ಯಾದಗಿರಿ: ಹನಿ ಟ್ರ್ಯಾಪ್ ತಂಡವನ್ನು ಯಾದಗಿರಿ ಜಿಲ್ಲೆಯ ಶಹಾಪೂರ ಪೊಲೀಸರು ಬಂಧಿಸಿದ್ದಾರೆ. ಸುಂದರಿಯರನ್ನು ಮುಂದೆ ಬಿಟ್ಟು ಶ್ರೀಮಂತರನ್ನ ಈ ಗ್ಯಾಂಗ್ ಟಾರ್ಗೆಟ್ ಮಾಡುತ್ತಿತ್ತು. ಶ್ರೀಮಂತ ವ್ಯಕ್ತಿ ಇವರ ಮೋಸದ ಬಲೆಗೆ ಬಿದ್ದ ಕೂಡಲೇ ಆತನಿಂದ ಹಣ ಪಡೆಯಲು ಈ ಖತರ್ನಾಕ್ ಗ್ಯಾಂಗ್ ಮುಂದಾಗುತ್ತಿತ್ತು.
ಖಾಸಗಿ ಶಾಲೆಯ ಶಿಕ್ಷಕ ರಮೇಶ್ ರಾಠೋಡ, ಸಿದ್ದನಗೌಡ ಪಾಟೀಲ, ಮಂಜುಳಾ ರಾಠೋಡ ಮತ್ತು ಮೇಘಾ ಬಂಧಿತರು. ಕಳೆದ ಕೆಲ ದಿನಗಳ ಹಿಂದೆ ಶಹಾಪುರ ಮೂಲದ ವ್ಯಕ್ತಿಯೊಬ್ಬನಿಗೆ ಫೋನ್ ಮೂಲಕ ಪರಿಚಯವಾಗಿದ್ದ ಮಂಜುಳಾ, ಪ್ರೀತಿ ಪ್ರಣಯದ ಮಾತನಾಡಿ ಖೆಡ್ಡಾಗೆ ಹಾಕಿಕೊಂಡಿದ್ದಳು. ಒಮ್ಮೆ ನಗರದ ಹೊರವಲಯದದಲ್ಲಿ ಭೇಟಿಯಾಗೋದಾಗಿ ಹೇಳಿ ವ್ಯಕ್ತಿಯನ್ನು ಮಂಜುಳಾ ಕರೆಸಿಕೊಂಡಿದ್ದಾಳೆ.
ಹುಡುಗಿ ಕರೆದಿದ್ದಕ್ಕೆ ಹೋಗಿದ್ದ ವ್ಯಕ್ತಿಯನ್ನು ಹಿಡಿದು ಸಿದ್ದನಗೌಡ ಮತ್ತು ಮೇಘಾ ಇಬ್ಬರು ವಿಡಿಯೋ ಮಾಡಿದ್ದಾರೆ. ನಂತರ ವಿಡಿಯೋವನ್ನು ತೋರಿಸಿ ಸಂತ್ರಸ್ತನಿಗೆ ಬೆದರಿಸಿ 8 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದರು. ಹೆದರಿದ ಸಂತ್ರಸ್ತ ಮೊದಲ ಕಂತಿನಲ್ಲಿ 1 ಲಕ್ಷ ರೂಪಾಯಿ ನೀಡಿದ್ದಾನೆ. ನಂತರ ವಿಷಯವನ್ನು ತನ್ನ ಪೊಲೀಸ್ ಸ್ನೇಹಿತನೊಬ್ಬನ ಜೊತೆ ಹೇಳಿಕೊಂಡಿದ್ದಾನೆ.
ಈ ವಿಚಾರವು ಶಹಾಪುರ ಡಿವೈಎಸ್‍ಪಿ ಶಿವನಗೌಡ ಪಾಟೀಲ ಕಿವಿಗೆ ಬಿದ್ದಿದೆ. ತಕ್ಷಣ ಕಾರ್ಯ ಪ್ರವೃತ್ತರಾದ ಪೊಲೀಸರ ತಂಡ ನಾಲ್ವರನ್ನು ಬಂಧಿಸಿದೆ. ಇನ್ನೂ ಈ ಕಿಲಾಡಿ ಹನಿ ಟ್ರ್ಯಾಪ್ ಗ್ಯಾಂಗ್ ನಗರದ ಅನೇಕರಿಂದ ಹಣ ವಸೂಲಿ ಮಾಡಿರುವ ಬಗ್ಗೆ ಸಂಶಯವಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.