ರಾಕಿಂಗ್ ಸ್ಟಾರ್ ಯಶ್ (Yash) ಮತ್ತು ರಾಧಿಕಾ ಪಂಡಿತ್ (Radhika Pandit) ದಂಪತಿ ಮಾಜಿ ಸಿಎಂ ಎಸ್.ಎಂ. ಕೃಷ್ಣ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿ, ಎಸ್.ಎಂ. ಕೃಷ್ಣ ಅವರದ್ದು ಧೀಮಂತ ವ್ಯಕ್ತಿತ್ವವಾಗಿತ್ತು ಎಂದು ಯಶ್ ಸ್ಮರಿಸಿದ್ದಾರೆ. ಇದನ್ನೂ ಓದಿ:ವಾರಣಾಸಿ ಕಾಶಿ ವಿಶ್ವನಾಥ ಸನ್ನಿಧಿಯಲ್ಲಿ ಸಾಯಿ ಪಲ್ಲವಿ
ಪ್ರತಿಯೊಬ್ಬರು ಎಸ್.ಎಂ. ಕೃಷ್ಣರನ್ನು (S M Krishna) ನೆನಪಿಸಿಕೊಳ್ಳಲೇಬೇಕು. ಅವರು ರಾಜ್ಯಕ್ಕೆ ಕೊಟ್ಟಿರುವ ಕೊಡುಗೆ ಅಪಾರ. ಬೆಂಗಳೂರು ಆಗಿರಬಹುದು ಎಲ್ಲೇ ಆಗಿದ್ರೂ ಅವರು ಮಾಡಿರುವ ಕೆಲಸ ನಮ್ಮ ಮುಂದಿದೆ. ಅವರು ಎಷ್ಟು ಅದ್ಭುತವಾದ ಬದುಕನ್ನು ಬದುಕಿದ್ದಾರೆ ಎಂಬುದು ನಮಗೆಲ್ಲಾ ಗೊತ್ತು. ಅವರದ್ದು ಧೀಮಂತ ವ್ಯಕ್ತಿತ್ವವಾಗಿತ್ತು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಯಶ್ ಮಾತನಾಡಿದರು.
ಅವರು ನಿಧನರಾದ ಸಂದರ್ಭದಲ್ಲಿ ನಾನು ಊರಲ್ಲಿ ಇರಲಿಲ್ಲ. ನಮ್ಮ ಪ್ರತಿ ಕೆಲಸಕ್ಕೂ ಎಸ್.ಎಂ. ಕೃಷ್ಣರವರ ಹಾರೈಕೆ ಇತ್ತು. ಅವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇವೆ ಎಂದರು ಯಶ್.
ಡಿ.11ರಂದು ಎಸ್.ಎಂ. ಕೃಷ್ಣ ನಿಧನರಾಗಿದ್ದ ದಿನದಂದು ಯಶ್ ಮುಂಬೈನಲ್ಲಿದ್ದರು. ‘ಟಾಕ್ಸಿಕ್’ ಸಿನಿಮಾ ಕೆಲಸದಲ್ಲಿ ಬ್ಯುಸಿಯಾಗಿದ್ದರು. ಈ ಕಾರಣಕ್ಕಾಗಿ ಎಸ್.ಎಂ ಕೃಷ್ಣರವರ ಅಂತಿಮ ದರ್ಶನ ಪಡೆಯಲು ಆಗಿರಲಿಲ್ಲ. ಹಾಗಾಗಿ ಇಂದು (ಡಿ.23) ಪತ್ನಿಯೊಂದಿಗೆ ಯಶ್ ಭೇಟಿ ನೀಡಿ ಕುಟುಂಬಸ್ಥರೊಂದಿಗೆ ಮಾತನಾಡಿದ್ದಾರೆ. ಇವರೊಂದಿಗೆ ಕೆವಿಎನ್ ಸಂಸ್ಥೆಯ ರೂವಾರಿ ವೆಂಕಟ್ ಕೂಡ ಭಾಗಿಯಾಗಿದ್ದರು. ಈ ವೇಳೆ, ಎಸ್‌ಎಂಕೆ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ಅಂದಹಾಗೆ, ಮುಂಬೈನಲ್ಲಿ ‘ಟಾಕ್ಸಿಕ್’ ಸಿನಿಮಾ ಶೂಟಿಂಗ್‌ನಲ್ಲಿ ಯಶ್ ತೊಡಗಿಸಿಕೊಂಡಿದ್ದಾರೆ. ಕಿಯಾರಾ ಅಡ್ವಾಣಿ, ಅನಿಲ್ ಕಪೂರ್ ಈ ಸಿನಿಮಾದ ಭಾಗವಾಗಿದ್ದಾರೆ.