖ್ಯಮಂತ್ರಿಗಳ ದೂರು ಸಲ್ಲಿಕೆ ಪೋರ್ಟಲ್, ಐಜಿಆರ್‌ಎಸ್ ಮೂಲಕ ಸಲ್ಲಿಸಿದ ದೂರಿನ ಆಧಾರದ ಮೇಲೆ ಪ್ರಾಥಮಿಕ ತನಿಖೆ ನಡೆಸಿ, ಬಳಿಕ ಇಂದಿರಾಪುರಂ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

ಸದ್ಯ ಪೊಲೀಸರು ಸಂತ್ರಸ್ತೆಯ ಹೇಳಿಕೆ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ.ಇದನ್ನೂ ಓದಿ: 50 ಮೌಲಾನ ಆಜಾದ್ ಮಾದರಿ ಶಾಲೆ ತೆರೆಯಲು ಸರ್ಕಾರ ಆದೇಶ – ವಿಪಕ್ಷಗಳ ಕಿಡಿ

Share This Article