ಯಾದಗಿರಿ: ಜಿಲ್ಲೆಯ ವಡಗೇರಾ ತಾಲೂಕಿನ ಗೋನಾಲ ಗ್ರಾಮದ ದುರ್ಗಾದೇವಿ ಮತ್ತು ಮಾಜಿ ಸಚಿವ ಡಿಕೆ ಶಿವಕುಮಾರ್ ನಡುವೆ ಭಕ್ತಿಯ ಸಂಬಂಧ ಇಡೀ ರಾಜ್ಯಕ್ಕೆ ಗೊತ್ತಿದೆ. ತನ್ನ ಕಷ್ಟಗಳನ್ನು ದೂರ ಮಾಡಿದ ಮಾತೆಗೆ ನಮಿಸಲು ಡಿಕೆಶಿ ಯಾದಗಿರಿಗೆ ಬರುತ್ತಿದ್ದಾರೆ.
ಈಗ ದುರ್ಗಾ ಮಾತೆಯ ಜಾತ್ರೆ ನಡೆಯುತ್ತಿದ್ದು, ಈ ಜಾತ್ರೆಗೂ ಡಿಕೆಶಿ ಬರುವುದು ಪಕ್ಕಾ ಆಗಿದೆ. ಕಳೆದ ಬಾರಿ ಜಾತ್ರೆ ಬರುವುದಾಗಿ ಮಾತು ಕೊಟ್ಟು ಕೊನೆಗಳಿಗೆಯಲ್ಲಿ ಮಾತು ತಪ್ಪಿದ್ದರು. ದೇವಿಗೆ ಮಾತು ಕೊಟ್ಟು ಬಾರದ ಕಾರಣ ಸಂಕಷ್ಟ ಎದುರಾಗಿತ್ತು ಎನ್ನುವ ಮಾತು ಇಲ್ಲಿ ಜನ ಆಡಿಕೊಳ್ಳುತ್ತಿದ್ದರು. ಜಾರಿ ನಿರ್ದೇಶನಾಲಯ (ಇಡಿ) ತಾತ್ಕಾಲಿಕ ರಿಲೀಫ್ ಸಿಕ್ಕ ಕೂಡಲೇ ದೇವಸ್ಥಾನದ ಅರ್ಚಕ ಮಹಾದೇವಪ್ಪ ಪೂಜಾರಿಗೆ ಕರೆ ಮಾಡಿ ಕೃತಜ್ಞತೆ ಸಲ್ಲಿಸಿದ್ದರು.
Advertisement
Advertisement
ಆಗ ಉಪ ಚುನಾವಣಾ ಪ್ರಚಾರದಲ್ಲಿದ್ದ ಡಿಕೆಶಿ, ಮಹಾದೇವಪ್ಪ ಪೂಜಾರಿಯವರನ್ನು ಬೆಂಗಳೂರಿನ ತಮ್ಮ ನಿವಾಸಕ್ಕೆ ಕರೆಯಿಸಿ ತಪ್ಪಿಗೆ ಕ್ಷಮೆ ಕೇಳಿ, ಈ ವರ್ಷದ ಜಾತ್ರೆ ಬರುವುದಾಗಿ ಮತ್ತೆ ಮಾತುಕೊಟ್ಟಿದ್ದರು. ಅದರಂತೆ ಡಿಕೆಶಿ ನಾಳೆ ಬೆಂಗಳೂರಿನ ಮೂಲಕ ಕಲಬುರಗಿಗೆ ವಿಮಾನದಲ್ಲಿ ಬಂದು, ಕಲಬುರಗಿಯಿಂದ ರಸ್ತೆಯ ಮೂಲಕ ಗೋನಾಲಕ್ಕೆ ಬರಲಿದ್ದಾರೆ. ಸುಮಾರು 7 ತಾಸು ದೇವಿಗೆ ಪೂಜೆ ಸಲ್ಲಿಸಲಿರುವ ಡಿಕೆಶಿ ಬಳಿಕ ರಾತ್ರಿ 10 ಗಂಟೆ ಸುಮಾರಿಗೆ ಮತ್ತೆ ಕಲಬುರಗಿಯತ್ತ ಪ್ರಯಾಣ ಬೆಳಸಲಿದ್ದಾರೆ.
Advertisement
ದೇವಿಗೆ ಡಿಕೆಶಿ ಪತ್ರ: ಇಡಿಯಿಂದ ತಾತ್ಕಾಲಿಕ ರಿಲೀಫ್ ಸಿಕ್ಕ ಹಿನ್ನೆಲೆ ಡಿ.ಕೆ ಶಿವಕುಮಾರ್ ಅವರು, ದುರ್ಗಾ ದೇವಿಗೆ ಪತ್ರದ ಮೂಲಕ ಕೃತಜ್ಞತೆ ಸಲ್ಲಿಸಿದ್ದರು. ದೇವಸ್ಥಾನ ಅರ್ಚಕ ಮಹಾದೇವಪ್ಪ ಅವರು ಬೆಂಗಳೂರಿಗೆ ಬಂದು ಡಿಕೆಶಿ ಅವರನ್ನು ಭೇಟಿಯಾಗಿದ್ದರು. ಈ ವೇಳೆ ಅರ್ಚಕರ ಕೈಯಲ್ಲಿ ಡಿಕೆಶಿ ಕೃತಜ್ಞತಾ ಪತ್ರ ನೀಡಿದ್ದರು. ಈಗ ದೇವಸ್ಥಾನಕ್ಕೆ ಬರಲು ಆಗುವುದಿಲ್ಲ. ಮುಂದಿನ ವರ್ಷದ ದೇವಿಯ ಜಾತ್ರೆಗೆ ಖಂಡಿತ ಬರುತ್ತೆನೆಂದು ಅರ್ಚಕರಿಗೆ ಮಾತು ಕೊಟ್ಟಿದ್ದರು. ಡಿಕೆಶಿ ಪತ್ರ ತಲುಪಿದ ಹಿನ್ನೆಲೆ ಪತ್ರದೊಂದಿಗೆ ದೇವಿಗೆ ವಿಶೇಷ ಪೂಜೆಯನ್ನು ಸಲ್ಲಿಸಲಾಗಿತ್ತು. ಡಿಕೆಶಿ ಅಭಿಮಾನಿಗಳು ಮತ್ತು ಮಾಜಿ ವಿಧಾನ ಪರಿಷತ್ ಸದಸ್ಯ ಚನ್ನಾರೆಡ್ಡಿ ತುನ್ನೂರ ಪೂಜೆಯಲ್ಲಿ ಭಾಗಿಯಾಗಿ ಡಿಕೆ ಶಿವಕುಮಾರ್ ಅವರಿಗೆ ಒಳಿತಾಗಲೆಂದು ದೇವಿಯಲ್ಲಿ ಪ್ರಾರ್ಥಿಸಿಕೊಂಡಿದ್ದರು.
Advertisement
ಬಹಳ ವರ್ಷಗಳಿಂದಲೂ ಈ ದೇವಿಯ ಪರಮ ಭಕ್ತರಾಗಿರುವ ಡಿಕೆಶಿ, ಈ ಹಿಂದೆ ತಮಗೆ ಸಂಕಷ್ಟ ಎದುರಾದಾಗ ಈ ದೇವಸ್ಥಾನ ಅರ್ಚಕರಿಂದ ತಮ್ಮ ಮನೆಯಲ್ಲಿ ವಿಶೇಷ ಪೂಜೆ ಮಾಡಿಸಿದ್ದರು. ಈಗ ಕೊಟ್ಟ ಮಾತಿನಂತೆ ಡಿಕೆಶಿ ನಾಳೆ ನಡೆಯಲಿರುವ ಜಾತ್ರೆಗೆ ಬರುತ್ತಿದ್ದಾರೆ.