ಯಾದಗಿರಿ: ಜಿಲ್ಲೆಯ ಜನರ ಬಹು ದಿನ ಕನಸು ಕೊನೆಗೂ ನನಸಾಗಿದೆ. ಹೈದರಾಬಾದ್ ಕರ್ನಾಟಕ ಭಾಗದ ಹಿಂದುಳಿದ ಪ್ರದೇಶ ಎನ್ನಲಾಗುತ್ತಿದ್ದ ಯಾದಗಿರಿ ಜಿಲ್ಲೆಗೆ ಅಗತ್ಯವಿದ್ದ ಮೆಡಿಕಲ್ ಕಾಲೇಜು ಮಂಜೂರು ಮಾಡಲಾಗಿದೆ.
ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಕೇಂದ್ರ ಸರ್ಕಾರದಿಂದ ಅಧಿಕೃತ ಘೋಷಣೆ ಮಾಡಿದ್ದಾರೆ.ಸಂಸದ ರಾಜಾ ಅಮರೇಶ್ ನಾಯಕ್ ಅವರಿಗೆ ಪತ್ರ ಬರೆದಿರುವ ಕೇಂದ್ರ ಸಚಿವರು, ನಿಮ್ಮ ನಾಯಕತ್ವದಲ್ಲಿ ಕಾರ್ಯ ಆರಂಭಿಸಿ ಎಂದು ಸೂಚನೆ ನೀಡಿದ್ದಾರೆ.
ಗ್ರಾಮ ವಾಸ್ತವ್ಯ ಸಮಯದಲ್ಲಿ ಅಂದಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮೆಡಿಕಲ್ ಕಾಲೇಜು ಮಂಜೂರಾತಿಗೆ ತಡೆ ನೀಡಿದ್ದರು. ಇದರಿಂದ ಜಿಲ್ಲೆಯಲ್ಲಿ ತೀವ್ರ ವಿರೋಧ ವ್ಯಕ್ತವಾಗಿ ಯಾದಗಿರಿ ಬಂದ್ ಸಹ ಮಾಡಲಾಗಿತ್ತು. ಈ ವೇಳೆ ಬಿ.ಎಸ್.ಯಡಿಯೂರಪ್ಪ ಅವರು ನಾನು ಮುಖ್ಯಮಂತ್ರಿಯಾದರೆ ಮೆಡಿಕಲ್ ಕಾಲೇಜು ಮಂಜೂರು ಮಾಡುತ್ತೇನೆ ಎಂದು ಬಿಜೆಪಿ ನಾಯಕರು ಹಾಗೂ ಜಿಲ್ಲೆಯ ಜನರಿಗೆ ಮಾತು ಕೊಟ್ಟಿದ್ದರು. ಸಿಎಂ ಯಡಿಯೂರಪ್ಪ ಅವರು ಕೊಟ್ಟ ಮಾತಿನಂತೆ ನಡೆದುಕೊಂಡಿದ್ದು ಜಿಲ್ಲೆಯ ಜನರಿಗೆ ಖುಷಿ ತಂದಿದೆ.
ರಾಜ್ಯ ಸಂಪುಟ ಸಭೆಯ ಬಳಿಕ ಇಂದು ಮಾಧ್ಯಮಗಳ ಜೊತೆಗೆ ಮಾತನಾಡಿದ ಕಾನೂನು ಹಾಗೂ ಸಂಸದೀಯ ವ್ಯವಹಾರ ಸಚಿವ ಮಾಧುಸ್ವಾಮಿ ಅವರು, ಚಿಕ್ಕಬಳ್ಳಾಪುರ ವೈದ್ಯಕೀಯ ಕಾಲೇಜು ನಿರ್ಮಾಣಕ್ಕೆ 525 ಕೋಟಿ ರೂ. ಪರಿಷ್ಕೃತ ಅಂದಾಜಿಗೆ ಅನುಮೋದನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.