– ಕಾಂಗ್ರೆಸ್, ಸಿಎಂ ಪರ ಅಲ್ಲ.. ರಾಜ್ಯಪಾಲರ ವಿರುದ್ಧ ನಮ್ಮ ಹೋರಾಟ: ಪ್ರೊ.ಮರುಳ ಸಿದ್ದಪ್ಪ
ಬೆಂಗಳೂರು: ಸಿಎಂ ಸಿದ್ದರಾಮಯ್ಯ (Siddaramaiah) ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ನಡೆಗೆ ಸಾಹಿತಿಗಳು ಆಕ್ರೋಶ ಹೊರಹಾಕಿದ್ದಾರೆ. ರಾಜ್ಯಪಾಲರ (Governor) ಕ್ರಮದ ವಿರುದ್ಧ ಪ್ರತಿಭಟನೆಗೆ ಕರೆ ನೀಡಿದ್ದಾರೆ.
ನಗರದ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಲಿದ್ದು, ಎಸ್.ಜಿ.ಸಿದ್ದರಾಮಯ್ಯ ಸೇರಿದಂತೆ ಅನೇಕ ಸಾಹಿತಿಗಳು ಪಾಲ್ಗೊಳ್ಳಲಿದ್ದಾರೆ. ನಟ ಹಾಗೂ ಎಎಪಿ ನಾಯಕ ಮುಖ್ಯಮಂತ್ರಿ ಚಂದ್ರು ಕೂಡ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ. ಇದನ್ನೂ ಓದಿ: MUDA Scam | ಇಂದಿನಿಂದ ಕಾನೂನು ಸಮರ ಆರಂಭ – ಸಿಎಂ ಪರ ವಾದ ಏನು?
ಈ ಕುರಿತು ಸಾಹಿತಿ ಪ್ರೊ.ಮರುಳು ಸಿದ್ದಪ್ಪ ಮಾತನಾಡಿ, ದೇಶದ ಹಿತಾಸಕ್ತಿಗಿಂತ ಪಕ್ಷದ ಹಿತಾಸಕ್ತಿ ಮುಖ್ಯ ಅನ್ನುವ ರೀತಿಯಲ್ಲಿ ಈ ಪ್ರಕರಣ ನಡೀತಿದೆ. ಸಿಎಂ ಸಿದ್ದರಾಮಯ್ಯನವರ ಪಾತ್ರ ಮುಡಾ ಪ್ರಕರಣದಲ್ಲಿ ಇಲ್ಲ. ಏನೇ ಕ್ರಮ ಇದ್ದರೂ ಮುಡಾ ಮೇಲೆ ತೆಗೆದುಕೊಳ್ಳಬೇಕು, ಬಿಜೆಪಿ ಮೇಲೆ ತಗೋಬೇಕು. ಮುಡಾದಲ್ಲಿ ಸಿದ್ದರಾಮಯ್ಯನವರ ಶ್ರೀಮತಿಯವರ ತಪ್ಪಿಲ್ಲ. ನೇರಾ ಮುಖ್ಯಮಂತ್ರಿಗಳಿಗೆ ಇದು ಸಂಬಂಧಿಸಿಲ್ಲ. ಹೀಗಿರುವಾಗ ರಾಜ್ಯಪಾಲರು ತಪ್ಪು ನಡೆ ಮಾಡಿದ್ದಾರೆ. ಇದು ದುರದೃಷ್ಟಕರ ವಿಚಾರ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಸಂವಿಧಾನಕ್ಕೆ ಅರ್ಥವಿಲ್ಲದಂತಾಗಿದೆ. ಅಂಬೇಡ್ಕರ್ ಅವರು ಪಟ್ಟ ಅನುಮಾನ ಇವತ್ತು ನಿಜ ಆಗ್ತಿದೆ. ರಾಜ್ಯಪಾಲರ ನಡೆ ಖಂಡಿಸಿ ನಾವು ಪ್ರತಿಭಟನೆ ನಡೆಸುತ್ತಿದ್ದೇವೆ. ಪಕ್ಷದ ಪರವಾಗಿ ವಕ್ತಾರರ ರೀತಿಯಲ್ಲಿ ರಾಜ್ಯಪಾಲರು ವರ್ತಿಸ್ತಿದ್ದಾರೆ. ಆರೋಪ ಮುಕ್ತ ಆಗಬೇಕಿರೋದು ಅವತ್ತಿನ ಮುಡಾ, ಬಿಜೆಪಿ ಅವರು ವಿನಃ ಸಿದ್ದರಾಮಯ್ಯನವರು ಅಲ್ಲ. ಚುನಾವಣೆ ಮೂಲಕ ಎಲೆಕ್ಟ್ ಆಗಲು ಬಿಜೆಪಿಗೆ ಸಾಮರ್ಥ್ಯ ಇಲ್ಲ. ಹೀಗಾಗಿ ವಾಮ ಮಾರ್ಗವನ್ನು ಬಿಜೆಪಿ ಹಿಡಿದಿದೆ. ಜನರಲ್ಲಿ ಸಿಎಂ ಬಗೆಗಿನ ತಪ್ಪು ಕಲ್ಪನೆ ತರಲು ಹೀಗೆ ಮಾಡಲಾಗ್ತಿದೆ. ಕಾಂಗ್ರೆಸ್ ಹಾಗೂ ಸಿಎಂ ಪರ ಅಲ್ಲ, ರಾಜ್ಯಪಾಲರ ವಿರುದ್ಧ ನಮ್ಮ ಹೋರಾಟ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಅಂದು ಯಡಿಯೂರಪ್ಪ, ಇಂದು ಸಿದ್ದರಾಮಯ್ಯ – ಸಿಎಂಗೆ ಕಂಟಕವಾದ `ಮೈತ್ರಿ’ ಪಾದಯಾತ್ರೆ
ಸಾಹಿತಿಗಳಾದ ಚಂದ್ರಶೇಖರ ತಾಳಿಯ, ಬಂಜಗೆರೆ ಜಯಪ್ರಕಾಶ್, ಪ್ರೊ.ಜಾಫೆಟ್, ಲಕ್ಷ್ಮಣ್ ಕೊಡಸೆ, ಜಾಣಗೆರೆ ವೆಂಕಟರಾಮಯ್ಯ, ರುದ್ರಪ್ಪ ಅನಗವಾಡಿ, ಮಾನಸ, ಪ್ರೊ.ಚನ್ನಪ್ಪ ಕಟ್ಟಿ, ನಾಗರಾಜ್ ಮೂರ್ತಿ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ.