ಬಾಲಿವುಡ್ ಖ್ಯಾತ ನಿರ್ಮಾಪಕಿ ಹಾಗೂ ನಿರ್ದೇಶಕಿ ಏಕ್ತಾ ಕಪೂರ್ (Ekta Kapoor) ಬಂಧನಕ್ಕೆ ಬಿಹಾರ ಕೋರ್ಟ್ ವಾರೆಂಟ್ ಜಾರಿ ಮಾಡಿದೆ. ಸಮನ್ಸ್ ಜಾರಿಯಾದರೂ ಏಕ್ತಾ ಹಾಜರಾಗದ ಹಿನ್ನೆಲೆಯಲ್ಲಿ ನ್ಯಾ.ವಿಕಾಸ್ ಕುಮಾರ್ ಅವರು ಬಂಧನದ ವಾರೆಂಟ್ ಜಾರಿ ಮಾಡಿದ್ದಾರೆ. ಕೇವಲ ಏಕ್ತಾ ಕಪೂರ್ ಮಾತ್ರವಲ್ಲ, ಅವರ ತಾಯಿ ಶೋಭಾ ಕಪೂರ್ (Shobha Kapoor) ಮೇಲೂ ಬಂಧನದ (Arrest) ವಾರೆಂಟ್ ಜಾರಿಯಾಗಿದೆ.
ಏಕ್ತಾ ಕಪೂರ್ ಅವರ ಬಾಲಾಜೀ ಬ್ಯಾನರ್ ಅಡಿ ‘ಎಕ್ಸ್.ಎಕ್ಸ್.ಎಕ್ಸ್’ ವೆಬ್ ಸೀರಿಸ್ ತಯಾರಾಗಿದ್ದು, ಈ ಸರಣಿಯಲ್ಲಿ ಯೋಧರಿಗೆ ಅವಮಾನ ಮಾಡಲಾಗಿದೆ ಎಂದು ಮತ್ತು ಯೋಧರ ಕುಟುಂಬದ ಭಾವನೆಗಳಿಗೆ ಘಾಸಿ ಮಾಡಲಾಗಿದೆ ಎನ್ನುವ ಕಾರಣಕ್ಕಾಗಿ ನಿವೃತ್ತ ಸೈನಿಕ ಶಂಭು ಕುಮಾರ್ ಅವರು ಏಕ್ತಾ ಕುಟುಂಬದ ಮೇಲೆ ದೂರು ದಾಖಲಿಸಿದ್ದರು. 2020ರಲ್ಲಿ ಬಿಹಾರದಲ್ಲಿ (Bihar) ದೂರು ದಾಖಲಾಗಿತ್ತು. ಏಕ್ತಾ ಮತ್ತು ಅವರ ತಾಯಿಗೆ ಸಮನ್ಸ್ ಕೂಡ ಜಾರಿ ಮಾಡಿದ್ದರು. ಇದನ್ನೂ ಓದಿ:ಯುವ ದಸರಾದಲ್ಲಿ ಅಪ್ಪು ನಮನ- ಗಂಧದ ಗುಡಿ ಟೀಸರ್ ನೋಡಿ ಕಣ್ಣೀರಿಟ್ಟ ಅಶ್ವಿನಿ
ದೂರಿನ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡುವಂತೆ ಕೋರ್ಟ್ ಸಮನ್ಸ್ ಜಾರಿ ಮಾಡಿದ್ದರೂ, ಏಕ್ತಾ ಕೋರ್ಟಿಗೆ ಹಾಜರಾಗಿರಲಿಲ್ಲ. ಅಲ್ಲದೇ, ಸೀರಿಸ್ ಬಗ್ಗೆ ಆಕ್ಷೇಪನೆ ಮತ್ತು ವಿರೋಧದ ಹಿನ್ನೆಲೆಯಲ್ಲಿ ಕೆಲವು ದೃಶ್ಯಗಳನ್ನು ಡಿಲಿಟ್ ಕೂಡ ಮಾಡಲಾಗಿತ್ತು. ಇಷ್ಟೆಲ್ಲ ಮಾಡಿದ ನಂತರ ಸ್ಪಷ್ಟನೆ ಅಗತ್ಯವಿಲ್ಲ ಎನ್ನುವ ನಿರ್ಧಾರಕ್ಕೆ ಅವರು ಬಂದಿದ್ದರು ಎಂದು ಹೇಳಲಾಗುತ್ತಿದೆ. ಆದರೆ, ಕೋರ್ಟ್ ಗೆ ಹಾಜರಾಗದ ಹಿನ್ನೆಯಲ್ಲಿ ವಾರೆಂಟ್ (Warrant) ಜಾರಿ ಮಾಡಲಾಗಿದೆ ಎಂದು ವಕೀಲರು ಸ್ಪಷ್ಟನೆ ನೀಡಿದ್ದಾರೆ.
ಕಿರುತೆರೆಯ ಹೆಸರಾಂತ ನಿರ್ಮಾಪಕಿ ಹಾಗೂ ನಿರ್ದೇಶಕಿಯೂ ಆಗಿರುವ ಏಕ್ತಾ ಕಪೂರ್, ತಮ್ಮ ಬಾಲಾಜಿ ಟೆಲಿಫಿಲ್ಮ್ಸ್ (Balaji Tele Films) ಮೂಲಕ ಸಾಕಷ್ಟು ಧಾರಾವಾಹಿಗಳನ್ನು ಮತ್ತು ವೆಬ್ ಸೀರಿಸ್ ನೀಡಿದ್ದಾರೆ. ಸಾಕಷ್ಟು ಯುವ ನಟರನ್ನು ಕಿರುತೆರೆ ಲೋಕಕ್ಕೆ ಪರಿಚಯಿಸಿದ್ದಾರೆ. ಅಲ್ಲದೇ, ಅನೇಕ ದೂರುಗಳನ್ನೂ ಅವರು ಈಗಾಗಲೇ ಎದುರಿಸಿದ್ದಾರೆ. ಈಗ ವಾರೆಂಟ್ ಕಾರಣದಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ.