ಯಾದಗಿರಿ: ಇಲ್ಲಿನ ಮೈಲಾಪುರದ (Mylapura) ಮಲ್ಲಯ್ಯನ ಜಾತ್ರೆಯಲ್ಲಿ ಅಧಿಕಾರಿಗಳಿಂದ ಮಹಾ ಎಡವಟ್ಟು ನಡೆದಿದೆ. ಭಿಕ್ಷುಕರೆಂದು ಗೊರವಯ್ಯನವರನ್ನು (Goravayya) ನಿರಾಶ್ರಿತರ ಕೇಂದ್ರಕ್ಕೆ ಕರೆದುಕೊಂಡು ಹೋದ ಘಟನೆ ನಡೆದಿದೆ.
ಪ್ರತಿ ವರ್ಷ ಹಾವೇರಿ (Haveri) ಹಾಗೂ ಗದಗ ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಗೊರವಯ್ಯನವರು ಮೈಲಾಪುರ ಮಲ್ಲಯ್ಯನ ಸೇವೆಗೆ ಪಾದಯಾತ್ರೆ ಮೂಲಕ ಬರುತ್ತಾರೆ. ಪಾದಯಾತ್ರೆ ಮೂಲಕ ಬರುವ ಗೊರವಯ್ಯನವರ ಜಾತ್ರೆಯ ದಿನ ಮಲ್ಲಯ್ಯನ ಸೇವೆ ಸಲ್ಲಿಸುತ್ತಾರೆ. ಅದೇ ಪದ್ಧತಿಯಂತೆ ಈ ಬಾರಿಯೂ ಮೈಲಾಪುರದ ಮಲ್ಲಯ್ಯನ ದೇವಸ್ಥಾನಕ್ಕೆ ಬಂದಿದ್ದ ಐದಾರು ಗೊರವಯ್ಯನವರನ್ನ ಅಧಿಕಾರಿಗಳು ಭಿಕ್ಷುಕರೆಂದು ಭಾವಿಸಿ ರಾಯಚೂರು ನಿರಾಶ್ರಿತರ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದಾರೆ. ಇದನ್ನೂ ಓದಿ: ಕರುನಾಡಿಗೆ ಬಿಗ್ ಶಾಕ್, ಡ್ಯಾಂ ನೀರಿನ ಮಟ್ಟ ಭಾರೀ ಕುಸಿತ – ಕಳೆದ ವರ್ಷ ಎಷ್ಟಿತ್ತು? ಈ ಬಾರಿ ಎಷ್ಟಿದೆ?
Advertisement
Advertisement
ಅಧಿಕಾರಿಗಳ ಈ ನಡೆಯಿಂದ ರೊಚ್ಚಿಗೆದ್ದ ಗೊರವಯ್ಯನವರ ಕುಟುಂಬಸ್ಥರು ಆಕ್ರೋಶಗೊಂಡಿದ್ದಾರೆ. ಕರೆದುಕೊಂಡು ಹೋಗಿರುವ ಗೊರವಯ್ಯರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದಾರೆ. ಅಲ್ಲದೇ ಗೊರವಯ್ಯನವರಿಂದ ಅಧಿಕಾರಿಗಳು ಹಣ ಕಟ್ಟುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಪೊಲೀಸರಿಂದ ಮಾಹಿತಿ ಪಡೆದು ಅಧಿಕಾರಿಗಳು ಕರೆದುಕೊಂಡು ಹೋಗಬೇಕಿತ್ತು ಎಂದು ಆಕ್ರೋಶ ಹೊರಹಾಕಿದ್ದಾರೆ.
Advertisement
Advertisement
ಈ ಸಂಬಂಧ ಹಾಲುಮತ ಮಹಾಸಭಾದ ರಾಜ್ಯಾಧ್ಯಕ್ಷ ರುದ್ರಣ್ಣ ಗುಳಗುಳಿಯವರು, ಅಧಿಕಾರಿಗಳ ನಡೆಯನ್ನ ಖಂಡಿಸಿದ್ದಾರೆ. ಅಧಿಕಾರಿಗಳೇ ಕಳ್ಳರಿದ್ದಾರೆ. ಮೈಲಾಪುರದಲ್ಲಿ ಯಾವುದೇ ಅಭಿವೃದ್ಧಿ ಮಾಡಿಲ್ಲ. ಇದೀಗ ಸೇವೆಗೆ ಬಂದ ಗೊರವಯ್ಯರನ್ನು ಕೂಡಿ ಹಾಕಿದ್ದಾರೆ. ಅಧಿಕಾರಿಗಳಿಗೆ ತಾಕತ್ ಇದ್ದರೆ ಜಾತ್ರೆ ಬಂದ್ ಮಾಡಿಸಲಿ. ಗೊರವಪ್ಪರನ್ನ ಕರೆದುಕೊಂಡು ಹೋಗಿ ಹಾಲುಮತ ಸಮಾಜಕ್ಕೆ ಅವಮಾನ ಮಾಡಿದ್ದಾರೆ ಎಂದು ಅಧಿಕಾರಿಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕುಟುಂಬಸ್ಥರೆಲ್ಲರೂ ರಾಯಚೂರಿನ ನಿರಾಶ್ರಿತರ ಕೇಂದ್ರದ ಬಳಿ ಜಮಾಯಿಸಿ, ಅಲ್ಲಿಯೇ ಅಡುಗೆ ಮಾಡಿ ಅಧಿಕಾರಿಗಳ ನಡೆ ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಗೊರವಯ್ಯರವರನ್ನ ಕರೆದುಕೊಂಡು ಬಂದ ಅಧಿಕಾರಿಗಳು ಕೂಡಲೇ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಮುಂದೆ ಆಗುವ ಅನಾಹುತಕ್ಕೆ ನಾವು ಜವಾಬ್ದಾರರಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಇದೀಗ ರಾಜ್ಯದ ಬೇರೆ ಬೇರೆ ಜಿಲ್ಲೆಯ ಗೊರವಯ್ಯನವರು ಪ್ರತಿಭಟನೆಯಲ್ಲಿ ಭಾಗಿಯಾಗುವ ಸಾಧ್ಯತೆ ಇದೆ. ಇದನ್ನೂ ಓದಿ: ತಪ್ಪಿತಸ್ಥರಿಗೆ ಕ್ಷಮೆ ಇಲ್ಲ – ಹಾನಗಲ್ ಗ್ಯಾಂಗ್‌ರೇಪ್ ಪ್ರಕರಣ ಕುರಿತು ಸಿಎಂ ಮೊದಲ ಪ್ರತಿಕ್ರಿಯೆ