– ಯಾದಗಿರಿಯಲ್ಲಿ ಪೊಲೀಸರ ವಿನೂತನ ಪ್ಲಾನ್
ಯಾದಗಿರಿ: ಸದ್ಯ ಲಾಕ್ ಡೌನ್ ಸಂಪೂರ್ಣ ಸಡಲಿಕೆ ಅನುಭವಿಸುತ್ತಿರುವ ಯಾದಗಿರಿ ಜನತೆ ಕೊರೊನಾ ಮುಂಜಾಗ್ರತಾ ಕ್ರಮಗಳನ್ನು ಮರೆತು ಬಿಟ್ಟಿದ್ದಾರೆ. ಮಾಸ್ಕ್ ಧರಿಸುವುದು ಕಡ್ಡಾಯವಾಗಿದ್ದರೂ ಜನ ಮಾತ್ರ ನಿಯಮ ಪಾಲಿಸುತ್ತಿಲ್ಲ. ಮತ್ತೊಂದು ಕಡೆ ಲಾಕ್ ಡೌನ್ ನಲ್ಲಿ ಬಡ ಟೈಲರಿಂಗ್ ಕುಟುಂಬಗಳು ಕಂಗಾಲಾಗಿವೆ. ಈ ಹಿನ್ನೆಲೆಯಲ್ಲಿ ಜನರ ಹಿತಕ್ಕಾಗಿ ಮಾಸ್ಟರ್ ಪ್ಲಾನ್ ಮೂಲಕ ಯಾದಗಿರಿ ಪೊಲೀಸ್ ಇಲಾಖೆ ವಿನೂತನ ಅಭಿಯಾನಕ್ಕೆ ಮುಂದಾಗಿದೆ.
ಹೌದು. ಯಾದಗಿರಿ ಪೊಲೀಸರು ಮಾಸ್ಕ್ ಧರಿಸದೇ ಮತ್ತು ಸಂಚಾರ ನಿಯಮಗಳನ್ನು ಪಾಲಿಸದ ವಾಹನ ಸವಾರರನ್ನು ಹಿಡಿದು ಅವರಿಗೆ ಬುದ್ಧಿವಾದ ಹೇಳಿ, ಅವರಿಗೆ ಮಾಸ್ಕ್ ಗಳನ್ನು ಮಾರಾಟ ಮಾಡುತ್ತಿದ್ದಾರೆ. ಹೀಗೆ ಪೊಲೀಸರು ಮಾರಾಟ ಮಾಡುತ್ತಿರುವ ಮಾಸ್ಕ್ ಗಳನ್ನು ಟೈಲರಿಂಗ್ ಮಾಡುವ ಬಡ ಮಹಿಳೆಯರು ಮತ್ತು ಸ್ವಸಹಾಯ ಗುಂಪುಗಳು ತಯಾರಿಸುತ್ತಿವೆ.
ಇವರ ಬದುಕಿಗೆ ಸ್ವಲ್ಪ ಪ್ರಮಾಣದಲ್ಲಿ ಆಸರೆಯಾಗುವ ನಿಟ್ಟಿನಲ್ಲಿ ಯಾದಗಿರಿ ಎಸ್.ಪಿ ಋಷಿಕೇಶ್ ಭಗವಾನ್ ಸೂಚನೆ ಮೇರೆಗೆ ಡಿವೈಎಸ್ ಪಿ ಶರಣಪ್ಪ ಮತ್ತು ಟ್ರಾಫಿಕ್ ವಿಭಾಗದ ಪಿಎಸ್ ಪ್ರದೀಪ್ ನಗರದ ವಿವಿಧ ವೃತ್ತಗಳಲ್ಲಿ ಸ್ವಸಹಾಯ ಸಂಘಗಳ ಸದಸ್ಯರ ಜೊತೆ ಪೇದೆಗಳನ್ನು ನಿಲ್ಲಿಸಿದ್ದಾರೆ.
ಈ ಮೂಲಕ ಸಂಚಾರ ನಿಯಮಗಳನ್ನು ಪಾಲಿಸದ ಮತ್ತು ಮಾಸ್ಕ್ ಧರಿಸದೆ ವಾಹನ ಚಲಾಯಿಸುವ ಸವಾರರನ್ನು ತಡೆದು ಅವರಿಗೆ ಬುದ್ಧಿವಾದ ಹೇಳಿ ಒಂದು ಕಡೆ ದಂಡ ವಿಧಿಸಿ ಮತ್ತೊಂದು ಕಡೆ ಸ್ವಸಹಾಯ ಗುಂಪುಗಳ ಮೂಲಕ ಮಾಸ್ಕ್ ಮಾರಾಟ ಮಾಡುತ್ತಿದ್ದಾರೆ.
ಇದರಿಂದ ಒಂದು ಕಡೆ ತಪ್ಪು ಮಾಡಿದ ವಾಹನ ಸವಾರರಿಗೆ ದಂಡ ಬಿದ್ದರೆ, ಮತ್ತೊಂದು ಕಡೆ ಸಂಕಷ್ಟದಲ್ಲಿರುವ ಸ್ವಸಹಾಯ ಗುಂಪುಗಳಿಗೆ ಜೀವನಕ್ಕೆ ಒಂದು ದಾರಿಯಾದಂತಾಗಿದೆ. ಪೊಲೀಸರ ಈ ಕಾರ್ಯಕ್ಕೆ ಜಿಲ್ಲೆಯಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.