ಯಾದಗಿರಿ: ಉದ್ದೇಶಿತ ಮೆಡಿಕಲ್ ಕಾಲೇಜು ಸ್ಥಾಪನೆಗೆ ಆಗ್ರಹಿಸಿ ಇಂದು ಯಾದಗಿರಿ ನಗರದಲ್ಲಿ ಸಂಪೂರ್ಣ ಬಂದ್ ಕರೆ ನೀಡಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಬಿಜೆಪಿ ಶಾಸಕ ವೆಂಕಟಗೌಡ ಮುದ್ನಾಳ್ ಕರೆ ನೀಡಿರುವ ಈ ಬಂದ್‍ಗೆ ಕನ್ನಡಪರ ಸಂಘಟನೆ ಸೇರಿದಂತೆ ಒಟ್ಟು 61 ಸಂಘಟನೆಗಳು ಬಂದ್ ಬೆಂಬಲ ನೀಡಿವೆ. ಸ್ವಯಂ ಪ್ರೇರಿತರಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ವರ್ತಕರು ಸಹ ಬಂದ್‍ಗೆ ಕೈ ಜೋಡಿಸಿದ್ದು, ನಗರದಲ್ಲಿ ವ್ಯಾಪಾರ- ವಹಿವಾಟು, ಆಟೋ ಮತ್ತು ಸರ್ಕಾರಿ ಬಸ್ ಗಳ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.
ಜಿಲ್ಲಾ ಬಿಜೆಪಿ ಮತ್ತು ಬಂದ್‍ಗೆ ಬೆಂಬಲ ನೀಡಿರುವ ವಿವಿಧ ಸಂಘಟನೆಗಳಿಂದ, ನಗರದ ಮೈಲಾಪುರ ಬೇಸ್ನಿಂದ ನಗರ ಸಭೆವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸುತ್ತಿದ್ದು, ಈ ಮೆರವಣಿಗೆಯಲ್ಲಿ ಸಾವಿರಾರು ಪ್ರತಿಭಟನಾಕಾರರು ಪಾಲ್ಗೊಂಡಿದ್ದಾರೆ.
ಕಳೆದ ತಿಂಗಳು ಜಿಲ್ಲೆಯ ಚಂಡರಕಿ ಗ್ರಾಮದಲ್ಲಿ ವಾಸ್ತವ್ಯ ಮಾಡಿದ್ದ ಮುಖ್ಯಮಂತ್ರಿಗಳೂ ಈಗಾಗಲೇ ಜಿಲ್ಲೆಗೆ ಮಂಜೂರಾಗಿರುವ ಮೆಡಿಕಲ್ ಕಾಲೇಜು ರದ್ದುಪಡಿಸಿ, 300 ಬೆಡ್ ಆಸ್ಪತ್ರೆ ಘೋಷಣೆ ಮಾಡಿದ್ದರು. ಅಲ್ಲದೆ ಇಲ್ಲಿ ಮೆಡಿಕಲ್ ಕಾಲೇಜು ನಿರ್ಮಾಣ ಮಾಡಿದರೆ ಅದು ಜಿಲ್ಲೆಯ ಜನರಿಗಿಂತ ಹೊರಗಿನವರಿಗೆ ಅನುಕೂಲವಾಗತ್ತದೆ ಎಂಬ ಹೇಳಿಕೆ ಸಹ ನೀಡಿದ್ದರು.
ಮುಖ್ಯಮಂತ್ರಿಗಳ ಈ ಹೇಳಿಕೆಯಿಂದ ಅಸಮಾಧಾನಗೊಂಡಿರುವ ಸ್ಥಳೀಯ ಬಿಜೆಪಿ ಶಾಸಕ ವೆಂಕಟರೆಡ್ಡಿ ಮುದ್ನಾಳ ಮತ್ತು ವಿವಿಧ ಸಂಘಟನೆಗಳು ಇಂದು ಬಂದ್‍ಗೆ ಕರೆ ನೀಡಿವೆ.