ಮುಂಬೈ: ನ್ಯೂಜಿಲೆಂಡ್ (New Zealand) ವಿರುದ್ಧ ನಡೆದ ಟೆಸ್ಟ್ ಸರಣಿಯಲ್ಲಿ ಹೀನಾಯ ಸೋಲು ಕಂಡ ಬೆನ್ನಲ್ಲೇ ಟೀಂ ಇಂಡಿಯಾ (Team India) ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ (WTC Points Table) ನಂ.1 ಸ್ಥಾನ ಕಳೆದುಕೊಂಡಿದೆ.
12 ಪಂದ್ಯಗಳಲ್ಲಿ 62.50 ಪಿಸಿಟಿ (Percentage Of Points Earned) ಪಡೆದಿರುವ ಆಸ್ಟ್ರೇಲಿಯಾ ತಂಡ ಮತ್ತೆ ಅಗ್ರಸ್ಥಾನಕ್ಕೆ ಏರಿದ್ದು, 14 ಪಂದ್ಯಗಳಲ್ಲಿ 58.33 ಪಿಸಿಟಿ ಪಡೆದಿರುವ ಟೀಂ ಇಂಡಿಯಾ 2ನೇ ಸ್ಥಾನಕ್ಕೆ ಕುಸಿದಿದೆ. ಇನ್ನೂ 3, 4 ಮತ್ತು 5ನೇ ಸ್ಥಾನಗಳಲ್ಲಿ ಕ್ರಮವಾಗಿ ಶ್ರೀಲಂಕಾ, ನ್ಯೂಜಿಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಸ್ಥಾನ ಪಡೆದುಕೊಂಡಿವೆ. ಇದನ್ನೂ ಓದಿ: 24 ವರ್ಷಗಳ ಬಳಿಕ ತವರಿನಲ್ಲಿ ಭಾರತ ವೈಟ್‌ವಾಶ್ – ಸರಣಿ ಗೆದ್ದು ಇತಿಹಾಸ ಸೃಷ್ಟಿಸಿದ ಕಿವೀಸ್
Advertisement
Advertisement
WTC ಟಾಪ್-5 ತಂಡಗಳು:
ಆಸ್ಟ್ರೇಲಿಯಾ – 12 ಪಂದ್ಯ – 62.50 ಪಿಸಿಟಿ
ಭಾರತ – 14 ಪಂದ್ಯ – 58.33 ಪಿಸಿಟಿ
ಶ್ರೀಲಂಕಾ – 9 ಪಂದ್ಯ – 55.56 ಪಿಸಿಟಿ
ನ್ಯೂಜಿಲೆಂಡ್ – 11 ಪಂದ್ಯ – 54.55 ಪಿಸಿಟಿ
ದಕ್ಷಿಣ ಆಫ್ರಿಕಾ – 8 ಪಂದ್ಯ – 54.17 ಪಿಸಿಟಿ
Advertisement
24 ವರ್ಷಗಳ ಬಳಿಕ ತವರಿನಲ್ಲಿ ವೈಟ್‌ವಾಶ್:
ನ್ಯೂಜಿಲೆಂಡ್ ವಿರುದ್ಧ ನಡೆದ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ಹೀನಾಯ ಸೋಲು ಕಂಡಿದೆ. ಈ ಸೋಲಿನೊಂದಿಗೆ 24 ವರ್ಷಗಳ ಬಳಿಕ ತವರಿನಲ್ಲಿ ಸರಣಿ ಸೋತ ಅಪಖ್ಯಾತಿಯನ್ನು ಹೆಗಲಿಗೇರಿಸಿಕೊಂಡಿದೆ. ಕೊನೆಯದ್ದಾಗಿ ಭಾರತ 2000 ಇಸವಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ವೈಟ್‌ವಾಶ್ ಆಗಿತ್ತು. ಇದನ್ನೂ ಓದಿ: 6,6,6,6,6,W,6 – ಒಂದೇ ಓವರ್‌ನಲ್ಲಿ 37 ರನ್ ಬಿಟ್ಟುಕೊಟ್ಟ ರಾಬಿನ್ ಉತ್ತಪ್ಪ!
Advertisement
ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ 3ನೇ ಟೆಸ್ಟ್ ಪಂದ್ಯದಲ್ಲಿ ಕಿವೀಸ್ ಭಾರತದ ವಿರುದ್ಧ 26 ರನ್‌ಗಳ ಅಮೋಘ ಜಯ ಸಾಧಿಸಿ, ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು ಕ್ಲೀನ್‌ಸ್ವೀಪ್ ಮಾಡಿದೆ. ಈ ಮೂಲಕ ಭಾರತದಲ್ಲಿ 3 ಅಥವಾ ಅದಕ್ಕಿಂತ ಹೆಚ್ಚಿನ ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ ತಂಡವನ್ನು ವೈಟ್‌ವಾಶ್ ಮಾಡಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
147 ರನ್‌ಗಳ ಗುರಿ ಬೆನ್ನಟ್ಟಿದ ಭಾರತ ಆರಂಭದಲ್ಲೇ ಪ್ರಮುಖ ವಿಕೆಟ್ ಕಳೆದುಕೊಂಡು ಹಿನ್ನಡೆ ಅನುಭವಿಸಿತು. ನಾಯಕ ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ವಿರಾಟ್ ಕೊಹ್ಲಿ ಅಲ್ಪಮೊತ್ತಕ್ಕೆ ಔಟಾಗಿ ಪೆವಿಲಿಯನ್ ಪರೇಡ್ ನಡೆಸಿದರು. ಅಗ್ರ ಕ್ರಮಾಂಕದ ಬ್ಯಾಟರ್‌ಗಳು ಅಲ್ಪಮೊತ್ತಕ್ಕೆ ಔಟಾಗಿದ್ದು ತಂಡಕ್ಕೆ ಭಾರಿ ಆಘಾತ ನೀಡಿತು.
ಪಂತ್ ಬಳಿಕ ಟೀಂ ಇಂಡಿಯಾ ಪಥನ:
ಪ್ರಮುಖ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಟೀಂ ಇಂಡಿಯಾಗೆ ರಿಷಭ್ ಪಂತ್ ಆಸರೆಯಾದರು. ಕ್ರೀಸ್‌ನಲ್ಲಿ ಭದ್ರವಾಗಿ ನೆಲೆಯೂರಿದ ಪಂತ್ 57 ಎಸೆತಗಳಲ್ಲಿ 64 ರನ್ (9 ಬೌಂಡರಿ, 1 ಸಿಕ್ಸರ್) ಗಳಿಸಿದ್ದರು. ಈ ವೇಳೆ ಸುಲಭವಾಗಿ ಕೀಪರ್ ಕ್ಯಾಚ್‌ಗೆ ತುತ್ತಾದರು. ಪಂತ್ ಔಟಾದ ಬೆನ್ನಲ್ಲೇ ಅಶ್ವಿನ್, ಆಕಾಶ್ ದೀಪ್, ವಾಷಿಂಗ್ಟನ್ ಸುಂದರ್ ಬ್ಯಾಕ್ ಟು ಬ್ಯಾಕ್ ವಿಕೆಟ್ ಒಪ್ಪಿಸಿದರು. ಇದರೊಂದಿಗೆ ಟೀಂ ಇಂಡಿಯಾ 121 ರನ್‌ಗಳಿಗೆ ಸರ್ವಪತನ ಕಂಡಿತು.
ಆಜಾಜ್ ಪಟೇಲ್ ಸ್ಪಿನ್ ದಾಳಿಗೆ ತತ್ತರ:
ಭಾರತೀಯ ಬ್ಯಾಟರ್‌ಗಳ ಎದುರು ಬಿಗಿ ಹಿಡಿತ ಸಾಧಿಸಿದ ಎಡಗೈ ಸ್ಪಿನ್ನರ್ ಆಜಾಜ್ ಪಟೇಲ್ 14.1 ಓವರ್‌ಗಳಲ್ಲಿ 57 ರನ್ ಬಿಟ್ಟುಕೊಟ್ಟು 6 ವಿಕೆಟ್ ಪಡೆದು ಮಿಂಚಿದರು. ಇದರೊಂದಿಗೆ ಗ್ಲೆನ್ ಫಿಲಿಪ್ಸ್ 3 ವಿಕೆಟ್ ಹಾಗೂ ಮ್ಯಾಟ್ ಹೆನ್ರಿ 1 ವಿಕೆಟ್ ಕಿತ್ತರು.
147 ರನ್ ಗುರಿ ನೀಡಿದ್ದ ಕಿವೀಸ್:
2ನೇ ದಿನದ ಅಂತ್ಯಕ್ಕೆ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಕಿವೀಸ್ 9 ವಿಕೆಟ್‌ಗೆ 171 ರನ್‌ಗಳಿಸಿತ್ತು. 3ನೇ ದಿನ 143 ರನ್‌ಗಳ ಮುನ್ನಡೆಯೊಂದಿಗೆ ಕ್ರೀಸ್ ಆರಂಭಿಸಿದ್ದ ನ್ಯೂಜಿಲೆಂಡ್ 2ನೇ ಇನ್ನಿಂಗ್ಸ್‌ನಲ್ಲಿ 174 ರನ್‌ಗಳಿಗೆ ಆಲೌಟ್ ಆಯಿತು. ಈ ಮೂಲಕ ಭಾರತಕ್ಕೆ 147 ರನ್‌ಗಳ ಗುರಿ ನೀಡಿತ್ತು.
2ನೇ ಇನ್ನಿಂಗ್ಸ್‌ನಲ್ಲಿ ಟೀಂ ಇಂಡಿಯಾ ಪರ ರವೀಂದ್ರ ಜಡೇಜಾ 5 ವಿಕೆಟ್, ಅಶ್ವಿನ್ 3 ವಿಕೆಟ್, ಆಕಾಶ್ ದೀಪ್ ಮತ್ತು ವಾಷಿಂಗ್ಟನ್ ಸುಂದರ್ ತಲಾ ಒಂದೊಂದು ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್:
ಮೊದಲ ಇನ್ನಿಂಗ್ಸ್
ನ್ಯೂಜಿಲೆಂಡ್ – 235/10, ಭಾರತ – 236/10
2ನೇ ಇನ್ನಿಂಗ್ಸ್
ನ್ಯೂಜಿಲೆಂಡ್ – 174/10, ಭಾರತ – 121/10