ಬೆಂಗಳೂರು: ಹುಟ್ಟುಹಬ್ಬದ ದಿನ ಶುಭಾಶಯ ಹೇಳಲು ಹೊಸಕೆರೆಹಳ್ಳಿಯ ನಿವಾಸಕ್ಕೆ ಆಗಮಿಸಿ ಪೆಟ್ರೋಲ್ ಸುರಿದು ಆತ್ಮಹತ್ಯೆಗೆ ಯತ್ನಿಸಿದ ಅಭಿಮಾನಿ ರವಿಯ ಆರೋಗ್ಯವನ್ನು ನಟ ಯಶ್ ವಿಚಾರಿಸಿದ್ದಾರೆ.
ವಿಕ್ಟೋರಿಯಾ ಆಸ್ಪತ್ರೆಗೆ ಆಗಮಿಸಿ ಆರೋಗ್ಯ ವಿಚಾರಿಸಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಯಶ್, ಇದೇ ಕೊನೆ. ಇನ್ನು ಮುಂದೆ ನನ್ನ ಅಭಿಮಾನಿಗಳು ಈ ರೀತಿಯ ದುಸ್ಸಾಹಸಕ್ಕೆ ಪ್ರಯತ್ನ ಪಟ್ಟರೆ ನಾನು ಮತ್ತೆ ಬರುವುದಿಲ್ಲ ಎಂದು ಕೈ ಮುಗಿದು ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಇವತ್ತು ಈ ಘಟನೆ ನಡೆದಾಗ ನಾನು ಮನೆಯಲ್ಲಿ ಇರಲಿಲ್ಲ. ಅಂಬರೀಶ್ ಅಣ್ಣಾ ನಮ್ಮ ಮಧ್ಯೆ ಇಲ್ಲ ಎನ್ನುವ ಕಾರಣಕ್ಕೆ ಹುಟ್ಟುಹಬ್ಬ ಆಚರಿಸುವುದಿಲ್ಲ ಎಂದು ಮೊದಲೇ ತಿಳಿಸಿದ್ದೆ. ಪ್ರತಿ ವರ್ಷ ನಾನು ಅಭಿಮಾನಿಗಳ ಜತೆ ಹುಟ್ಟು ಹಬ್ಬಗಳನ್ನು ಆಚರಿಸುತ್ತಿದ್ದೆ. ನನಗೆ ಈಗ ಸ್ವಲ್ಪ ಹೊತ್ತಿನ ಹಿಂದೆ ಆತ್ಮಹತ್ಯೆಗೆ ಯತ್ನಿಸಿದ ವಿಷಯ ಗೊತ್ತಾಯಿತು. ವಿಚಾರ ಗೊತ್ತಾದ ತಕ್ಷಣವೇ ಆಸ್ಪತ್ರೆಗೆ ಬಂದೆ ಎಂದು ಹೇಳಿದರು.
ಡಾಕ್ಟರ್ ಡ್ರೆಸ್ಸಿಂಗ್ ಮಾಡುವ ವೇಳೆ ಈಗಲಾದರೂ ಬರುತ್ತಾರಾ ಎಂದು ರವಿ ಕೇಳಿದ್ದರಂತೆ. ಅವರ ತಂದೆಗೆ ನಾನು ಕ್ಷಮೆ ಕೇಳಿದೆ. ಆಗ ಅವರು ಕೂಡ ನೀವೇನು ಮಾಡ್ತಿರಾ ಬಿಡಿ ಸರ್ ಎಂದಿದ್ದರು. ಇದು ಅವರ ದೊಡ್ಡತನ ಎಂದು ಹೇಳಬಹುದು. ರವಿ ತಂದೆ ತಾಯಿ ಬೆಳಗ್ಗೆ 10 ರೂಪಾಯಿ ಕೊಟ್ಟರಂತೆ. ರವಿ ಅವರ ಶೇ.70 ರಷ್ಟು ದೇಹ ಸುಟ್ಟು ಹೋಗಿದೆ. ನನಗೆ ಈ ವಿಚಾರ ಕೇಳಿ ತುಂಬಾ ಭಯ ಆಯ್ತು. ಇನ್ನು ಯಾರೇ ಅಭಿಮಾನಿಗಳು ಈ ರೀತಿ ಮಾಡಿಕೊಂಡರೆ ನಾನಂತೂ ಬರುವುದಿಲ್ಲ. ಸಿನಿಮಾ ನೋಡಿ ನಮ್ಮಿಂದ ಏನಾದರೂ ಒಳ್ಳೆಯದನ್ನು ಕಲಿತುಕೊಳ್ಳಿ. ಇಂತಹ ಘಟನೆಗಳನ್ನು ಮಾಡಿಕೊಳ್ಳಬೇಡಿ ಎಂದು ಯಶ್ ಅಭಿಮಾನಿಗಳಲ್ಲಿ ಮತ್ತೊಮ್ಮೆ ಮನವಿ ಮಾಡಿಕೊಂಡರು.
ನಡೆದಿದ್ದು ಏನು?
ಮೂಲತಃ ಪಾವಗಡದ ಸೋಲನಾಯಕನಹಳ್ಳಿ ನಿವಾಸಿ ರವಿ ಪೈಂಟಿಂಗ್ ಕೆಲಸ ಮಾಡಿಕೊಂಡಿದ್ದು, ಪ್ರತಿ ವರ್ಷ ಯಶ್ ಹುಟ್ಟುಹಬ್ಬಕ್ಕೆ ತಪ್ಪದೇ ಬೆಂಗಳೂರಿಗೆ ಬಂದು ಶುಭಾಶಯ ಹೇಳುತ್ತಿದ್ದ. ಮನರಂಜನಾ ಕಾರ್ಯಕ್ರಮಗಳಲ್ಲಿ ಯಶ್ ನಟನೆಯ ಹಾಡುಗಳಿಗೆ ಡ್ಯಾನ್ಸ್ ಮಾಡ್ತಿದ್ದ ರವಿ ಇಂದು ತನ್ನ ಮನೆಯಲ್ಲಿ ಅಡುಗೆ ಮಾಡಿದ್ದ. ಈ ಸಮಯದಲ್ಲಿ ತಂದೆಯ ಬಳಿ 10 ರೂ. ಕೇಳಿದ್ದ. ತಂದೆ ರಘು ಅವರು ಇವತ್ತು ಹೊರಗಡೆ ಹೋಗಬೇಡ. ಬಂದ್ ಇದೆ, ಗಲಾಟೆ ಆಗಬಹುದು ಎಂದು ತಿಳಿಸಿದ್ದಾರೆ. ಆದರೂ ಯಶ್ ಮೇಲಿನ ಅಭಿಮಾನದಿಂದ ಬೆಳಗ್ಗೆ ಮನೆಯಿಂದ ಹೊರಟು ಮಧ್ಯಾಹ್ನ ಹೊಸಕೆರೆಹಳ್ಳಿಯಲ್ಲಿರುವ ನಿವಾಸಕ್ಕೆ ಬಂದಿದ್ದಾನೆ.
ರವಿ ಆತ್ಮಹತ್ಯೆ ಮಾಡುವ ಮುನ್ನವೇ ಯಶ್ ತಾಯಿ ಪುಷ್ಪಾ ಅವರು, ಮಗ ಮನೆಯಲ್ಲಿ ಇಲ್ಲ. ಯಶ್ ಇಂದು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ದಯವಿಟ್ಟು ಮನೆಯಿಂದ ತೆರಳಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದರು. ಹಲವು ಬಾರಿ ಮನವಿ ಮಾಡಿಕೊಂಡಿದ್ದರೂ ಕೆಲ ಅಭಿಮಾನಿಗಳಿಗಳು ಯಶ್ ಅವರನ್ನು ನಾವು ಇವತ್ತೆ ನೋಡಲೇಬೇಕು ಎಂದು ಹಠ ಹಿಡಿದು ಮನೆಯ ಮುಂಭಾಗದಲ್ಲಿ ಕುಳಿತಿದ್ದರು.
ಈ ರೀತಿ ಹಠ ಹಿಡಿದ ಅಭಿಮಾನಿಗಳ ಪೈಕಿ ರವಿಯು ಯಶ್ ಅವರಿಗಾಗಿ ಕಾದು ಕುಳಿತಿದ್ದ. ಎಷ್ಟು ಹೊತ್ತಾದರೂ ಯಶ್ ಮನೆಗೆ ಬಾರದೇ ಇದ್ದ ಹಿನ್ನೆಲೆಯಲ್ಲಿ ಬೇಸರಗೊಂಡ ರವಿ ಮೈ ಮೇಲೆ ಪೆಟ್ರೋಲ್ ಹಚ್ಚಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಅಷ್ಟೇ ಅಲ್ಲದೇ ಬೆಂಕಿ ಹಚ್ಚಿಕೊಂಡು ರಸ್ತೆಯಲ್ಲೇ ಓಡಾಡಿದ್ದಾನೆ. ಕೂಡಲೇ ಅಲ್ಲಿದ್ದ ಮಂದಿ ಬೆಂಕಿ ನಂದಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಯಶ್ ಎಂದರೆ ಮಗ ರವಿಗೆ ಪಂಚಪ್ರಾಣ. ಪ್ರತಿವರ್ಷವೂ ನನ್ನ ಮಗ ತಪ್ಪದೇ ಯಶ್ ಮನೆಗೆ ತೆರಳಿ ಹುಟ್ಟುಹಬ್ಬದ ಶುಭಾಶಯ ಹೇಳುತ್ತಿದ್ದ. ಇಂದು ಬೆಳಗ್ಗೆ ನಾನು ಯಶ್ ಅವರನ್ನು ನೋಡಿ ಬೇಗ ಬರುತ್ತೇನೆ ಎಂದು ಹೇಳಿ ಹೋಗಿದ್ದ. ಮಧ್ಯಾಹ್ನ ಪೊಲೀಸರು ಫೋನ್ ಮಾಡಿ ರವಿ ಆತ್ಮಹತ್ಯೆಗೆ ಯತ್ನಿಸಿರುವ ವಿಚಾರ ತಿಳಿಸಿದರು. ಕೂಡಲೇ ನಾನು ವಿಕ್ಟೋರಿಯಾ ಆಸ್ಪತ್ರೆಗೆ ದೌಡಾಯಿಸಿ ಬಂದೆ ಎಂದು ರವಿ ತಂದೆಯಾದ ರಘು ಅವರು ತಿಳಿಸಿದ್ದಾರೆ.
https://www.youtube.com/watch?v=_RZyZvDggRU&feature=youtu.be
ಯಶ್ ತಾಯಿ ಪುಷ್ಪ ಪ್ರತಿಕ್ರಿಯಿಸಿ, ಅಭಿಮಾನಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎನ್ನುವ ವಿಚಾರ ನನಗೆ ಗೊತ್ತೇ ಇರಲಿಲ್ಲ. ಮಾಧ್ಯಮಗಳಲ್ಲಿ ಸುದ್ದಿ ಬಂದ ಬಳಿಕ ಗೊತ್ತಾಯಿತು. ಬೆಳಗ್ಗೆ ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳು ಮನೆಗೆ ಬಂದಿದ್ದರು. ನಾನೇ ಅವರಿಗೆ ಯಶ್ ಮನೆಯಲ್ಲಿ ಇಲ್ಲ. ಈ ಬಾರಿ ಹುಟ್ಟುಹಬ್ಬ ಆಚರಿಸಿಕೊಳ್ಳುವುದಿಲ್ಲ ಎಂದು ತಿಳಿಸಿದ್ದೆ. ಹೊರಗಡೆ ಇದ್ದಾಗ ಅಭಿಮಾನಿಯೊಬ್ಬ ಕೈ ಕೊಯ್ದುಕೊಳ್ಳುತ್ತೇನೆ ಅಂದಿದ್ದ. ಆ ವೇಳೆ ನಾನೇ ಬೇಡಪ್ಪ. ಯಶ್ ಮನೆಯಲ್ಲಿ ಇಲ್ಲ ಎಂದು ಮನವಿ ಮಾಡಿದ್ದೆ. ಸಾಕಷ್ಟು ಬಾರಿ ಮನವಿ ಮಾಡಿದರೂ ಅಭಿಮಾನಿಗಳು ನಿವಾಸದ ಮುಂಭಾಗದಲ್ಲೇ ಕಾಯುತ್ತಾ ಕುಳಿತಿದ್ದರು. ಈಗ ಈ ಘಟನೆ ನೋಡಿ ತುಂಬಾ ನೋವಾಗುತ್ತಿದೆ. ಅಭಿಮಾನಿಗಳು ಈ ರೀತಿ ಮಾಡಿಕೊಳ್ಳಬಾರದು ಎಂದು ಅವರು ಮಾಧ್ಯಮಗಳ ಮೂಲಕ ಮೂಲಕ ಮನವಿ ಮಾಡಿಕೊಂಡರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv